Site icon Vistara News

Ganesh Chaturthi: ಮೂವರು ಮಾಜಿ ಸಿಎಂಗಳ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ; ಶುಭ ಕೋರಿದ ಸಿಎಂ

Former CM HD Kumaraswamy celebrates Ganesh festival at his residence

ಬೆಂಗಳೂರು: ರಾಜ್ಯಾದ್ಯಂತ ಗಣೇಶ ಚತುರ್ಥಿಯನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಗಿದೆ. ದೇವಾಲಯಗಳು, ಮನೆಗಳಲ್ಲಿ ವಿವಿಧ ಮಾದರಿಯ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ಈ ನಡುವೆ ಮಾಜಿ ಸಿಎಂಗಳಾದ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ ಸೇರಿ ವಿವಿಧ ರಾಜಕೀಯ ನಾಯಕರ ಮನೆಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಟುಂಬಸ್ಥರೊಂದಿಗೆ ಮಾಜಿ ಸಿಎಂ ಎಚ್‌ಡಿಕೆ ಅವರು ವಿಘ್ನ ವಿನಾಶಕನಿಗೆ ಪೂಜೆ ಸಲ್ಲಿಸಿದರು.

ಶ್ರೀ ವಿನಾಯಕ ಚತುರ್ಥಿಯ ಅಂಗವಾಗಿ ಸ್ವಗೃಹದಲ್ಲಿ ಕುಟುಂಬ ಸದಸ್ಯರೊಂದಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ಇನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಮಲ್ಲೇಶ್ವರದ ಶ್ರೀ ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ | Ganesh Chaturthi: ಗಣೇಶನಿಗೆ ಇವೆ 108 ಹೆಸರುಗಳು! ಪ್ರತಿ ಹೆಸರಿನ ಅರ್ಥವೂ ವಿಶೇಷ!

ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಅವರು ಶುಭಾಶಯ ಕೋರಿದ್ದಾರೆ. ವಿಘ್ನನಿವಾರಕ ಗಣೇಶನು ಸರ್ವ ಸಂಕಷ್ಟಗಳನ್ನು ದೂರಮಾಡಿ ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಶಾಶ್ವತವಾಗಿ ನೆಲೆಸುವಂತೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. ಸಂಭ್ರಮದ ಈ ಹಬ್ಬವು ಪರಿಸರಸ್ನೇಹಿಯೂ ಆಗಿರಲಿ. ನಾಡಬಾಂಧವರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಟ್ವೀಟ್‌ ಮಾಡಿದ್ದಾರೆ.

Exit mobile version