ಹಳಿಯಾಳ: ರಾಜ್ಯದ ಹಿರಿಯ ರಾಜಕಾರಣಿ ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಬುಧವಾರ ತಮ್ಮ ಹುಟ್ಟೂರು ಹಳಿಯಾಳದ ಸ್ವಗೃಹದಲ್ಲಿ ಶ್ರೀಗಣೇಶ ಚತುರ್ಥಿಯನ್ನು (Ganesha Chaturti 2022) ಕುಟುಂಬ ಸಮೇತ ಸಂಭ್ರಮದೊಂದಿಗೆ ಆಚರಣೆ ಮಾಡಿದರು.
ಕುಟುಂಬದವರೊಂದಿಗೆ ಸ್ವತಃ ಮಾರುಕಟ್ಟೆಗೆ ತೆರಳಿದ ದೇಶಪಾಂಡೆ ಅವರು, ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನು ಖರೀದಿಸಿ ಮೆರವಣಿಗೆ ಮೂಲಕ ತಮ್ಮ ನಿವಾಸಕ್ಕೆ ಬರಮಾಡಿಕೊಂಡರು. ಬಳಿಕ ಮನೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಮೂಲಕ ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾದರು.
ಪೂಜೆ ಬಳಿಕ ಮಾತನಾಡಿದ ಆರ್.ವಿ. ದೇಶಪಾಂಡೆ, ಗಣೇಶ ಎಂದರೆ ಸಂಕಷ್ಟ ನಿವಾರಕ. ಎಲ್ಲರ ಕಷ್ಟವನ್ನು, ನೋವುಗನ್ನು ನಿವಾರಣೆ ಮಾಡುವ ದೇವರಾಗಿದ್ದಾನೆ. ಹಾಗಾಗಿ ಎಲ್ಲರೂ ಗಣೇಶನನ್ನು ಸಂಭ್ರಮಾಚರಣೆಯೊಂದಿಗೆ ಮನೆಗೆ ಬರಮಾಡಿಕೊಂಡು ಪ್ರತಿಷ್ಠಾಪಿಸಿ, ಪೂಜಿಸುತ್ತಾರೆ. ಇದು ಒಗ್ಗಟ್ಟಿನ ಸೂಚಕವಾಗಿದೆ ಎಂದು ಹೇಳಿದರು.
ದೇಶದ ಸರ್ವಾಂಗೀಣ ಪ್ರಗತಿಯಾಗಬೇಕಿದ್ದರೆ ಎಲ್ಲ ಧರ್ಮ, ಜಾತಿಯವರು ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಆ ದಿಸೆಯಲ್ಲಿ ಸರ್ವರೂ ಹೆಜ್ಜೆಯಿಡಬೇಕಾಗುತ್ತದೆ. ಶ್ರೀ ವಿನಾಯಕನು ಸರ್ವರಿಗೂ ನ್ಯಾಯವನ್ನು ಒದಗಿಸುವ ಮೂಲಕ ಸುಖ-ಸಮೃದ್ಧಿಯನ್ನು ದಯಪಾಲಿಸಲಿ. ಎಲ್ಲರೂ ಪ್ರೀತಿ ವಿಶ್ವಾಸದಿಂದ ಬಾಳುವಂತಹ ವಾತಾವರಣ ಸೃಷ್ಟಿಯಾಗಲಿ ಎಂದು ಗಣೇಶನಲ್ಲಿ ಪ್ರಾರ್ಥಿಸಿದ್ದೇನೆ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು ಎಂದು ವಿಡಿಯೊ ಹೇಳಿಕೆ ಮೂಲಕ ದೇಶಪಾಂಡೆ ಶುಭ ಹಾರೈಸಿದ್ದಾರೆ.
ದೇಶಪಾಂಡೆ ಅವರ ಪತ್ನಿ ರಾದಾಬಾಯಿ ದೇಶಪಾಂಡೆ ಹಾಗೂ ಪುತ್ರರಾದ ಪ್ರಸಾದ್, ಪ್ರಶಾಂತ್ ದೇಶಪಾಂಡೆ ಮತ್ತವರ ಕುಟುಂಬದವರು, ಕಾಂಗ್ರೆಸ್ ಮುಖಂಡರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ವೇಳೆ ಹಾಜರಿದ್ದರು.
ಇದನ್ನೂ ಓದಿ| Ganesh Chaturthi | ಗಣೇಶ ಪೂಜಾ ಮಂಟಪದಲ್ಲಿ ಸಾವರ್ಕರ್ ಹವಾ, ಭಾವಚಿತ್ರ, ಜೀವನಕಥೆ ಪುಸ್ತಕ ವಿತರಣೆ