Site icon Vistara News

Ganesha Festival : ಗಣೇಶ ಕೂರಿಸುವ ವಿಚಾರಕ್ಕೆ ಕಿರಿಕ್‌; ಯುವಕನಿಗೆ ಚಾಕು ಇರಿತ

Ganesha Festival Assault Case in Bengaluru, Suman arrested

ಬೆಂಗಳೂರು: ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ (Ganesha Festival) ಏರಿಯಾ ಹುಡುಗರ ತಯಾರಿ ಜೋರಾಗಿ ನಡಿತಿದೆ. ಈ ಮಧ್ಯೆ ಗಣೇಶ ಕೂರಿಸುವ ವಿಚಾರಕ್ಕೆ ಕಿರಿಕ್‌ ತೆಗೆದಿದ್ದು, ಯುವಕನೊಬ್ಬನಿಗೆ ಚಾಕು (Assault Case) ಇರಿಯಲಾಗಿದೆ. ಸುಮನ್‌ ಎಂಬಾತ ಅಜಿತ್ ಎಂಬುವವನಿಗೆ ಚಾಕು ಇರಿದಿದ್ದಾನೆ.

ಸುಮನ್ ಮತ್ತು ಅಜಿತ್ ಇಬ್ಬರು ಪರಿಚಿತರೇ ಆಗಿದ್ದು, ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಧರ್ಮರಾಯ ಸ್ವಾಮಿ ದೇವಾಲಯ ಬಳಿ ಭೇಟಿಯಾಗಿದ್ದಾರೆ. ಏರಿಯಾದಲ್ಲಿ ಯಾವ ರೀತಿ ಗಣೇಶ ಕೂರಿಸಬೇಕು ಎಂಬುದರ ಕುರಿತು ಇಬ್ಬರ ನಡುವೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಮಾತುಕತೆಯು ಗಲಾಟೆಗೆ ತಿರುಗಿದ್ದು, ಈ ವೇಳೆ ಸಿಟ್ಟಿಗೆದ್ದ ಸುಮನ್‌ ಚಾಕು ತೆಗೆದು ಅಜಿತ್‌ಗೆ ಮನಬಂದಂತೆ ಚುಚ್ಚಿ ಗಾಯ ಮಾಡಿದ್ದಾನೆ.

ಎದೆ, ಕುತ್ತಿಗೆ, ಬೆನ್ನು ಸೇರಿ ಐದಾರು ಕಡೆ ಚಾಕು ಇರಿದಿದ್ದಾನೆ. ಗಂಭೀರ ಗಾಯಾಗೊಂಡಿದ್ದ ಅಜಿತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಲ್ಲೆ ಮಾಡಿದ ಸುಮನ್‌ನನ್ನು ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಕೋಲಾರದಲ್ಲಿ ಮರ್ಯಾದಾ ಹತ್ಯೆ

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ (Honour killing) ನಡೆದಿದೆ. ಅನ್ಯಕೋಮಿನ ಯುವಕನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಕೊಂದು (Murder case) ಸಮಾಧಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ಗೊತ್ತಾಗಿದೆ. ಅನ್ಯಕೋಮಿನ ಯುವಕನ ಜತೆ ಪ್ರೀತಿಯಲ್ಲಿದ್ದ ಮಗಳನ್ನು ತಂದೆಯೇ ಕೊಂದು (Father kills daughter) ಹಾಕಿದ್ದಾನೆ. ಬಳಿಕ ಯಾರಿಗೂ ಗೊತ್ತಾಗದಂತೆ ಸಮಾಧಿಯನ್ನೂ ಮಾಡಿ ಬಂದಿದ್ದಾನೆ. ಆದರೆ, ಈ ವಿಚಾರ ಪೊಲೀಸ್‌ ಕಿವಿಗೆ ಬಿದ್ದಿದ್ದರಿಂದ ದುರುಳ ತಂದೆ ಈಗ ಕಂಬಿ ಹಿಂದೆ ಇದ್ದಾನೆ.

ಇದನ್ನೂ ಓದಿ: Best Teacher Award : ಕರ್ನಾಟಕದ ಇಬ್ಬರು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ

ಕೊಲೆಯಾದ ರಮ್ಯಾ

ರಮ್ಯಾ (19) ಮೃತ ಯುವತಿಯಾಗಿದ್ದಾಳೆ. ತಂದೆ ವೆಂಕಟೇಶಗೌಡ ಕೊಲೆ ಆರೋಪಿಯಾಗಿದ್ದಾನೆ. ನರಸಾಪುರ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುವಾಗ ಅನ್ಯ ಕೋಮಿನ ಯುವಕನ ಜತೆ ಪ್ರೀತಿಯಾಗಿದೆ. ಈ ಪ್ರೀತಿ ಹಲವು ದಿನ ಮುಂದುವರಿದಿದೆ.

ಅನ್ಯಕೋಮಿನ ಯುವಕನನ್ನು ಮಗಳು ಪ್ರೀತಿಸಿದ ವಿಷಯ ಈತನಿಗೆ ಗೊತ್ತಾಗಿದೆ. ಈ ಕಾರಣಕ್ಕೆ ಮಗಳು ರಮ್ಯಾಳನ್ನು ಕರೆದು ಬುದ್ಧಿ ಹೇಳಿದ್ದಾನೆ. ಆದರೆ, ಆಕೆ ತಂದೆಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ ತನ್ನ ಪ್ರೀತಿಯನ್ನು ಮುಂದುವರಿಸಿದ್ದಾಳೆ. ಪದೇ ಪದೆ ಮಗಳಿಗೆ ಬುದ್ಧಿ ಹೇಳಿದರೂ ಆಕೆ ಕೇಳದೇ ಇದ್ದಾಗ ಹೊಡೆದು ಬುದ್ಧಿ ಹೇಳಿದ್ದಾನೆ. ಆಗಲೂ ಆಕೆ ತನ್ನ ದಾರಿಗೆ ಬಾರದೇ ಇದ್ದಾಗ ಕೊಂದೇ ಹಾಕುವ ತೀರ್ಮಾನಕ್ಕೆ ಬಂದಿದ್ದಾನೆ. ಹೀಗಾಗಿ ಆಕೆಯನ್ನು ಕೊಂದು ಯಾರಿಗೂ ತಿಳಿಯದಂತೆ ಸಮಾಧಿಯನ್ನೂ ಮಾಡಿ ಬಂದಿದ್ದಾನೆ ಎಂದು ತಿಳಿದುಬಂದಿದೆ. ಮತ್ತೆ ರಮ್ಯಾ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರೊಂದು ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ರಮ್ಯಾಳ ತಂದೆ ವೆಂಕಟೇಶ ಗೌಡನನ್ನು ಕರೆದು ವಿಚಾರಣೆಗೊಳಪಡಿಸಿದ್ದಾರೆ. ಆಗ ಸತ್ಯ ಹೊರಬಿದ್ದಿದೆ.

ಆಗಸ್ಟ್‌ 25ಕ್ಕೇ ಕೊಲೆ!

ಮಗಳ ವಿಚಾರಕ್ಕೆ ಆಕ್ರೋಶಗೊಂಡಿದ್ದ ಪೋಷಕರು ಆಗಸ್ಟ್‌ 25ರಂದು ಮಗಳನ್ನು ಕೊಂದಿದ್ದಾರೆ. ಹಾಗೇ ಎಲ್ಲರೂ ಸೇರಿ ಆಕೆಯ ಅಂತ್ಯ ಸಂಸ್ಕಾರವನ್ನೂ ಮಾಡಿ ಮುಗಿಸಿದ್ದಾರೆ. ಆದರೆ, ಈ ವಿಚಾರ ಊರಿನ ಕೆಲವರಿಗೆ ಗೊತ್ತಾಗಿ ಗುಸು ಗುಸು ಪ್ರಾರಂಭವಾಗಿದೆ. ಹೀಗೆ ದೂರೊಂದು ಪೊಲೀಸರ ಬಳಿಯೂ ಹೋಗಿದೆ. ಪೊಲೀಸರು ತನಿಖೆ ಕೈಗೊಂಡಾಗ ವಿಷಯ ಬೆಳಕಿಗೆ ಬಂದಿದೆ. ಭಾನುವಾರ (ಆಗಸ್ಟ್‌ 27) ಬೆಳಗ್ಗೆ ಕೋಲಾರ ತಹಸೀಲ್ದಾರ್ ಹರ್ಷವರ್ಧನ್ ನೇತೃತ್ವದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version