Site icon Vistara News

ಗಣೇಶೋತ್ಸವ: ಈ ಬಾರಿಯೂ ಇರುತ್ತಾ ವಿಗ್ರಹದ ಎತ್ತರಕ್ಕೆ ನಿರ್ಬಂಧ? ಗರಿಷ್ಠ ಐದು ಅಡಿಯಂತೆ

Ganesha

ಬೆಂಗಳೂರು: ಆಗಸ್ಟ್‌ ೩೧ರಂದು ಗಣೇಶ ಚತುರ್ಥಿ. ಅದಕ್ಕಾಗಿ ಈಗಾಗಲೇ ದೊಡ್ಡ ಮಟ್ಟದ ಸಿದ್ಧತೆಗಳು ನಡೆದಿವೆ. ಗೌರಿ-ಗಣೇಶ ಮತ್ತು ಗಣೇಶ ಮೂರ್ತಿಗಳ ಮಾರಾಟವೂ ಆರಂಭಗೊಂಡಿದೆ. ಇದರ ನಡುವೆಯೇ ಸಾರ್ವಜನಿಕವಾಗಿ ಪೂಜೆ ಮಾಡಬಹುದಾದ ಗಣೇಶ ಮೂರ್ತಿಗಳ ಎತ್ತರದ ಬಗ್ಗೆ ಗೊಂದಲ ಸೃಷ್ಟಿಯ ಸನ್ನಿವೇಶ ಎದುರಾಗಿದೆ.

ಈ ಬಾರಿಯೂ ಮಣ್ಣಿನ ಮೂರ್ತಿಗೇ ಆದ್ಯತೆ. ಯಾವ ಕಾರಣಕ್ಕೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮೂರ್ತಿಗಳನ್ನು ಬಳಸುವಂತಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟವಾಗಿ ಹೇಳಿದೆ. ಜತೆಗೆ ಮೂರ್ತಿಯ ಎತ್ತರ ಮತ್ತು ಅಗಲಕ್ಕೆ ಸಂಬಂಧಿಸಿ ನಿಯಮಗಳನ್ನು ಜಾರಿ ಮಾಡಿದೆ.
ಕಳೆದ ಬಾರಿ ಮೂರ್ತಿಯ ಎತ್ತರ 2 ರಿಂದ 4 ಅಡಿ ಮಾತ್ರ ಇರಬೇಕೆಂದು ಆರಂಭದಲ್ಲಿ ಸರಕಾರ ನಿರ್ಬಂಧ ಹಾಕಿತ್ತು. ಆದರೆ, ವಿರೋಧ ಎದುರಾದ ಬಳಿಕ ಆದೇಶವನ್ನು ವಾಪಸ್‌ ಪಡೆದಿತ್ತು. ಈ ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಯ ನಡಾವಳಿಯಲ್ಲಿ ಗರಿಷ್ಠ ೫ ಅಡಿ ಮಾತ್ರ ಇರಬೇಕು ಎಂದು ನಿರ್ಬಂಧಿಸಲಾಗಿದೆ. ಆದರೆ, ಈ ಬಾರಿಯೂ ಇದೇ ರೀತಿಯ ನಿರ್ಬಂಧ ಮುಂದುವರಿಯುತ್ತದಾ ಅಥವಾ ಕಳೆದ ಬಾರಿಯಂತೆ ಬದಲಾವಣೆ ಆಗುತ್ತದಾ ಎಂಬ ಪ್ರಶ್ನೆ ಮೂಡಿದೆ.

ಹೀಗೆ ಪ್ರತಿಬಾರಿಯೂ ಒಂದು ನಿಯಮವನ್ನು ಪ್ರಕಟಿಸಿ ನಂತರ ವಿರೋಧ ಬಂದಾಗ ಬದಲಾಯಿಸುವುದಾದರೆ ಅದನ್ನು ಪ್ರಕಟಿಸಿ ಗೊಂದಲ ಮೂಡಿಸುವುದು ಯಾಕೆ? ಇದರಿಂದ ವ್ಯಾಪಾರಿಗಳು, ಮೂರ್ತಿ ನಿರ್ಮಾಣ ಮಾಡುವವರ ಮೇಲೆ ಉಂಟಾಗುವ ಪರಿಣಾಮಗಳು ಯಾಕೆ ಅರ್ಥವಾಗುವುದಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ಎಲ್ಲ ಸಂಬಂಧಿತ ಸಂಘ ಸಂಸ್ಥೆಗಳ ಜತೆ ಮಾತುಕತೆ ನಡೆಸಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದಲ್ಲವೇ ಎಂಬ ಪ್ರಶ್ನೆ ಕೇಳಿಬಂದಿದೆ.

ವಾಯು ಮಾಲಿನ್ಯ ಮಂಡಳಿಯ ನಡಾವಳಿಗಳ ವಿರುದ್ಧ ಗಣೇಶ ಉತ್ಸವ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ʻʻಎಷ್ಟು ಅಡಿ ಗಣೇಶನ ಮೂರ್ತಿ ಇಡಬೇಕು ಎಂದು ಇವರೇಕೆ ನಿರ್ಧಾರ ಮಾಡಬೇಕು. ನಾವು ನಮಗೆ ಇಷ್ಟ ಬಂದ ಹಾಗೆ ಇಡುತ್ತೇವೆ ಎಂದು ಬೆಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ರಾಜು ಹೇಳಿದ್ದಾರೆ.

ಪದೇಪದೆ ತಲೆಬುಡವಿಲ್ಲದ ರೂಲ್ಸ್‌ ಮಾಡುವುದು ಯಾಕೆ? ಅದನ್ನು ಆಗಾಗ ಬದಲಾಯಿಸುವುದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ಬಾರಿ ಐದು ಅಡಿಯೇ ಗರಿಷ್ಠ ಮಿತಿ ಎಂಬ ನಿಯಮವನ್ನೇ ಕಡ್ಡಾಯ ಮಾಡಿದರೆ, ಈಗ ಮಾಡಿರುವ ನಿಯಮ ಹಿಂಪಡೆಯದೆ ಇದ್ದರೆ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತೆವೆ ಎಂದು ಎಚ್ಚರಿಸಿದ್ದಾರೆ. ವಿಧಾನಸೌಧದ ಮುಂದೆ ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ| ಶಾಲೆಗಳಲ್ಲಿ ಗಣೇಶೋತ್ಸವ ಆಚರಣೆಗೆ ಮುಕ್ತ ಅವಕಾಶ: ಮತ್ತೆ ಶುರುವಾಗುತ್ತಾ ಹಿಜಾಬ್‌ ವಿವಾದದ ಧರ್ಮ ಸಂಘರ್ಷ

Exit mobile version