Site icon Vistara News

ಚಾಮರಾಜಪೇಟೆ ಮೈದಾನದಲ್ಲಿ 2006ರಲ್ಲಿ ಗಣೇಶೋತ್ಸವ, ಶಿವರಾತ್ರಿ ಆಚರಣೆ ನಡೆದಿತ್ತು?

Chamarajapete maidan

ನವದೆಹಲಿ: ಬೆಂಗಳೂರಿನ ವಿವಾದಿತ ಚಾಮರಾಜ ಪೇಟೆ ಮೈದಾನದಲ್ಲಿ ೨೦೦ ವರ್ಷಗಳಿಂದ ವರ್ಷಕ್ಕೆರಡು ಬಾರಿ ನಮಾಜ್‌ ಬಿಟ್ಟರೆ ಬೇರೆ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆದಿರಲಿಲ್ಲ ಎಂಬ ವಾದವನ್ನು ಸರ್ಕಾರದ ಪರ ವಕೀಲ ಮುಕುಲ್‌ ರೋಹಟ್ಗಿ ಅಲ್ಲಗಳೆದಿದ್ದಾರೆ.

ʻʻ2006ರಲ್ಲಿ ವಿವಾದಿತ ಜಾಗದಲ್ಲಿ ಹಬ್ಬ ಆಚರಣೆಗೆ ಅವಕಾಶ ನೀಡಲಾಗಿದೆ. ಗಣೇಶೋತ್ಸವ, ಶಿವರಾತ್ರಿ ಆಚರಣೆಗೆ ಅವಕಾಶ ನೀಡಲಾಗಿದೆʼʼ ಎಂದು ಅವರು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರು ವ ವಿಚಾರಣೆ ವೇಳೆ ತ್ರಿಸದಸ್ಯ ವಿಭಾಗೀಯ ಪೀಠದ ಮುಂದೆ ಹೇಳಿದರು.

ʻʻಇದೀಗ ಯಾರು ಹಿಂದೂ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅರ್ಜಿ ಸಲ್ಲಿಸಿದ್ದಾರೋ ಅವರೇ ಅಂದು ಅವಕಾಶ ನೀಡಿದ್ದರು. ಧಾರ್ಮಿಕ ಆಚರಣೆಗೆ ವಕ್ಫ್​ಬೋರ್ಡ್​ ಅನುಮತಿ ನೀಡಿತ್ತುʼʼ ಎಂದು ರೋಹಟ್ಗಿ ವಾದಿಸಿದರು.

ʻʻ200 ವರ್ಷಗಳ ಹಿಂದೆ ವಿವಾದಿತ ಜಾಗ ಮಕ್ಕಳ ಆಟದ ಮೈದಾನವಾಗಿತ್ತುʼʼ ಎಂದು ಹೇಳಿದ ಮುಕುಲ್‌ ರೋಹಟ್ಗಿ ಅವರು, 22 ವರ್ಷಗಳ ಹಿಂದೆ ಖಾತೆ ಮಾಡಿಕೊಡುವಂತೆ ವಕ್ಫ್​ಬೋರ್ಡ್​ ಕಂದಾಯ ಇಲಾಖೆಗೆ ಮನವಿ ಮಾಡಿಕೊಂಡಿತ್ತು ಎಂದು ನೆನಪಿಸಿದರು.

ʻʻಇಲ್ಲಿ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿದೆ. ಈ ಹಿಂದೆ ಸುಪ್ರೀಂಕೋರ್ಟ್ ಇದಕ್ಕೆ​ ಅನುಮತಿ ನೀಡಿತ್ತುʼʼ ಎಂದ ರೋಹಟ್ಗಿ, ಮಾಲೀಕನಿಲ್ಲದ ಆಸ್ತಿಗೆ ಸರ್ಕಾರವೇ ಮಾಲೀಕ ಎನ್ನುವುದು ಸಾಮಾನ್ಯ ತಿಳುವಳಿಕೆʼʼ ಎಂದು ವಾದಿಸಿದರು.

ʻʻವಿವಾದಿತ ಜಾಗದಲ್ಲಿ ಪಾಲಿಕೆ ಶಾಲೆ ನಿರ್ಮಾಣದ ಅರ್ಜಿ ಸುಪ್ರೀಂನಲ್ಲಿದೆʼʼ ಎಂದು ರೋಹಟ್ಗಿ ಹೇಳಿದಾಗ ಕಪಿಲ್‌ ಸಿಬಾಲ್‌ ಮಧ್ಯ ಪ್ರವೇಶ ಮಾಡಿದರು. ಇದರಿಂದ ಕೆರಳಿದ ಮುಕುಲ್‌ ಅವರು, ʻʻನಿಮ್ಮ ವಾದ ಮಂಡಿಸಿದ್ದೀರಿ.. ನನ್ನ ವಾದ ಮಂಡನೆಗೆ ಅವಕಾಶ ಕೊಡಿʼʼ ಎಂದು ಹೇಳಿದರು.

ʻʻವಕ್ಫ್‌ ಮಂಡಳಿಯೇ ಮಾಲೀಕರಾಗಿದ್ದು ನಿಜವಾದರೆ, ಸ್ವಾತಂತ್ರ್ಯೋತ್ಸವಕ್ಕೆ ಅವಕಾಶ ನೀಡಿದ್ದೇಕೆ? ನಿಮ್ಮದೇ ಆಸ್ತಿ ಅಂದ್ರೆ ಇದನ್ನು ಸಾರ್ವಜನಿಕ ಮೈದಾನ ಎಂದು ಕರೆಯೋದ್ಯಾಕೆ?ʼʼ ಎಂದು ಖಾರವಾಗಿ ಪ್ರಶ್ನಿಸಿದರು ರೋಹಟ್ಗಿ.

ವಾದ ವಿವಾದ ಮುಂದುವರಿಯುತ್ತಿದೆ. ಇದು ವಕ್ಫ್‌ ಮಂಡಳಿ ಆಸ್ತಿ, ಇದುವರೆಗೆ ಇಲ್ಲಿ ಕೇವಲ ಮುಸ್ಲಿಂ ಧಾರ್ಮಿಕ ಪ್ರಾರ್ಥನೆಗೆ ಮಾತ್ರ ಅವಕಾಶವಿತ್ತು ಎನ್ನುವ ವಾದವನ್ನು ರೋಹಟ್ಗಿ ಸ್ಪಷ್ಟ ಮಾತುಗಳಲ್ಲಿ ತಳ್ಳಿಹಾಕಿದರು.

ಹಿಂದಿನ ಸುದ್ದಿ| ಚಾಮರಾಜಪೇಟೆ ಮೈದಾನ ವಿವಾದ| ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ, ಇಂದೇ ವಿಚಾರಣೆ

Exit mobile version