ಉಡುಪಿ: ಉಡುಪಿ ನಗರ ಮತ್ತು ಮಣಿಪಾಲದಲ್ಲಿ ಮಾದಕ ದ್ರವ್ಯ ಜಾಲ ವಿಪರೀತವಾಗಿ ಬೆಳೆಯುತ್ತಿದೆ. ಯಾರಿಗೆ ಬೇಕೋ ಅವರಿಗೆ ಡ್ರಗ್ಸ್ ಡೆಲಿವರಿ ಮಾಡುವ ವ್ಯವಸ್ಥೆಯನ್ನು ಅತ್ಯಂತ ಸಿಸ್ಟಮ್ಯಾಟಿಕ್ ಆಗಿ ನಿಭಾಯಿಸಲಾಗುತ್ತಿದೆ. ಡ್ರಗ್ಸ್ ಸರಬರಾಜಿಗೆ ಹೊಸ ಹೊಸ ತಂತ್ರಗಳನ್ನು ಕಂಡುಕೊಳ್ಳಲಾಗುತ್ತಿದೆ. ಇದೀಗ ಹೊಸ ತಂತ್ರವಾಗಿ ಫುಡ್ ಡೆಲಿವರಿ ಬಾಯ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ.
ಉಡುಪಿಯಲ್ಲಿ ಈ ರೀತಿ ಡ್ರಗ್ಸ್ ಪೂರೈಕೆ ಮಾಡಲು ಹೊರಟಿದ್ದ ಮೂವರು ಫುಡ್ ಡೆಲಿವರಿ ಬಾಯ್ಸ್‌ನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಪ್ರತಿಷ್ಠಿತ ಕಂಪನಿಯ ಫುಡ್ ಡೆಲಿವರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಬ್ಯಾಗ್‌ಗಳಲ್ಲಿ ಗ್ರಾಹಕರಿಗೆ ನೀಡಲು ಒಯ್ಯುತ್ತಿದ್ದ ಗಾಂಜಾ ಪತ್ತೆಯಾಗಿದೆ.
ಫುಡ್ ಡೆಲಿವರಿ ಬಾಯ್‌ಗಳ ಮೂಲಕ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಪಡೆದಿದ್ದ ಉಡುಪಿ ಸೆನ್ ಅಪರಾಧ ಠಾಣಾ ಪೋಲೀಸರು ಹಲವು ಕಡೆಗಳಲ್ಲಿ ಕಣ್ಣಿಟ್ಟಿದ್ದರು. ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಮೂವರನ್ನು ಹಿಡಿಯಲಾಗಿದೆ. ರವಿಶಂಕರ್, ಅಂಜಲ್ ಬೈಜು ಹಾಗೂ ದೇವಿಪ್ರಸಾದ್ ಬಂಧಿತ ಆರೋಪಿಗಳು. ಇವರೆಲ್ಲರೂ ಸುಮಾರು ೧೮ ವರ್ಷದ ಆಸುಪಾಸಿನವರು.
ಎಲ್ಲಿಂದ ಬರುತ್ತದೆ ಡ್ರಗ್ಸ್?
ಈ ಹುಡುಗರು ಬಿಡುವಿನ ಅವಧಿಯಲ್ಲಿ ಫುಡ್ ಡೆಲಿವರಿ ಬಾಯ್ಸ್ ಅಗಿ ಕೆಲಸ ಮಾಡುತ್ತಾರೆ ಎನ್ನಲಾಗಿದೆ. ಇವರನ್ನು ಡ್ರಗ್ಸ್ ನೆಟ್‌ವರ್ಕ್ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ. ಫುಡ್ ಡೆಲಿವರಿ ಮಾಡುವವರು ಯಾವುದೇ ವಿಳಾಸ ಕೊಟ್ಟರೂ ಹೋಗುತ್ತಾರೆ. ಜತೆಗೆ ಪೊಲೀಸರು ಕೂಡಾ ಇವರನ್ನು ಹೆಚ್ಚು ಚೆಕ್ ಮಾಡುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಪ್ರಸಕ್ತ ಬಂಧಿತರಾಗಿರುವ ಈ ಹುಡುಗರಲ್ಲಿ ಸಿಕ್ಕಿರುವ ಗಾಂಜಾ ಕೇರಳದ ಪಾಲಕಾಡ್ ನಿಂದ ರೈಲಿನಲ್ಲಿ ಬಂದಿತ್ತು ಎನ್ನಲಾಗಿದೆ. ಅಲ್ಲಿಂದ ಕಳುಹಿಸಲಾದ ಗಾಂಜಾವನ್ನು ಇಲ್ಲಿ ಸ್ವೀಕರಿಸಿ ಬೇಕಾದವರಿಗೆ ತಲುಪಿಸಲು ಡೆಲಿವರಿ ಬಾಯ್‌ಗಳನ್ನು ಬಳಸಿಕೊಳ್ಳುವ ಒಂದು ಗ್ಯಾಂಗ್ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ.
ಬಂಧಿತ ಹುಡುಗರು ಮಣಿಪಾಲದ ಮಂಚಿಯಲ್ಲಿ ಬಾಡಿಗೆ ಮನೆ ಪಡೆದಿದ್ದಾರೆ ಎನ್ನಲಾಗಿದೆ. ಫುಡ್ ಡೆಲಿವರಿ ಬ್ಯಾಗನಲ್ಲಿ ಗಾಂಜಾ ಇಟ್ಟುಕೊಂಡು ಗಿರಾಕಿಗಳು ಹಾಗೂ ಪೆಡ್ಲರ್ ಗಾಗಿ ಕಾಯುತ್ತಿದ್ದಾಗ ಪೊಲೀಸರು ಅವರನ್ನು ಹಿಡಿದಿದ್ದಾರೆ. ಆರೋಪಿಗಳಿಂದ ಒಂದುವರೆ ಕೆಜಿ ಗಾಂಜಾ, ಎರಡು ಬೈಕ್, ಫುಡ್ ಡೆಲಿವರಿ ಬ್ಯಾಗ್, ನಾಲ್ಕು ಮೊಬೈಲ್, ಮೂವತ್ತು ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ| Crime News | ಹಶೀಷ್ ಆಯಿಲ್, ಗಾಂಜಾ ಮಾರಾಟ; ಆಂಧ್ರದಲ್ಲಿ ಆರೋಪಿಗಳ ಅರೆಸ್ಟ್