ಬೆಂಗಳೂರು: ಶಿವಮೊಗ್ಗ ರಾಜಕಾರಣದಲ್ಲಿ ಮಾಜಿ ಸಿಎಂ ಮಕ್ಕಳ ನಡುವೆ ಕದನ ಹೊಸತಲ್ಲ. ಒಬ್ಬರೇ ಮಾಜಿ ಸಿಎಂರ ಇಬ್ಬರು ಮಕ್ಕಳು ಸೆಣೆಸಿದ ಉದಾಹರಣೆಯೂ ತಾಜಾ ಇರುವಾಗಲೇ 2024ರ ಲೋಕಸಭೆ (Loksabha 2024) ಚುನಾವಣೆಯಲ್ಲಿಯೂ ಮಾಜಿ ಸಿಎಂಗಳ ಮಕ್ಕಳು ಸೆಣೆಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಈಗಾಗಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಸಂಸದರಾಗಿದ್ದಾರೆ. 2024ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೊಬ್ಬ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಪುತ್ರಿ ಹಾಗೂ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆ ಮಾಡುತ್ತಾರೆ ಎನ್ನಲಾಗುತ್ತಿದೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದಲೇ ಗೀತಾ ಶಿವರಾಜ್‌ಕುಮಾರ್ 2014ರಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ ಆಗ ಗೀತಾ ಹಾಗೂ ಮಧು ಬಂಗಾರಪ್ಪ ಇಬ್ಬರೂ ಜೆಡಿಎಸ್‌ನಲ್ಲಿದ್ದರು. ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ 3.6 ಲಕ್ಷ ಮತಗಳ ಅಗಾಧ ಅಂತರದಿಂದ ಸೋಲುಂಡಿದ್ದರು. ಬಿ.ಎಸ್. ಯಡಿಯೂರಪ್ಪ 6.06 ಲಕ್ಷ ಮತ ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಂಜುನಾಥ ಭಂಡಾರಿ ಅವರು 2.42 ಲಕ್ಷ ಮತ ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಗೀತಾ ಶಿವರಾಜ್‌ಕುಮಾರ್ 2.40 ಲಕ್ಷ ಮತದೊಂದಿಗೆ ಮೂರನೇ ಸ್ಥಾನದಲ್ಲಿದ್ದರು.
2019ರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕಾರಣಕ್ಕೆ ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು. ಬಿ.ವೈ. ರಾಘವೇಂದ್ರ, ಬಿ.ಎಸ್. ಯಡಿಯೂರಪ್ಪ ಅವರಿಗಿಂತಲೂ ಹೆಚ್ಚು ಅಂದರೆ 7.29 ಲಕ್ಷ ಮತ ಪಡೆದು ಗೆದ್ದರೆ ಮಧು ಬಂಗಾರಪ್ಪ 5.06 ಲಕ್ಷ ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಕಾಂಗ್ರೆಸ್ ಸೇರ್ಪಡೆ
ಈ ಬಾರಿ ವಿಧಾನಸಭೆ ಚುನಾವಣೆಗೂ ಸಾಕಷ್ಟು ಮುನ್ನವೇ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾದರು. ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧವೇ ಸೊರಬ ವಿಧಾನಸಭೆ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿದರು. ಈ ಬಾರಿಯೂ ಕಿರಿಯ ಸಹೋದರನ ಜತೆಗೆ ನಿಂತ ಗೀತಾ ಶಿವರಾಜ್‌ಕುಮಾರ್, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನೂ ನಡೆಸಿದರು. ತಾವಷ್ಟೆ ಅಲ್ಲದೆ ಸ್ವತಃ ಶಿವರಾಜ್‌ಕುಮಾರ್ ಅವರನ್ನೂ ಕರೆದು ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದರು.
ಈ ನಡುವೆ ವಿಧಾನಸಭೆ ಚುನಾವಣೆಗೂ ಮುನ್ನ ಏಪ್ರಿಲ್ 28ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಗೀತಾ ಶಿವರಾಜ್‌ಕುಮಾರ್ ಸೇರ್ಪಡೆಯಾಗಿದ್ದರು. ಒಂದೆಡೆ ಬಿಜೆಪಿ ಪರವಾಗಿ ಕಿಚ್ಚ ಸುದೀಪ್ ಪ್ರಚಾರ ನಡೆಸಿದರೆ ಮತ್ತೊಂದೆಡೆ ಕಾಂಗ್ರೆಸ್ ಪರವಾಗಿ ಶಿವರಾಜ್‌ಕುಮಾರ್ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದರು. ಸ್ವತಃ ಮಧು ಬಂಗಾರಪ್ಪ ಗೆಲುವಿನೊಂದಿಗೆ ಕಾಂಗ್ರೆಸ್ ಪಕ್ಷವೂ ಸರಳ ಬಹುಮತ ಪಡೆಯಿತು ಹಾಗೂ ಮಧು ಬಂಗಾರಪ್ಪ ಸಚಿವ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದಾರೆ.
ಫಲಿತಾಂಶದ ನಂತರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕನಿಷ್ಠ ಎರಡು ಬಾರಿ ಗೀತಾ ಶಿವರಾಜ್‌ಕುಮಾರ್ ದಂಪತಿ ಭೇಟಿಯಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ ಸಹ ಭೇಟಿಯಾಗಿದ್ದಾರೆ. ಈ ಬಾರಿ ಗೀತಾ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಗೀತಾ ಅವರ ಜತೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರ ಹೆಸರೂ ಚಾಲ್ತಿಯಲ್ಲಿದೆ. ಆದರೆ ಬೆಂಗಳೂರಿನಿಂದ ನವದೆಹಲಿ ಮಟ್ಟದವರೆಗಿನ ಪ್ರಭಾವ ಹೊಂದಿರುವ ಗೀತಾ ಶಿವರಾಜ್‌ಕುಮಾರ್ ಅವರು ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಎಲ್ಲಿಯೂ ಸ್ಪಷ್ಟವಾಗಿ ಮಾತನಾಡಿಲ್ಲ.
ಮತ್ತೆ ಡಿಸಿಎಂ ಭೇಟಿ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್‌ಕುಮಾರ್ ಬುಧವಾರ ಭೇಟಿ ಮಾಡಿ ಸಾಕಷ್ಟು ಹೊತ್ತು ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್, ಇದು ಸೌಜನ್ಯ ಭೇಟಿ ಅಷ್ಟೇ. ಮೊನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ, ಶಿವಕುಮಾರ್ ಅವರನ್ನು ಭೇಟಿ ಮಾಡಲು ಆಗಿರಲಿಲ್ಲ. ಆ ಸಮಯದಲ್ಲಿ ನಾನು ತಮಿಳು ಸಿನಿಮ ಶೂಟಿಂಗ್‌ನಲ್ಲಿದ್ದೆ. ಡಿಕೆಶಿ ಅವರು ನನಗೆ ತುಂಬ ಚನ್ನಾಗಿ ಗೊತ್ತು, ಅದಕ್ಕೆ ಭೇಟಿ ಮಾಡಿದ್ದೇವೆ ಅಷ್ಟೇ ಎಂದರು. ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಇನ್ನೂ ಏನು ಗೊತ್ತಾಗಿಲ್ಲ. ತುಂಬ ಸಾರಿ ಹಿಂದೆನೂ ಭೇಟಿ ಮಾಡಿದ್ದೇವೆ ಅಷ್ಟೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗೀತಾ ಶಿವರಾಜ್‌ಕುಮಾರ್, ಚುನಾವಣಾಗೆ ಸಿದ್ದತೆ ಅಂತ ಏನಿಲ್ಲ. ಈ ಬಗ್ಗೆ ಸೂಕ್ತ ನಿರ್ಧಾರವನ್ನು ನನ್ನ ತಮ್ಮ (ಮಧು ಬಂಗಾರಪ್ಪ) ಹಾಗೂ ಪಕ್ಷದ ಪ್ರಮುಖರು ಕೈಗೊಳ್ಳುತ್ತಾರೆ. ಇದೊಂದು ಸೌಜನ್ಯದ ಭೇಟಿ ಅಷ್ಟೇ ಎಂದರು. ಸೌಜನ್ಯದ ಭೇಟಿ ಎಂದು ಹೇಳಿದರೂ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವನ್ನು ಗೀತಾ ಶಿವರಾಜ್‌ಕುಮಾರ್ ತಳ್ಳಿಹಾಕಿಲ್ಲ ಎನ್ನುವುದು ಗಮನಾರ್ಹ.
ಇದನ್ನೂ ಓದಿ: Times Now: ಟೈಮ್ಸ್ ನೌ ಸುದ್ದಿ ವಾಹಿನಿ ತೊರೆದ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್! ಮುಂದೇನು?