ಬೆಂಗಳೂರು: ಜರ್ಮನಿ ಏರ್‌ಫೋರ್ಸ್‌ವೊಂದು (Germany Air Force) ಫ್ಲೈಟ್ ಮಿಸ್ ಮಾಡಿದ್ದಲ್ಲದೆ, ವೈದ್ಯರೊಬ್ಬರಿಗೆ ರಾತ್ರಿಯಿಡಿ ಲಾನ್‌ನಲ್ಲಿಯೇ ಕೂರಿಸಿ, ಹೋಟೆಲ್ ರೂಮ್ ವ್ಯವಸ್ಥೆಯನ್ನೂ ಮಾಡಿಕೊಡದೇ ಇದ್ದಿದ್ದಕ್ಕೆ ಈಗ ದಂಡ ತೆರುವಂತಾಗಿದೆ. ತಮಗಾದ ಅನ್ಯಾಯದ ವಿರುದ್ಧ ವೈದ್ಯರು ಗ್ರಾಹಕ ನ್ಯಾಯಾಲಯಕ್ಕೆ ಹೋಗಿದ್ದ ಪರಿಣಾಮ 10 ಲಕ್ಷ ರೂಪಾಯಿಯನ್ನು ಪರಿಹಾರ ರೂಪವಾಗಿ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ವೈದ್ಯ ಕಿಶೋರ್ ಅವರು ಜರ್ಮನ್ ವಿಮಾನಯಾನ ಸಂಸ್ಥೆ ಲುಫ್ಥಾನ್ಸ ವಿರುದ್ಧ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಸೇವಾ ಕೊರತೆ ಮತ್ತು ವೃತ್ತಿಪರವಲ್ಲದ ವರ್ತನೆಗಾಗಿ ಕೇಸ್ ದಾಖಲು ಮಾಡಿದ್ದರು. ಅವರಿಂದ ನ್ಯಾಯಕ್ಕಾಗಿ ಸುದೀರ್ಘ 8 ವರ್ಷಗಳ ಹೋರಾಟ ನಡೆದಿತ್ತು. ಈಗ ಅವರ ಹೋರಾಟಕ್ಕೆ ಜಯ ಸಿಕ್ಕಿದೆ.
ಇದನ್ನೂ ಓದಿ: Praveen Nettaru Murder: ಪ್ರವೀಣ್ ಹತ್ಯೆ ಆರೋಪಿ ತುಫೈಲ್‌ನನ್ನು NIA ಹಿಡಿದದ್ದು ಹೀಗೆ!
2014ರಲ್ಲಿ ಕಿಶೋರ್ ಜರ್ಮನಿಗೆ ಹೋಗಿದ್ದರು. ಆಗ ಅವರು ತೆರಳಬೇಕಿದ್ದ ವಿಮಾನವು ವಿಳಂಬವಾಗಿ ಬರುತ್ತದೆ ಎಂದು ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ಥಾನ್ಸ್ ಹೇಳಿದೆ. ರಾತ್ರಿಯಾಗಿದ್ದರಿಂದ ತಮಗೆ ರೂಂನ ವ್ಯವಸ್ಥೆ ಮಾಡಿಕೊಡುವಂತೆ ಕಿಶೋರ್ ಏರ್‌ಲೈನ್ಸ್ ಸಿಬ್ಬಂದಿ ಕೋರಿಕೊಂಡಿದ್ದಾರೆ. ಆದರೆ, ಸೂಕ್ತ ವ್ಯವಸ್ಥೆ ಮಾಡಬೇಕಾದ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಲ್ಲದೆ, ಫ್ಲೈಟ್ ಬರುವವರೆಗೂ ಲಾನ್‌ನಲ್ಲಿಯೇ ಇರುವಂತೆ ಸೂಚಿಸಿದ್ದಾರೆ.
ಹೀಗಾಗಿ ವೈದ್ಯ ಕಿಶೋರ್ ರಾತ್ರಿಯಿಡೀ ಲಾನ್‌ನಲ್ಲಿಯೇ ಕೂರಬೇಕಾದ ಪರಿಸ್ಥಿತಿ ತಲೆದೋರಿದೆ. ಇದರಿಂದ ಅವಮಾನಗೊಂಡ ಕಿಶೋರ್, ತಮ್ಮ ಗ್ರಾಹಕ ಹಕ್ಕು ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಏರ್‌ಲೈನ್ಸ್ ಮಾಡಿದ ನಿರ್ಲಕ್ಷ್ಯದಿಂದ ತಾವು ರಾತ್ರಿಯಿಡಿ ಲಾನ್‌ನಲ್ಲಿಯೇ ಕುಳಿತುಕೊಳ್ಳಬೇಕಾಯಿತು. ಇದರಿಂದ ತಮ್ಮ ಹಕ್ಕಿಗೆ ಚ್ಯುತಿಯಾಗಿದೆ ನ್ಯಾಯ ಬೇಕು ಎಂದು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು.
ಸುದೀರ್ಘ ಎಂಟು ವರ್ಷಗಳ ವಿಚಾರಣೆ ನಡೆಸಿದ ಕೋರ್ಟ್ ವಾದಿ-ಪ್ರತಿವಾದಿಗಳ ವಾದಗಳನ್ನು ಆಲಿಸಿ ಬಳಿಕ ಏರ್‌ಲೈನ್ಸ್‌ನದ್ದೇ ತಪ್ಪು ಎಂಬುದನ್ನು ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ಏರ್‌ಲೈನ್ಸ್ ಕಂಪನಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. 45 ದಿನದ ಒಳಗೆ ಪಾವತಿ ಮಾಡದೇ ಇದ್ದ ಪಕ್ಷದಲ್ಲಿ 10 ಲಕ್ಷ ರೂಪಾಯಿಗೆ ಶೇ. 12ರಷ್ಟು ಬಡ್ಡಿ ಸೇರಿಸಿ ಕೊಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.
ಇದನ್ನೂ ಓದಿ: Congress Politics: ಸ್ವಾರ್ಥ ಆನಂತರ; ಮೊದಲು ಪಕ್ಷ ಅಧಿಕಾರಕ್ಕೆ ಬರಲಿ: ಡಿಕೆಶಿ-ಸಿದ್ದುಗೆ ಡಾ. ಜಿ. ಪರಮೇಶ್ವರ್ ಕಿವಿಮಾತು
ಈ ಬಗ್ಗೆ ವೈದ್ಯ ಕಿಶೋರ್ ಹೇಳೋದೇನು?
ವಿದೇಶಗಳಲ್ಲಿ ನಮ್ಮ ದೇಶದವರನ್ನು ಬೇರೆ ರೀತಿಯಾಗಿಯೇ ನೋಡಲಾಗುತ್ತದೆ. ಈ ಅಸಮಾನತೆಯ ವಿರುದ್ಧ ನಾನು ಹೋರಾಟಕ್ಕಿಳಿದೆ. ನಮ್ಮ ದೇಶದ ಯಾವ ಪ್ರಜೆಗೂ ಈ ರೀತಿ ಆಗಬಾರದು. ಕೋರ್ಟ್ ಆದೇಶದಿಂದ ನನಗೆ ಅತೀವ ಖುಷಿಯಾಗಿದೆ ಎಂದು ಡಾ. ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.