ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಮೊದಲ ಸೂಚನೆಯನ್ನು ನೀಡಿದ್ದು, ಜಿಲ್ಲೆಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಕೇಂದ್ರ ಚುನಾವಣಾ ಆಯೋಗದ ತಂಡ ಸಹ ರಾಜ್ಯಕ್ಕೆ ಆಗಮಿಸಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದು ಜಿಲ್ಲಾಧಿಕಾರಿಗಳು, ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದೆ. ಬಹುತೇಕ ಮಾರ್ಚ್ 27ರಂದು ಅಥವಾ ಮಾರ್ಚ್ ಅಂತ್ಯದೊಳಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.
ಜಿಲ್ಲಾಧಿಕಾರಿಗಳಿಗೆ ಏನೇನು ಸೂಚನೆ?
ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಗೆ ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನಲೆ ಕೇಂದ್ರ ಚುನಾವಣಾ ಆಯೋಗದಿಂದ ಯಾವ ಕ್ಷಣದಲ್ಲಾದರೂ ಚುನಾವಣೆ ಘೋಷಣೆ ಆಗಬಹುದು. ಹೀಗಾಗಿ ಕೆಲವು ಮಾಡಲೇಬೇಕಾದ ಚುನಾವಣಾ ಪೂರ್ವ ಸಿದ್ಧತೆಯನ್ನು ಕಡ್ಡಾಯವಾಗಿ ಚುನಾವಣೆ ಘೋಷಣೆಗೆ ಮುನ್ನವೇ ಮಾಡಿ ಮುಗಿಸಬೇಕು ಎಂದು ಸೂಚಿಸಲಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಮಾದರಿಯನ್ನು ಪತ್ರದೊಂದಿಗೆ ಲಗತ್ತಿಸಲಾಗಿದೆ. ಚುನಾವಣೆ ಘೋಷಣೆಯಾದ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ
ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಸಾಧ್ಯತೆ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುವ ನಿರೀಕ್ಷೆ ಇದೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಸಹ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.
ಜಿಲ್ಲೆಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಚೆಕ್‌ಪೋಸ್ಟ್‌ಗಳನ್ನು ರಚನೆ ಮಾಡಿದ್ದಾರೆ. ಮತದಾರರಿಗೆ ಹಂಚಲು ತರುತ್ತಿದ್ದ ಹಣ, ವಸ್ತುಗಳು, ಮದ್ಯವನ್ನು ವಶಕ್ಕೆ ಪಡೆಯುತ್ತಿದ್ದಾರೆ.
ಮೋದಿ, ಶಾ ಪ್ರವಾಸದ ಬೆನ್ನಿಗೇ ಘೋಷಣೆ ಪಕ್ಕಾ
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ರಂದು ದಾವಣಗೆರೆಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜತೆಗೆ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ, ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೇಂದ್ರ ಗೃಹ ಸಚಿವರು ಮಾರ್ಚ್ 26ರಂದು ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಿರುವ ಬಸವಣ್ಣ ಮತ್ತು ಕೆಂಪೇಗೌಡ ಪ್ರತಿಮೆಗಳನ್ನು ಅನಾವರಣಗೊಳಿಸಲಿದ್ದಾರೆ. ಶುಕ್ರವಾರ ಸಂಜೆ ನಡೆಯುವ ಕೊನೆಯ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿ ಮಹತ್ವದ ತೀರ್ಮಾನಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಇದೆಲ್ಲವೂ ಮುಗಿದ ಬಳಿಕ ಚುನಾವಣೆ ಘೋಷಣೆಯಾಗಲಿದೆ.