ಉಡುಪಿ: ಕಟ್ಟಡದ 8ನೇ ಮಹಡಿಯಿಂದ ಜಿಗಿದು ಬಾಲಕಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಹೆರ್ಗ ಸಮೀಪದ ಹೈಪಾಯಿಂಟ್ ಹೈಟ್ಸ್ ಫ್ಲ್ಯಾಟ್‌ನಲ್ಲಿ ನಡೆದಿದೆ. ಪ್ರಜ್ಞಾ (13) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮಣಿಪಾಲದ ಖಾಸಗಿ ಶಾಲೆಯಲ್ಲಿ ಬಾಲಕಿ 8ನೇ ತರಗತಿ ಓದುತ್ತಿದ್ದಳು. ಸೋಮವಾರ ಮುಂಜಾನೆ ಹೆರ್ಗ ಸಮೀಪದ 8ನೇ ಮಹಡಿಯ ಫ್ಲ್ಯಾಟ್‌ನಿಂದ ಜಿಗಿದಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಇತ್ತೀಚಿಗೆ ಕೆಲ ತಿಂಗಳಿಂದ ಪ್ರಜ್ಞಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Murder Case : ʻನನ್ನ ಜೈಲಿಗೆ ಕಳ್ಸಿʼ ಎಂದ ಪ್ರತಿಮಾ ಕೊಲೆಗಾರ! 10 ದಿನ ಪೊಲೀಸರ ವಶಕ್ಕೆ
ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವು
ರಾಮನಗರ: ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದು ರಾಮನಗರ ತಾಲೂಕಿನ ದೊಡ್ಡ ಗಂಗವಾಡಿ ಗ್ರಾಮದಲ್ಲಿ ನಡೆದಿದೆ. ಕಾಂಚಿದೊಡ್ಡಿ ನಿವಾಸಿ ಗಿರಿಯಪ್ಪ (40) ಮೃತ ದುರ್ದೈವಿ. ರಾಮನಗರದಿಂದ ಗ್ರಾಮಕ್ಕೆ ವಾಪಸ್ ಹೋಗುವಾಗ ಅಪಘಾತ ನಡೆದಿದ್ದು, ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಮತ್ತೊಬ್ಬರ ಬಲಿ
ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ- ಮಾನವ ಸಂಘರ್ಷ ಮಂದುವರಿದಿದೆ. ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ಹುಲಿ ದಾಳಿಗೆ (Tiger Attack) ಮತ್ತೊಬ್ಬರ ಬಲಿಯಾಗಿದೆ. ಶುಂಠಿ ಹೊಲದಲ್ಲಿ ಕುಳಿತಿದ್ದ ವೇಳೆ ಹುಲಿ ದಾಳಿ ಮಾಡಿ ವ್ಯಕ್ತಿಯನ್ನು ಕೊಂದಿದೆ.
ಬಿ.ಮಟಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ(45) ಮೃತರು. ಟೀ ಕುಡಿದು ಶುಂಠಿ ಹೊಲಕ್ಕೆ ಬಾಲಾಜಿ ನಾಯ್ಕ. ತೆರಳಿದ್ದರು. ಈ ವೇಳೆ ಏಕಾಏಕಿ ಹುಲಿ ದಾಳಿ ಮಾಡಿ ಎಳೆದೊಯ್ದಿದೆ. ಈ ವೇಳೆ ಸ್ಥಳೀಯರು ಗಮನಿಸಿ, ಕೂಗಾಡಿದ್ದಾರೆ. ನಂತರ ಹುಲಿ ಅಲ್ಲಿಂದ ಪರಾರಿಯಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Rain News: ಹರಪನಹಳ್ಳಿಯಲ್ಲಿ ಸಿಡಿಲಿಗೆ 30ಕ್ಕೂ ಹೆಚ್ಚು ಕುರಿಗಳ ಬಲಿ
ಇತ್ತೀಚೆಗೆ ನಂಜನಗೂಡು ತಾಲೂಕಿನ ಮಹದೇವನಗರ ಗ್ರಾಮದ ದನಗಾಹಿ ಮೇಲೆ ಹುಲಿ ದಾಳಿ ಮಾಡಿತ್ತು. ಹೀಗಾಗಿ ಹುಲಿ ಪತ್ತೆಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹುಲಿ ಕಾರ್ಯಾಚರಣೆಗೆ ಪಾರ್ಥ ಸಾರಥಿ ಹಾಗೂ ಧರ್ಮ ಆನೆ ಎಂಟ್ರಿ ನೀಡಿವೆ. 30ಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಮರಾ ಅಳವಡಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹುಲಿ ಹೆಜ್ಜೆ ಗುರುತು ಜಾಡು ಹಿಡಿದು ಹೊರಟ ಅರಣ್ಯ ಇಲಾಖೆ ಸಿಬ್ಬಂದಿ ಹೊರಟಿದ್ದಾರೆ. ಆದರೆ, ನಾಲ್ಕು ದಿನವಾದರೂ ಹುಲಿ ಸುಳಿವು ಸಿಕ್ಕಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ