ಬೆಂಗಳೂರು: ಪರಿಚಯಿಸ್ಥರ ಮನೆಗೆ ಹೋಗಿದ್ದ ಏಳು ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ನಡೆದಿದೆ. ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಕೊನೆಯುಸಿರೆಳೆದಿರುವುದು ತಿಳಿದುಬಂದಿದ್ದು, ಘಟನೆ ಸಂಬಂಧ ಪೋಷಕರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿನೋದ್ ಮತ್ತು ನಳಿನ ದಂಪತಿಯ ಪುತ್ರಿ ಆಕೃತಿ (7) ಮೃತ ಬಾಲಕಿ. ಬಾಲಕಿ ಹಠ ಮಾಡುತ್ತಿದ್ದಾಳೆ ಬುದ್ಧಿವಾದ ಹೇಳಿ ಎಂದು ತಮ್ಮ ಮನೆ ಕೆಳಗಿನ ಮಹಡಿಯ ನಂಜುಂಡಪ್ಪ ಎಂಬುವವರ ಮನೆಗೆ ಪೋಷಕರು ಕಳುಹಿಸಿದ್ದರು. ಶನಿವಾರ ರಾತ್ರಿ ಊಟ ಮಾಡಿದ ಬಳಿಕ ಬಾಲಕಿ ಅಲ್ಲೇ ಮಲಗಿದ್ದಳು. ಆದರೆ, ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬಾಲಕಿ ಅಸ್ವಸ್ಥಗೊಂಡಿದ್ದು, ತಕ್ಷಣ ಆಕೆಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆ ವೇಳೆಗೆ ಬಾಲಕಿ ಮೃತಪಟ್ಟಿದ್ದಾಳೆ.
ಇದನ್ನೂ ಓದಿ | Assault Case: ಪೊಲೀಸ್ ಪೇದೆ ಮೇಲೆ ಹಲ್ಲೆ; 16 ಮಂದಿ ವಿರುದ್ಧ ಎಫ್ಐಆರ್
ಮಗುವಿಗೆ ಭಯ ಹುಟ್ಟಿಸುವ ವೇಳೆ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಭಯ ಹುಟ್ಟಿಸಲು ಮಗುವಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಬಾಲಕಿಯ ಕೈ ಮೇಲೆ ರಕ್ತ ಹೆಪ್ಪುಗಟ್ಟಿದ ಗಾಯಗಳು ಪತ್ತೆಯಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಬಾಲಕಿ ಪೋಷಕರು, ಕೆಳಗಡ ಮನೆಯ ಕುಟುಂಬದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಎಸ್‌ಎಲ್ ತಂಡದ ಜೊತೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.