ಹಾಸನ: ಕಾಲೇಜಿಗೆ ಹೋಗುವಾಗ, ಬರುವಾಗ; ಉದ್ಯೋಗಕ್ಕೆಂದು ಬಸ್ಸಿನಲ್ಲಿ ಹೋಗುವಾಗ, ಯಾವ ರಸ್ತೆಯಲ್ಲಿ ಹೋದರೂ ಹೆಣ್ಮಕ್ಕಳಿಗೆ ಬೀದಿ ಕಾಮಣ್ಣರ ಕಾಟ ತಪ್ಪುವುದೇ ಇಲ್ಲ. ಕೆಲವರು ದೂರದಿಂದಲೇ ಏನಾದರೊಂದು ಕೆಣಕು ಮಾತು ಆಡಿ ನೋಯಿಸಿದರೆ, ಕೆಲವರು ಹತ್ತಿರ ಬಂದೇ ಹೆದರಿಕೆ ಹುಟ್ಟಿಸುತ್ತಾರೆ. ಇನ್ನು ಕೆಲವರು ಮೈಮೇಲೇ ಬೀಳಲು ಬರುತ್ತಾರೆ. ಇದನ್ನು ಕೆಲವರು ಅಸಹಾಯಕತೆಯಿಂದ, ಇನ್ನು ಕೆಲವರು ಭಯದಿಂದ ಸಹಿಸಿಕೊಂಡು ನೋವನುಭವಿಸುತ್ತಾರೆ. ಅಲ್ಲೊಬ್ಬರು ಇಲ್ಲೊಬ್ಬರು ಹೆಣ್ಮಕ್ಕಳು ಇಂಥ ಕ್ರಿಮಿಗಳನ್ನು ಅಟ್ಟಾಡಿಸಿ ಹೊಡೆಯುವ ಧೈರ್ಯ ಮಾಡುತ್ತಾರೆ. ಆ ಮೂಲಕ ಉಳಿದವರಲ್ಲಿ ಒಂದಿಷ್ಟು ಧೈರ್ಯ ತುಂಬುತ್ತಾರೆ. ನಾವು ಸುಮ್ಮನಿದ್ದರೆ ಇನ್ನಷ್ಟು ಕೆಣಕುತ್ತಾರೆ, ಹಾಗಾಗಿ ಪ್ರತಿಭಟಿಸಿ ಎನ್ನುವ ಸಂದೇಶ ನೀಡುತ್ತಾರೆ.
ಈ ನಿಟ್ಟಿನಲ್ಲಿ ಹಾಸನದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತೋರಿದ ಧೈರ್ಯ, ಎದುರಿಸಿದ ಬಗೆ ಎಲ್ಲರಿಗೂ ಮಾದರಿಯಾಗಿದೆ. ಆಕೆ ಬೀದಿ ಕಾಮಣ್ಣನೊಬ್ಬನನ್ನು ಬೀದಿಯಲ್ಲೇ ಅಟ್ಟಾಡಿಸಿ ಬಡಿದಿದ್ದಾಳೆ.
ಆಗಿದ್ದೇನು?
ಹಾಸನ ನಗರದ ಜಿಲ್ಲಾಸ್ಪತ್ರೆ ಸಮೀಪದ ಬಿಎಸ್ಎನ್ಎಲ್ ಭವನದ ಬಳಿ ಮಂಗಳವಾರ ಮಧ್ಯಾಹ್ನ ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿ ಚುಡಾಯಿಸಿದ್ದಾನೆ. ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆಕೆಯನ್ನು ಚುಡಾಯಿಸಿ ಕೈ ಹಿಡಿದು ಎಳೆದಿದ್ದಾನೆ. ಆಗ ಕೆರಳಿದ ಆಕೆ ನಡುರಸ್ತೆಯಲ್ಲಿ ಆತನನ್ನು ಅಟ್ಟಾಡಿಸಿ ಹೊಡೆದಿದ್ದಾಳೆ. ನೂರಾರು ಜನರು ನೋಡನೋಡುತ್ತಿದ್ದಂತೆಯೇ ಆತನನ್ನು ಬೆನ್ನಟ್ಟಿ ಬಡಿದ ಆ ಯುವತಿಗೆ ಬಳಿಕ ಸಾರ್ವಜನಿಕರೂ ನೆರವು ನೀಡಿದ್ದಾರೆ. ತಾವೂ ಸೇರಿ ಯುವಕನಿಗೆ ಚೆನ್ನಾಗಿ ಒದೆ ಕೊಟ್ಟಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಯವತಿಯೇನೂ ಒಬ್ಬಳೇ ಹೋಗುತ್ತಿರಲಿಲ್ಲ. ಗೆಳತಿಯರ ಜತೆ ಗುಂಪಿನಲ್ಲಿ ಹೋಗುತ್ತಿದ್ದಾಗಲೇ ಆತ ಹತ್ತಿರ ಬಂದು ಚುಡಾಯಿಸಿದ್ದಾನೆ. ಮಾತ್ರವಲ್ಲ ಕೈಯಲ್ಲಿ ಹಿಡಿದುಕೊಂಡಿಕೊಂಡಿದ್ದಾನೆ. ಆಗ ಆಕೆ ರೋಷಾವೇಷ ತಾಳಿದ್ದಾಳೆ.
ನಿಜವೆಂದರೆ ಈ ಯುವಕ ಆಕೆಯನ್ನು ಮತ್ತು ಇತರ ಹುಡುಗಿಯರನ್ನು ಚುಡಾಯಿಸುತ್ತಿರುವುದು ಇದು ಮೊದಲನೇ ಸಲವಲ್ಲ ಎಂದು ಹೇಳಲಾಗಿದೆ. ಹುಡುಗಿ ಬೆನ್ನಟ್ಟಿ ಬಡಿಯುವಾಗಲೂ ಆಕೆ ಅದನ್ನೇ ಹೇಳಿದ್ದಾಳೆ. ʻಪ್ರತಿದಿನ ಹೀಗೇ ಮಾಡ್ತೀಯಾʼ ಎಂದು ಸಿಟ್ಟಿನಿಂದ ಹೇಳಿ ಹೇಳಿ ಓಡಿಸಿದ್ದಾಳೆ. ಸಾರ್ವಜನಿಕರೂ ಸೇರಿ ಆತನಿಗೆ ಧರ್ಮದೇಟು ನೀಡಿದ್ದು, ಅಂತಿಮವಾಗಿ ಪೊಲೀಸರು ಬಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ.
ಹಾಸನ ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಲ್ಲೇ ಪ್ರಕರಣ ದಾಖಲಾಗಿದೆ. ಬೀದಿಯಲ್ಲಿ ತಮ್ಮ ಪಾಡಿಗೆ ಹೋಗುವ ಹೆಣ್ಮಕ್ಕಳನ್ನು ಗೋಳು ಹೊಯ್ದುಕೊಳ್ಳುವ ಕಾಮಣ್ಣರಿಗೆ ಈ ಘಟನೆ ಒಳ್ಳೆಯ ಪಾಠವಾಗಿದೆ.
ಈ ನಡುವೆ ಆರೋಪಿಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಬಾರದು, ಅವನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿಕೊಂಡು ಹೋಗಬೇಕು ಎಂಬ ಬೇಡಿಕೆ ಮಂಡಿಸಿದರು ಸಾರ್ವಜನಿಕರು. ಆದರೆ, ಆಗಲೇ ಸಾಕಷ್ಟು ಹೊಡೆತ ತಿಂದಿದ್ದ ಯುವಕ ಇನ್ನಷ್ಟು ಹೊತ್ತು ಅವರ ಕೈಗೆ ಸಿಕ್ಕರೆ ಸತ್ತೇ ಹೋದಾನು ಎನ್ನುವ ಭಯ ಪೊಲೀಸರಿಗೆ ಕಾಡಿರಬೇಕು!
ಇದನ್ನೂ ಓದಿ :Ragging Case: ವಿಜಯಪುರದಲ್ಲಿ ಕಾಲೇಜು ಹುಡುಗಿಯರ ಚುಡಾಯಿಸುತ್ತಿದ್ದರಿಗೆ ಬಿತ್ತು ಧರ್ಮದೇಟು