ಧಾರವಾಡ: ಹುಡುಗಿಯೊಬ್ಬಳು ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿಯ ಬಲೆಗೆ ಬಿದ್ದಿದ್ದಲ್ಲದೆ, ಇದಕ್ಕೆ ಅಡ್ಡಿಯಾದ ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ನಿವಾಸಿಯಾದ ಜೀಜುಬಾಯಿ ಎಂಬವರ ಅಪ್ರಾಪ್ತ ಮಗಳು ಕಲಘಟಗಿ ತಾಲೂಕಿನ ಪರಶುರಾಮ ಲಮಾಣಿ ಎನ್ನುವ ಯುವಕನ ಜೊತೆ ಪ್ರೀತಿಯಾಟ ಶುರು ಮಾಡಿದ್ದಳು. ಇವರಿಬ್ಬರ ಪ್ರೀತಿಗೆ ಅಪ್ರಾಪ್ತ ಮಗಳ ತಾಯಿ ಅಡ್ಡಿಯಾಗಿದ್ದಾರೆ ಎಂದು ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾಗಿದ್ದಾಳೆ. ಅದಕ್ಕೆ ತನ್ನ ಪ್ರಿಯಕರನ ಸಾಥ್ ಕೂಡಾ ಪಡೆದಿದ್ದಾಳೆ.
ಶುಕ್ರವಾರ ರಾತ್ರಿ ಸುಮಾರು 2.30ಕ್ಕೆ ಮನೆಗೆ ನುಗ್ಗಿದ ಪರಶುರಾಮ ಹಿಂದಿನ ಬಾಗಿಲಿನಿಂದ ಮನೆ ಪ್ರವೇಶಿಸಿ ನೇರವಾಗಿ ಜೀಜುಬಾಯಿ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ. ಇದಕ್ಕೂ ಮುನ್ನ ಬೆನ್ನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಕೂಡಲೇ ಜಿಜುಬಾಯಿ ಜೋರಾಗಿ ಕಿರುಚಿದ್ದಾಳೆ. ತಕ್ಷಣವೇ ಅಲ್ಲಿಂದ ಅಪ್ರಾಪ್ತ ಯುವತಿ ಮತ್ತು ಪರಶುರಾಮ ಇಬ್ಬರು ಎಸ್ಕೇಪ್ ಆಗಿದ್ದಾರೆ.
ಇದನ್ನು ಓದಿ|ಹಳೆಯ ದ್ವೇಷ: ಕೂದಲಿಗೆ ಬಣ್ಣ ಹಚ್ಚಿಕೊಳ್ಳಲು ಪಾರ್ಲರ್‌ಗೆ ಬಂದವನ ಮರ್ಡರ್
ಸದ್ಯ ಘಟನೆ ಸಂಬಂಧ ಜೀಜುಬಾಯಿ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ವರ್ಷ ಜೀಜುಬಾಯಿ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿರುವುದಕ್ಕಾಗಿ ಈಗಾಗಲೇ ಪೋಕ್ಸೋ ಕಾಯ್ದೆಯಡಿಯಲ್ಲಿ ಜೈಲುಪಾಲಾಗಿದ್ದ ಪರಶುರಾಮ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ರಿಲೀಸ್ ಆಗಿದ್ದ. ಈಗ ಅದೇ ಸಿಟ್ಟಿನಿಂದ ಜೀಜುಬಾಯಿ ಹತ್ಯೆಗೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.