ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಪುಂಡರ ಹಾವಳಿ (Miscreants Menace) ವಿಪರೀತವಾಗಿದೆ. ಇಲ್ಲಿ ಶಾಲೆ, ಕಾಲೇಜುಗಳ ಗೋಡೆಗಳ (Obscene letters on school walls) ಮೇಲೆ ಈ ಪುಂಡರು ಅಶ್ಲೀಲ ಬರಹಗಳನ್ನು (Filthy writings) ಬರೆದಿದ್ದಾರೆ. ಇದರಿಂದ ವಿದ್ಯಾರ್ಥಿನಿಯರು (Girls Harrassed) ತಲೆ ಎತ್ತಿ ನಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಪುಂಡರನ್ನು ಮಟ್ಟ ಹಾಕಬೇಕು ಎಂಬ ಕೂಗು ಜೋರಾಗಿದೆ.
ವಿದ್ಯಾರ್ಥಿನಿಯರನ್ನು ಅಶ್ಲೀಲವಾಗಿ ನಿಂದಿಸುವುದು, ಅವರನ್ನು ಅವಹೇಳನ ಮಾಡುವುದೇ ಪ್ರಧಾನವಾಗಿರುವ ಬರಹಗಳನ್ನು ಗೋಡೆಯಲ್ಲಿ ಬರೆಯಲಾಗಿದೆ. ಅದರಲ್ಲೂ ಮುಸ್ಲಿಂ ಹುಡುಗಿಯರನ್ನೆ ಹೆಚ್ಚು ಟಾರ್ಗೆಟ್ ಮಾಡಿಕೊಂಡು ಬರಹಗಳನ್ನು ಬರೆಯಲಾಗಿದೆ.
ಕನಕಗಿರಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು (Kanakagiri PU College) ಆವರಣದ ಪ್ರಾಥಮಿಕ ಶಾಲಾ ಗೋಡೆ ಮೇಲೆ ಬರೆಹ ಕಾಣಿಸಿಕೊಂಡಿದೆ. ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿನಿಯರ ಹೆಸರಿನಲ್ಲಿ ಅಶ್ಲೀಲ ಬರಹಗಳನ್ನು ಬರೆಯಲಾಗಿರುವುದು ಹೆಣ್ಮಕ್ಕಳಿಗೆ ಮುಜುಗರ ಉಂಟು ಮಾಡುತ್ತಿದೆ.
ಈ ಪುಂಡರು ಹೀಗೆ ಹೆಣ್ಮಕ್ಕಳ ವಿಚಾರದಲ್ಲಿ ಆಟವಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ವಿದ್ಯಾರ್ಥಿನಿಯರ ಅವಹೇಳನ, ಅಪಹಾಸ್ಯ ಮಾಡಲಾಗಿತ್ತು. ಈ ಕುರಿತಂತೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ಆದರೆ, ಆಗ ಬರೆದವರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಇದರಿಂದ ಉತ್ತೇಜಿತರಾದ ಪುಂಡರು ತಮ್ಮ ಕೃತ್ಯವನ್ನು ಮುಂದುವರಿಸಿದ್ದು, ಇದೀಗ ಇನ್ನಷ್ಟು ಹೆಣ್ಮಕ್ಕಳ ಹೆಸರಿನಲ್ಲಿ ಅಶ್ಲೀಲ ಬರಹ ಬರೆದು ತಮ್ಮ ಕೀಳುಮಟ್ಟವನ್ನು ಪ್ರದರ್ಶಿಸಿದ್ದಾರೆ.
ಇಬ್ಬರು ಹುಡುಗರ ಮೇಲೆ ಸಂಶಯ
ಶಾಲೆ ಗೋಡೆ ಮೇಲೆ ಅಶ್ಲೀಲ ಬರಹ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ (Yashodha Vantagodi) ಅವರು, ಇಂದು ಮತ್ತೆ ಶಾಲಾ ಗೋಡೆ ಮೇಲೆ ಅಶ್ಲೀಲ ಬರೆಹ ಬರೆದಿದ್ದಾರೆ ಎಂಬ ಮಾಹಿತಿ ಬಂದಿದೆ. ಸ್ಥಳಕ್ಕೆ ಗಂಗಾವತಿ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಬೆರಳಚ್ಚು ತಂಡ ಹಾಗೂ ಶ್ವಾನದಳವನ್ನು ಸ್ಥಳಕ್ಕೆ ಕಳಿಸಲಾಗುತ್ತಿದೆʼʼ ಎಂದು ಹೇಳಿದರು.
ʻʻಇಬ್ಬರು ಹುಡುಗರು ಆ ರೀತಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಸುಮಾರು 15 ಯುವಕರನ್ನು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಲಾಗಿದೆ. ಈ ಹಿಂದೆ ಇದೇ ರೀತಿ ಬರೆದಿರುವ ಪ್ರಕರಣ ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ತನಿಖೆ ಮಾಡಲಾಗುತ್ತಿದೆ. ಕೆಲ ಕಾರಣಾಂತರದಿಂದ ಅಲ್ಲಿ ನೈಟ್ ಬೀಟ್ ಹಾಕಲು ಆಗಿಲ್ಲ” ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಶಾಲೆಗೆ ಬಿಂದಿ ಇಟ್ಟು ಹೋದ ಹಿಂದು ವಿದ್ಯಾರ್ಥಿನಿಗೆ ಥಳಿಸಿದ ಕ್ರಿಶ್ಚಿಯನ್ ಶಾಲೆ ಶಿಕ್ಷಕಿ; ಬಾಲಕಿ ಆತ್ಮಹತ್ಯೆ
ʻʻಈಗ ಶಾಲೆಯ ಆವರಣದಲ್ಲಿ ಸಿಸಿ ಕೆಮೆರಾ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ದೃಷ್ಟಿಕೋನದಿಂದ ಪರಿಶೀಲನೆ ನಡೆಸುತ್ತಿದ್ದೇವೆʼʼ ಎಂದು ಕೊಪ್ಪಳ ಎಸ್ಪಿ ಯಶೋಧಾ ಹೇಳಿದ್ದಾರೆ.
ಮುಸ್ಲಿಂ ಹೆಣ್ಮಕ್ಕಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಿದಂತಿರುವ ಈ ಬರಹಗಳ ಹಿಂದೆ ಯಾರಿದ್ದಾರೆ, ಎಳೆ ಮಕ್ಕಳ ಮೇಲೆ ಯಾಕೆ ದ್ವೇಷ ಸಾಧಿಸುತ್ತಿದ್ದಾರೆ ಎಂಬ ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಇದು ಶಾಲೆಯ ವಿದ್ಯಾರ್ಥಿಗಳದೇ ಕೃತ್ಯವೇ ಅಥವಾ ಹೊರಗಿನ ಶಕ್ತಿಗಳ ಕೈವಾಡವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯಬೇಕಾಗಿದೆ.