Site icon Vistara News

‌PM Modi : ನರೇಂದ್ರ ಮೋದಿಗೆ ಬುದ್ಧಿ ಹೇಳಿ; ಪ್ರಧಾನಿ ವಿರುದ್ಧ ರಾಷ್ಟ್ರಪತಿಗೆ ದಿನೇಶ್‌ ಗುಂಡೂರಾವ್ ಪತ್ರ

PM Narendra Modi Precident Droupadi murmu and Dinsesh Gundurao

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (‌PM Modi) ಅವರು ಸರ್ಕಾರದ (“ರಾಷ್ಟ್ರೀಯ ಕುಡಗೋಲು ಕಣ ರಕ್ತಹೀನತೆ ನಿವಾರಣೆ ಅಭಿಯಾನ”) ಅಧಿಕೃತ ಕಾರ್ಯಕ್ರಮವನ್ನು ಪ್ರತಿಪಕ್ಷಗಳ ಮೇಲಿನ ಟೀಕೆಗೆ ಬಳಸಿಕೊಳ್ಳದಂತೆ ಸಲಹೆ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundurao) ಮನವಿ ಮಾಡಿದ್ದಾರೆ.

ದೇಶವನ್ನು ಕಾಡುತ್ತಿರುವ ಸಿಕಲ್‌ ಸೆಲ್‌ (ಕುಡಗೋಲು ಕಣ ರಕ್ತಹೀನತೆ) ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರ “ರಾಷ್ಟ್ರೀಯ ಕುಡಗೋಲು ಕಣ ರಕ್ತಹೀನತೆ ನಿವಾರಣೆ ಅಭಿಯಾನ”ವನ್ನು ಹಮ್ಮಿಕೊಂಡಿದೆ. 2047ರ ವೇಳೆಗೆ ದೇಶವು ಸಿಕಲ್‌ ಸೆಲ್‌ ಮುಕ್ತವಾಗಬೇಕೆಂದು ಪಣ ತೊಡಲಾಗಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು, ಕಾರ್ಯಕ್ರಮಕ್ಕೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಚಾಲನೆ ನೀಡಿದ್ದರು. ಇಲ್ಲಿ ಮಾತನಾಡಬೇಕಾದರೆ, ಸರ್ಕಾರಿ ಕಾರ್ಯಕ್ರಮವನ್ನು ದುರ್ಬಳಕೆ ಮಾಡಿಕೊಂಡಿದ್ದು, ವಂಶಾಡಳಿತ ರಾಜಕಾರಣ, ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ಬಗ್ಗೆ ಟೀಕೆ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳನ್ನು ಪ್ರತಿಪಕ್ಷಗಳ ಮೇಲೆ ಟೀಕೆ ಮಾಡಲು ಬಳಸಿಕೊಳ್ಳದಂತೆ ನಿಮ್ಮ ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಂಡು ಸಲಹೆ ನೀಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪತ್ರ ಬರೆದು ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ಕಾರ್ಯಕ್ರಮಗಳನ್ನು ಪಕ್ಷದ ಕಾರ್ಯಕ್ರಮವನ್ನಾಗಿಸಿಕೊಳ್ಳುತ್ತಿದ್ದಾರೆ. ಅವರು ಭಾಷಣದ ವೇಳೆ ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಪೂರ್ವಗ್ರಹ ಪೀಡಿತ ಹೇಳಿಕೆಗಳನ್ನು ದಾಖಲಿಸುತ್ತಿರುವುದು ಆಕ್ಷೇಪಾರ್ಹವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Caste Census : ರಾಜ್ಯದಲ್ಲಿ ಕುರುಬರು ಶೇ. 7ರಷ್ಟಿದ್ದಾರೆ; ಅವರಿಗಾಗಿಯೇ ಜಾತಿ ಗಣತಿ ಮಾಡಿಸಿದೆ: ಸಿಎಂ ಸಿದ್ದರಾಮಯ್ಯ

ಶನಿವಾರ (ಜೂನ್‌ 2) ಸಿಕಲ್ ಸೆಲ್ ನಿವಾರಣಾ ಮಿಷನ್‌ಗೆ ಚಾಲನೆ ನೀಡುವ ವೇಳೆ ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದರು. 2016ರಲ್ಲೇ ಕರ್ನಾಟಕ ರಾಜ್ಯವು ಸಿಕಲ್ ಸೆಲ್ ರಕ್ತಹೀನ ಕಾಯಿಲೆ ಬಗ್ಗೆ ಎಚ್ಚೆತ್ತುಕೊಂಡಿತ್ತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೈಸೂರು ಬುಡಕಟ್ಟು ಜನರ ತಪಾಸಣೆ ನಡೆಸಿ ಉಚಿತ ಆರೋಗ್ಯ ಚಿಕಿತ್ಸೆಯನ್ನು ನೀಡಿತ್ತು. ಸಿಕಲ್ ಸೆಲ್ ತಡೆಗಟ್ಟುವ ಕುರಿತು ಕರ್ನಾಟಕದ ಅಭಿಪ್ರಾಯವನ್ನು ಮೋದಿ ಕೇಳಲೇ ಇಲ್ಲ. ಬದಲಾಗಿ ಇದನ್ನು ತಮ್ಮ ರಾಜಕೀಯ ಭಾಷಣಕ್ಕೆ ಬಳಸಿಕೊಂಡರು ಎಂದು ಮೋದಿ ನಡೆ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪತ್ರದ ಸಾರಾಂಶವೇನು?

“ರಾಷ್ಟ್ರೀಯ ಕುಡಗೋಲು ಕಣ ರಕ್ತಹೀನತೆ ನಿರ್ಮೂಲನೆ ಮಿಷನ್”ನ ರಾಷ್ಟ್ರೀಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಂಶಪಾರಂಪರ್ಯ ರಾಜಕಾರಣ ಸೇರಿದಂತೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ನೀಡಿರುವ ವಿವಿಧ ಭರವಸೆಗಳನ್ನು ಮೋಸ ಎಂದು ಹೇಳಿದ್ದಾರೆ. ಜತೆಗೆ ನಾಯಕರನ್ನು ಭ್ರಷ್ಟರು ಎಂದು ಕರೆದಿದ್ದಾರೆ. ಕಳೆದ 70 ವರ್ಷಗಳಲ್ಲಿ ಏನನ್ನೂ ಸಾಧಿಸಿಲ್ಲ ಎಂದು ಆರೋಪಿಸಿದ್ದಾರೆ. ಇವರ ಪೂರ್ವಗ್ರಹ ಹೇಳಿಕೆಗೆ ಸರ್ಕಾರದ ಅಧಿಕೃತ ಕಾರ್ಯಕ್ರಮವನ್ನು ವೇದಿಕೆಯಾಗಿ ಮಾಡಿಕೊಂಡಿದ್ದು ಸರಿಯಲ್ಲ.

ಪ್ರತಿಯೊಬ್ಬ ನಾಗರಿಕನು ತನ್ನ ರಾಜಕೀಯ ದೃಷ್ಟಿಕೋನಗಳನ್ನು ಅನೌಪಚಾರಿಕ ಅಥವಾ ರಾಜಕೀಯ ವೇದಿಕೆಗಳಲ್ಲಿ ವ್ಯಕ್ತಪಡಿಸಲು ಮುಕ್ತನಾಗಿದ್ದಾನೆ. ಆದರೆ, ಭಾರತದ ಪ್ರಧಾನಿಯಾದವರು ಸರ್ಕಾರಿ ಕಾರ್ಯಕ್ರಮವನ್ನು ವಿರೋಧ ಪಕ್ಷದ ಬಗ್ಗೆ ಸುಳ್ಳು ಪ್ರಚಾರ ಮಾಡಲು ಬಳಸಿಕೊಂಡಿರುವುದು ಕ್ಷಮಾರ್ಹವಾಗಿದೆ.

2014ರಿಂದೀಚೆಗೆ ಪ್ರಧಾನಿಯವರು ಇಂತಹ ನಡವಳಿಕೆಯನ್ನು ಪದೇ ಪದೆ ಪ್ರದರ್ಶಿಸುತ್ತಿದ್ದಾರೆ. ತಮ್ಮ ಭಾಷಣದ ಪ್ರತಿಯೊಂದು ಅವಕಾಶವನ್ನು ಪ್ರತಿಪಕ್ಷಗಳ ವಿರುದ್ಧ ಅನಗತ್ಯ ವೈಯಕ್ತಿಕ ದಾಳಿಗಳನ್ನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಜಾರಿಗೆ ತರುತ್ತಿರುವ ನೀತಿಗಳು ಮತ್ತು ಯೋಜನೆಗಳ ವಿರುದ್ಧ ಸಂಪೂರ್ಣವಾಗಿ ಸುಳ್ಳನ್ನು ಹರಡುತ್ತಿದ್ದಾರೆ.

ಕರ್ನಾಟಕದ ಸಾಧನೆ ನಿರ್ಲಕ್ಷ್ಯ

ಕುಡಗೋಲು ಕಣ ರಕ್ತಹೀನತೆ ಕಾಯಿಲೆಯು ಹೆಚ್ಚಾಗಿ ಭಾರತದ ಬುಡಕಟ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲ ಅಂಶಗಳ ಬಗ್ಗೆ ಪ್ರಧಾನಿ ಗಮನಹರಿಸಬೇಕಿತ್ತು. ಅದು ಬಿಟ್ಟು ರಾಜಕೀಯವಾಗಿ ಮಾತನಾಡಿದ್ದಾರೆ. ಇಂದು ಬುಡಕಟ್ಟು ಪ್ರದೇಶಗಳು ಹೊತ್ತಿ ಉರಿಯುತ್ತಿದೆ. ಇಂತಹ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ಪ್ರಧಾನ ಮಂತ್ರಿ ಅವರು ಮಾತನಾಡಬೇಕಿತ್ತು. ಆದರೆ, ಅದನ್ನು ಮಾಡಲಿಲ್ಲ. ಇನ್ನು ಕುಡಗೋಲು ಕಣ ರಕ್ತಹೀನತೆ ಕಾಯಿಲೆ ಮುಕ್ತ ಪ್ರಕ್ರಿಯೆಯಲ್ಲಿ ಕರ್ನಾಟಕವೂ ಸಾಧನೆ ಮಾಡಿದೆ. ಕುಡಗೋಲು ಕಣ ರೋಗದ ವಿರುದ್ಧ ಹೋರಾಡುವ ಐತಿಹಾಸಿಕ ಪ್ರಯತ್ನಗಳನ್ನು ಮಾಡಿದೆ. ಆದರೆ, ಇದನ್ನು ಪ್ರಧಾನಿಯವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ.

ಇದನ್ನೂ ಓದಿ: BS Yediyurappa : ರಾತ್ರಿ 9 ಗಂಟೆಗೆ ಪ್ರತಿಪಕ್ಷ ನಾಯಕನ ಘೋಷಣೆ? ಅಮಿತ್‌ ಶಾ ಮನೆಯಲ್ಲಿ ಸಭೆ, ಬಿಎಸ್‌ವೈ ಭಾಗಿ

ಪ್ರಧಾನಿಗೆ ನೀವೇ ಹೇಳಿ

ಆದ್ದರಿಂದ, ರಾಜಕೀಯ ಹೇಳಿಕೆಗಳನ್ನು ನೀಡಲು, ವಿರೋಧ ಪಕ್ಷಗಳನ್ನು ಟೀಕಿಸಲು ಮತ್ತು ಸುಳ್ಳನ್ನು ಹರಡಲು ಸರ್ಕಾರಿ ಕಾರ್ಯಗಳನ್ನು ಬಳಸದಂತೆ ಪ್ರಧಾನಿ ಮತ್ತು ಅವರ ಸಹೋದ್ಯೋಗಿಗಳಿಗೆ ನೀವು ನಿಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಸಲಹೆಯನ್ನು ನೀಡಬಹುದಾಗಿದ್ದು, ನೀವು ಕ್ರಮ ವಹಿಸುತ್ತೀರೆಂಬ ವಿಶ್ವಾಸ ಇದೆ ಎಂದು ದಿನೇಶ್‌ ಗುಂಡೂರಾವ್‌ ಪತ್ರದಲ್ಲಿ ಕೋರಿದ್ದಾರೆ.

Exit mobile version