Site icon Vistara News

BY Vijayendra: ರಾಜಕೀಯ ಪಕ್ಕಕ್ಕಿಡಿ; ಈಗಲೇ ರೈತರಿಗೆ ಪರಿಹಾರ ನೀಡಿ: ಬಿ.ವೈ. ವಿಜಯೇಂದ್ರ ಆಗ್ರಹ

BY Vijayendra visits Davanagare

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು (Congress Government) ಚುನಾವಣಾ ರಾಜಕಾರಣವನ್ನು (Electoral politics) ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಬೇಕು. ತಕ್ಷಣ ಪರಿಹಾರ ಘೋಷಿಸಿ ರೈತರಿಗೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆಗ್ರಹಿಸಿದರು.

ದಾವಣಗೆರೆ ತಾಲೂಕಿನ ಆನಗೋಡು ಮತ್ತು ಅಣಜಿ ಮಧ್ಯದಲ್ಲಿರುವ ಜಮಾಪುರ ಗ್ರಾಮದಲ್ಲಿ ಸೋಮವಾರ (ಜನವರಿ 1) ಬರಗಾಲ ಪರಿಸ್ಥಿತಿಯನ್ನು ವೀಕ್ಷಿಸಿದ ಬಿ.ವೈ. ವಿಜಯೇಂದ್ರ ಅಲ್ಲಿನ ರೈತರಿಗೆ ಧೈರ್ಯ ತುಂಬಿದರು. ಇದೇ ವೇಳೆ ಸ್ಥಳೀಯ ರೈತರ ಸಮಸ್ಯೆಯನ್ನು ಆಲಿಸಿದರು. ಎಕರೆಗೆ ಆದ ಬೆಳೆ ನಷ್ಟ, ಕುಟುಂಬದ ಸಂಕಷ್ಟ, ಮಾಡಿಕೊಂಡ ಸಾಲ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

BY Vijayendra visits Davanagare

ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ಆಕ್ರೋಶ

ಈ ವೇಳೆ ಮಾತನಾಡಿದ ಬಿ.ವೈ. ವಿಜಯೇಂದ್ರ, ರಾಜ್ಯದಲ್ಲಿ ರೈತರ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ. ಇಲ್ಲಿನ ರೈತ ಮರುಳಸಿದ್ದಪ್ಪ ಎಂಬುವವರು ಬೆಳೆದ ಮೆಕ್ಕೆ ಜೋಳ ಸಂಪೂರ್ಣವಾಗಿ ನಾಶವಾಗಿದೆ. ಎಕರೆಗೆ 25ರಿಂದ 30 ಸಾವಿರ ಖರ್ಚು ಮಾಡಿದ್ದಾರೆ. ಮರುಳಸಿದ್ದಪ್ಪ ಮಾತ್ರವಲ್ಲದೆ, ಅವರ ಕುಟುಂಬಸ್ಥರಾದ ಸಿದ್ದಮ್ಮನ ಕಣ್ಣಲ್ಲೂ ನೀರನ್ನು ನೋಡುತ್ತಿದ್ದೇವೆ. ರೈತರ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರವು ಬರಗಾಲ ಪರಿಹಾರ ಮೊತ್ತವನ್ನು ಘೋಷಣೆ ಮಾಡಿದರೆ ಸಾಲದು. ಅದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳಂತೆ ಡಿಬಿಟಿ (ನೇರ ಸೌಲಭ್ಯ ವರ್ಗಾವಣೆ) ಮೂಲಕ ತಕ್ಷಣವೇ ರೈತರನ್ನು ತಲುಪುವಂತಾಗಬೇಕು ಎಂದು ‌ಬಿ.ವೈ. ವಿಜಯೇಂದ್ರ ಹೇಳಿದರು.

ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಬಿ.ವೈ. ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ ಡಿಬಿಟಿ ಮೂಲಕ ಕೋಟ್ಯಂತರ ರೈತರಿಗೆ 6 ಸಾವಿರ ರೂಪಾಯಿ ಜಮಾ ಮಾಡುತ್ತಾರೆ. ಯಡಿಯೂರಪ್ಪ ಅವರು 4 ಸಾವಿರ ರೂಪಾಯಿ ಕೊಡುತ್ತಿದ್ದರು. ಆದರೆ, ಅದನ್ನು ಸಿದ್ದರಾಮಯ್ಯ ಸರ್ಕಾರ ಬಂದ್ ಮಾಡಿದೆ ಎಂದು ಆಕ್ರೋಶವನ್ನು ಹೊರಹಾಕಿದರು.

BY Vijayendra visits Davanagare

ಕೇಂದ್ರ ಸರ್ಕಾರದ ಯೋಜನೆಗಳು ಮಧ್ಯವರ್ತಿಗಳಿಲ್ಲದೆ ನೇರವಾಗಿ ಬಡವರ ಖಾತೆಗೆ ತಲುಪುತ್ತಿದೆ. ರಾಜ್ಯ ಸರ್ಕಾರ ಜಾಹೀರಾತು ಕೊಟ್ಟು ಪ್ರಚಾರ ಪಡೆಯುವ ಬದಲಾಗಿ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಿಸಬೇಕು ಎಂದು ಒತ್ತಾಯಿಸಿದರು.‌

ಕಾಂಗ್ರೆಸ್ ಪಕ್ಷ ಹತಾಶ ಮನೋಭಾವದಲ್ಲಿದೆ

ಕಾಂಗ್ರೆಸ್ ಪಕ್ಷ ಹತಾಶ ಮನೋಭಾವದಲ್ಲಿದೆ. ಇವತ್ತು ಸಂಸದ ಪ್ರತಾಪ್ ಸಿಂಹ ಅವರ ತಮ್ಮನ ವಿಚಾರದಲ್ಲಿ ಅದೇ ರೀತಿ ನಡೆದುಕೊಂಡಿದೆ. ಇದೊಂದು ರಾಜಕೀಯ ಪ್ರೇರಿತ ಕ್ರಮವೆಂದು ಎಂಥ ಅನಕ್ಷರಸ್ಥರೂ ಹೇಳುತ್ತಾರೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ. 5 ರಾಜ್ಯಗಳ ಚುನಾವಣಾ ಫಲಿತಾಂಶವನ್ನು ನೀವೆಲ್ಲ ಗಮನಿಸಿದ್ದೀರಿ. ಕಾಂಗ್ರೆಸ್ ಸರ್ಕಾರವು ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದೆ. ಪ್ರತಾಪ್ ಸಿಂಹ ಅಥವಾ ಅವರ ಸಹೋದರ ಇದಕ್ಕೆ ಹೆದರುವ ಪ್ರಶ್ನೆ ಇಲ್ಲ. ಅವರು ಇದೆಲ್ಲವನ್ನೂ ಎದುರಿಸುತ್ತಾರೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವುದೇ ಸಿಎಂ ಆದ್ಯತೆ

ಹೊಸ ವರ್ಷದಲ್ಲಿ ನಮ್ಮೆಲ್ಲ ಮುಖಂಡರ ಜತೆ ಬೂಟಾಟಿಕೆ ಮಾಡಲು ಬರಗಾಲ ವೀಕ್ಷಣೆಗೆ ಬಂದಿಲ್ಲ. ಇವತ್ತಿನ ಭೇಟಿ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸ‌ಬೇಕು. ರಾಜ್ಯದಲ್ಲಿ ಭೀಕರ ಬರಗಾಲದ ಪರಿಣಾಮ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವುದೇ ಮುಖ್ಯಮಂತ್ರಿಗಳ ಆದ್ಯತೆಯಾಗಿದೆ ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದರು.

ರೈತರೇ ತಮ್ಮ ಆದ್ಯತೆ ಆಗಿರಲಿ

ರೈತಾಪಿ ವರ್ಗದಲ್ಲಿ ಎಲ್ಲ ಸಮಾಜ, ಎಲ್ಲ ವರ್ಗ, ಎಲ್ಲ ಧರ್ಮದವರೂ ಇರುತ್ತಾರೆ. ರೈತರೆಂದರೆ ಕೇವಲ ಹಿಂದುಗಳು, ಲಿಂಗಾಯತರಲ್ಲ. ಇವತ್ತು ದಲಿತ ರೈತ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ರಾಜ್ಯವು ಹೊಸ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಾಜ್ಯದ ರೈತರೇ ತಮ್ಮ ಆದ್ಯತೆ ಆಗಿರಲಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.

ನೀವು ಮೊದಲು ರೈತರಿಗೆ ಸ್ಪಂದಿಸಿ. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂಪಾಯಿಯನ್ನು ಘೋಷಿಸುವಾಗ ಕೇಂದ್ರವನ್ನು ಕೇಳುತ್ತಿಲ್ಲ. ರೈತರ ವಿಷಯ ಬಂದಾಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಗೆ ಬಿ.ವೈ. ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: Ram Janmabhoomi: 31 ವರ್ಷದ ಬಳಿಕ ಕೇಸ್‌ ರಿಓಪನ್;‌ ಹುಬ್ಬಳ್ಳಿಯಲ್ಲಿ ಅಯೋಧ್ಯೆ ಹೋರಾಟಗಾರರಿಗೆ ಹುಡುಕಾಟ!

ಸಂಸದ ಜಿಎಂ. ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್, ಮಾಜಿ ಸಚಿವ ರೇಣುಕಾಚಾರ್ಯ, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.

Exit mobile version