ಮೈಸೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಉರುಳಿಸುವುದಕ್ಕಾಗಿ ಆಪರೇಷನ್ ಕಮಲ (Karnataka Election) ಮಾಡಲಾದ ಎರಡೂ ಪಕ್ಷಗಳ ಶಾಸಕರನ್ನು ರಂಜಿಸುವುದಕ್ಕಾಗಿ ೧೨ ಹುಡುಗಿಯರನ್ನು ಮುಂಬಯಿಗೆ ಕಳುಹಿಸಿಕೊಡಲಾಗಿತ್ತು ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಮುಂಬಯಿಗೆ ಹೋಗಿದ್ದ ಶಾಸಕರ ಪೈಕಿ ಒಬ್ಬರಾದ ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ʻಇದು ಕಪೋಲಕಲ್ಪಿತ ಕತೆ. ಯಾವ ಹುಡುಗಿಯರನ್ನು ಕಳುಹಿಸಲಾಗಿತ್ತು ಎಂಬ ಬಗ್ಗೆ ಪೂರ್ಣ ವಿವರ ಕೊಡಿʼ ಎಂದು ಅವರು ಆಗ್ರಹಿಸಿದ್ದಾರೆ.
ಬುಧವಾರ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಎಂಬಾತನ ವಿರುದ್ಧ ದಲಿತ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ ಬೆನ್ನಿಗೇ ಎಚ್.ಡಿ. ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದರು. ಸ್ಯಾಂಟ್ರೋ ರವಿಗೆ ಬಿಜೆಪಿಯ ಎಲ್ಲ ರಾಜಕಾರಣಿಗಳ ಜತೆ ಅತ್ಯಂತ ಹತ್ತಿರದ ಸಂಬಂಧವಿದೆ. ತಮ್ಮ ಸರಕಾರ ಉರುಳಿಸುವ ಪ್ರಕ್ರಿಯೆಯಲ್ಲಿ ಮುಂಬಯಿಗೆ ಹೋದ ಶಾಸಕರನ್ನು ರಂಜಿಸಲು ಈತನೇ ೧೨ ಹುಡುಗಿಯರನ್ನು ಸಪ್ಲೈ ಮಾಡಿದ್ದ ಎಂದು ಆಪಾದಿಸಿದ್ದರು. ಮಾತ್ರವಲ್ಲ, ತಮ್ಮ ಹೇಳಿಕೆಯ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದರು.
ಎಚ್. ವಿಶ್ವನಾಥ್ ಹೇಳಿದ್ದೇನು?
– ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ರಾಜಕಾರಣದ ಕುಟುಂಬದಿಂದ ಬಂದವರು. ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ಕೊಡುವಂತಹದ್ದು ಸರಿಯಲ್ಲ.
– ನಾವು ಪಕ್ಷ ಬಿಟ್ಟು ಹೋಗಲು ಕಾರಣ ನೀವು, ನಿಮ್ಮ ವೈಫಲ್ಯ. ಅದನ್ನು ಮುಚ್ಚಿಕೊಳ್ಳಲು, ನಮ್ಮ ಮೇಲೆ ಮಸಿ ಬಳಿಯಲು ಅಥವಾ ಹಿಟ್ ಅಂಡ್ ರನ್ ಹೇಳಿಕೆ ನೀಡುತ್ತಿದ್ದೀರಿ.
– ಯಾರು ಆ ಹೆಣ್ಣು ಮಕ್ಕಳು ಸಂಪೂರ್ಣ ಮಾಹಿತಿ ಕೊಡಿ. ಮಸಿ ಬಳಿದು ಹೋಗುವುದು ಸರಿಯಲ್ಲ. ಇದು ಒಬ್ಬ ನಾಯಕನ ಗುಣ ಲಕ್ಷಣ ಅಲ್ಲ.
– ಕುಮಾರಸ್ವಾಮಿ ಸಿನಿಮಾದವರು. ಕಲ್ಪನಾ ಲಹರಿಯಲ್ಲಿ ಹೇಳಬಾರದು. ಕುಮಾರಸ್ವಾಮಿ ಹೇಳಿರುವುದು ಕಟ್ಟು ಕಥೆ ಸುಳ್ಳಿನ ಕಂತೆ. ನಾನು ಪ್ರತ್ಯಕ್ಷದರ್ಶಿಯಾಗಿದ್ದೆ.
– ಯಾರೋ ಪಿಂಪ್ ಮಾತು ಕೇಳಿ ಈ ರೀತಿ ಮಾತು ಸರಿಯಲ್ಲ. ಯಾರದೋ ಮುಖಕ್ಕೆ ಮಸಿ ಬಳಿಯಲು ಈ ರೀತಿ ಹೇಳಿಕೆ ನೀಡಿದ್ದೀರಿ. ಮೂರು ವರ್ಷದಿಂದ ಏನು ಮಾಡುತ್ತಿದ್ದಿರಿ?
– ನಿಮ್ಮ ದುರಂಹಕಾರದಿಂದ ಜಿಗುಪ್ಸೆ ಬಂದು, ನಿಮ್ಮ ವರ್ತನೆಗಳಿಂದ ಬೇಸತ್ತು ಎಲ್ಲರೂ ಪಕ್ಷ ಬಿಟ್ಟು ಹೋಗಿದ್ದಾರೆ. ನೀವು ಯಾವುದೇ ಜವಾವ್ದಾರಿಯಿಲ್ಲದೆ ಮಾತನಾಡುತ್ತಿದ್ದೀರಿ.
ಇದನ್ನೂ ಓದಿ | Karnataka Election | ಬಾಂಬೇ ಬಾಯ್ಸ್‌ಗೆ 12 ಜನ ಹುಡುಗಿಯರನ್ನು ಸಪ್ಲೈ ಮಾಡಿದ್ದೇ ಸ್ಯಾಂಟ್ರೊ ರವಿ: HDK ಗಂಭೀರ ಆರೋಪ