Site icon Vistara News

GIM 2022 | ನ.2ರಿಂದ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಭರದ ಸಿದ್ಧತೆ; ಪ್ರಧಾನಿ ಮೋದಿ ಉದ್ಘಾಟನೆ

assembly-session-marithibbegowda and murugesh nirani talk war

ಬೆಂಗಳೂರು: ನವೆಂಬರ್‌ 2ರಿಂದ 4ರವರೆಗೆ ನಗರದ ಅರಮನೆ ಮೈದಾನದಲ್ಲಿ ಜಾಗತಿಕ‌ ಬಂಡವಾಳ ಹೂಡಿಕೆದಾರರ ಸಮಾವೇಶ(GIM 2022) ಆಯೋಜಿಸಲಾಗಿದ್ದು, ಸಮಾವೇಶಕ್ಕೆ ಎಲ್ಲ ರೀತಿಯ ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಮಾವೇಶವನ್ನು ಉದ್ಘಾಟನೆ ಮಾಡಿ ಮಾತನಾಡಲಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಭಗವಂತ ಖೂಬಾ, ನಿತಿನ್‌ ಗಡ್ಕರಿ ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಏಳು ಸುತ್ತಿನ ಕೋಟೆಯೊಳಗೆ ಮಲ್ಲಿಕಾರ್ಜುನ ಖರ್ಗೆ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ನವದೆಹಲಿಯಲ್ಲಿ ನಡೆಸಿದ ಅಂತಾರಾಷ್ಟ್ರೀಯ ಹಾಗೂ ದೇಶೀಯ ರೋಡ್‌ ಶೋ ಯಶಸ್ವಿಯಾಗಿದೆ. ಅದೇ ರೀತಿ, ಹೈದರಾಬಾದ್‌ ಹಾಗೂ ಮುಂಬೈನಲ್ಲಿ ನಡೆದ ರೋಡ್‌ ಶೋದಲ್ಲೀ ಉದ್ಯಮಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಅಂತಾರಾಷ್ಟ್ರೀಯ ರೋಡ್‌ಶೋನ ಭಾಗವಾಗಿ ಜಪಾನ್‌, ದಕ್ಷಿಣ ಕೊರಿಯಾ, ಅಮೆರಿಕ ಹಾಗೂ ಯೂರೋಪ್‌ಗೆ ಭೇಟಿ ನೀಡಲಾಗಿದೆ. ಈ ದೇಶಗಳಿಂದ ದೊಡ್ಡ ಮಟ್ಟದ ವಿದೇಶಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5000ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದ್ದು, ಇದರಿಂದ 5 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ಜಾಗತಿಕ ಹೂಡಿಕೆದಾರರ ಸಮಾವೇಶ ‘ಬಿಲ್ಡ್‌ ಫಾರ್‌ ದ ವರ್ಲ್ಡ್‌’ ಎಂಬ ಪರಿಕಲ್ಪನೆಯಡಿ ಅನಾವರಣಗೊಳ್ಳುತ್ತಿದೆ. ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆ ಹೊಂದಿರುವ ಕರ್ನಾಟಕ, ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ ಎಂದರು.

ರಾಜ್ಯದಲ್ಲಿ ಲ್ಯಾಂಡ್‌ ಬ್ಯಾಂಕ್‌
ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಭೂ ಹಂಚಿಕೆಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಮತ್ತು ಇತರ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಬಂಡವಾಳ ಹೂಡಿಕೆಯಲ್ಲಿ ಮುಂದು
ನಮ್ಮ ಸರ್ಕಾರದ ಹಲವು ಸುಧಾರಣಾ ಕ್ರಮಗಳ ಪರಿಣಾಮವಾಗಿ ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ. ನೂತನ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮದಲ್ಲಿನ ತಿದ್ದುಪಡಿಗಳಿಂದ ನಮ್ಮ ರಾಜ್ಯ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ. 2021ರ ಏಪ್ರಿಲ್ 21ರಿಂದ 2022ರ ಮಾರ್ಚ್‌ ಅವಧಿಯಲ್ಲಿ 1.76 ಲಕ್ಷ ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆ ಆಕರ್ಷಿಸುವಲ್ಲಿ ರಾಜ್ಯವು ಯಶಸ್ವಿಯಾಗಿದೆ. 2021ರ ಜುಲೈನಿಂದೀಚೆಗೆ ಬರೋಬ್ಬರಿ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಪ್ರಸ್ತಾವನೆಗಳು ರಾಜ್ಯಕ್ಕೆ ಬಂದಿವೆ ಎಂದು ತಿಳಿಸಿದರು.

ಗ್ರೀನ್ ಹೈಡ್ರೋಜನ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ನವೀಕರಿಸಬಹುದಾದ ಇಂಧನ, ಏರೋಸ್ಪೇಸ್ ಮತ್ತು ರಕ್ಷಣೆ, ಇ-ಮೊಬಿಲಿಟಿ ಮತ್ತು ಮೂಲಸೌಕರ್ಯಗಳಂತಹ ವಲಯಗಳಲ್ಲಿ 4 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಒಪ್ಪಂದ ಏರ್ಪಟ್ಟಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | ಡಿ.12ಕ್ಕೆ ಪಂಚಮಸಾಲಿ ನಡಿಗೆ ವಿಧಾನಸೌಧದ ಒಳಗೆ; 25 ಲಕ್ಷ ಮಂದಿಯೊಂದಿಗೆ ಪ್ರತಿಭಟನೆ: ಜಯಮೃತ್ಯುಂಜಯ ಶ್ರೀ

Exit mobile version