Site icon Vistara News

Gujarat riots | ಗುಜರಾತ್‌ ಹತ್ಯಾಕಾಂಡ ಹಿಂದುಗಳ ಪರಾಕ್ರಮ: ವಿವಾದಾತ್ಮಕ ಹೇಳಿಕೆ ನೀಡಿದ ವಿಹಿಂಪ ನಾಯಕ ಶರಣ್‌ ಪಂಪ್‌ವೆಲ್‌

Sharan pumpwell

#image_title

ತುಮಕೂರು: ಗುಜರಾತ್‌ ಹತ್ಯಾಕಾಂಡಕ್ಕೆ (Gujarat riots) ಸಂಬಂಧಿಸಿ ಬಿಬಿಸಿ ತಯಾರಿಸಿದ ಕಿರುಚಿತ್ರದ ಬಗ್ಗೆ ಜಾಗತಿಕವಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ವಿಶ್ವ ಹಿಂದು ಪರಿಷತ್‌ ನಾಯಕರೊಬ್ಬರು ಇದನ್ನು ಹಿಂದುಗಳ ಪರಾಕ್ರಮ ಎಂದು ವ್ಯಾಖ್ಯಾನ ಮಾಡಿರುವುದು ವಿವಾದ ಸೃಷ್ಟಿಸಿದೆ.

ʻʻ59 ಜನ ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ 2 ಸಾವಿರ ಜನರ ಹತ್ಯೆ ಮಾಡಿದ್ದೇವೆ. ಇದು ಹಿಂದುಗಳ ಪರಾಕ್ರಮ. … ಹಿಂದುಗಳು ಷಂಡರಲ್ಲ ಎಂದು ಈ ಘಟನೆ ತೋರಿಸುತ್ತದೆʼʼ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌ ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ ಬಜರಂಗ ದಳದ ಶೌರ್ಯ ಯಾತ್ರೆಯಲ್ಲಿ ಅವರು ಈ ಮಾತು ಆಡಿದರು.

ಬಿಬಿಸಿ ತಯಾರಿಸಿದ ಡಾಕ್ಯುಮೆಂಟರಿಯಲ್ಲಿ ಗೋಧ್ರಾ ಹತ್ಯಾಕಾಂಡದ ವಿಚಾರದಲ್ಲಿ ಮೋದಿ ಅವರನ್ನು ವಿಲನ್‌ ರೀತಿ ಬಿಂಬಿಸಲಾಗಿದೆ ಎಂದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಶರಣ್‌ ಪಂಪ್‌ವೆಲ್‌ ಅವರು ಹತ್ಯಾಕಾಂಡವನ್ನು ಪರಾಕ್ರಮ ಎಂಬಂತೆ ಬಿಂಬಿಸಿದ್ದಾರೆ. ಕಾಂಗ್ರೆಸ್‌ ಈಗಾಗಲೇ ಬಿಬಿಸಿ ಡಾಕ್ಯುಮೆಂಟರಿಯಲ್ಲಿರುವ ಅಂಶಗಳು ನಿಜ ಎಂದು ಪ್ರಚಾರ ಮಾಡುತ್ತಿರುವ ನಡುವೆ ಈ ಹೇಳಿಕೆ ಬಂದಿರುವುದು ವಿವಾದಕ್ಕೆ ಕಾರಣವಾಗಿದೆ.

ನೆನಪಿಸಿಕೊಳ್ಳಿ ಗುಜರಾತ್‌ ಘಟನೆ

ʻʻಹಿಂದು ಸಮಾಜ ಯಾವತ್ತೂ ನಪುಂಸಕ ಸಮಾಜ ಅಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ. ಒಂದು ಸಲ ಗುಜರಾತಿನ ಘಟನೆಯನ್ನು ನೆನಪು ಮಾಡಿಕೊಳ್ಳಿ. ಅಯೋಧ್ಯೆಯ ರಾಮ ಮಂದಿರದ ಕರಸೇವೆಗಾಗಿ ಹೋಗಿದ್ದ ರೈಲನ್ನು ಸುಟ್ಟುಹಾಕುವ ಮೂಲಕ 59 ಕರಸೇವಕರನ್ನು ಹತ್ಯೆ ಮಾಡಿದ್ದರು. ಅದರ ಬಳಿಕ ಗುಜರಾತ್‌ನ ಜನರು ಯಾವ‌ ರೀತಿ ಉತ್ತರ ಕೊಟ್ರು ಗೊತ್ತಲ್ಲ? ಯಾವ ಹಿಂದೂನು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ರಸ್ತೆಗೆ ಇಳಿದರು.…ಮನೆ ಮನೆಗೆ ನುಗ್ಗಿದ್ರು. ಕರಸೇವಕರ ಹತ್ಯೆ ನಡೆದಿದ್ದು 59. ಆದರೆ, ಗೋಧ್ರಾದಲ್ಲಿ ನಂತರ ನಡೆದ ಹತ್ಯೆಯ ಸಂಖ್ಯೆ ಎಷ್ಟು ಅನ್ನೋದು ಇನ್ನೂ ಲೆಕ್ಕ ಸಿಕ್ಕಿಲ್ಲ. ಸುಮಾರು ೨ ಸಾವಿರ ಜನರ ಹತ್ಯೆಯಾಗಿದೆ. ಇದು ಹಿಂದುಗಳ ಪರಾಕ್ರಮʼʼ ಎಂದು ಶರಣ್‌ ಪಂಪ್‌ವೆಲ್‌ ಹೇಳಿದರು.

ಸಿದ್ದರಾಮಯ್ಯಗೆ ಸವಾಲ್‌

ʻʻಸಿದ್ದರಾಮಯ್ಯನವರು ನಮ್ಮ ನೆಲ ಮಂಗಳೂರಿಗೆ ಬಂದಾಗಲೆಲ್ಲ ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ ಆಗಿದೆ ಎಂದು ಹೇಳುತ್ತಾರೆ. ಆದರೆ, ಸಿದ್ದರಾಮಯ್ಯನವರೇ ನೆನಪಿರಲಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಅಲ್ಲ.. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಕೂಡ ಹಿಂದುತ್ವದ ಫ್ಯಾಕ್ಟರಿ ಆಗಲಿದೆ. ಬಜರಂಗ ದಳದ ಶೌರ್ಯ ಯಾತ್ರೆ ಮೂಲಕ ತುಮಕೂರಿನಲ್ಲಿ ಸಂಚಲನ ಮೂಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳೂ ಹಿಂದುತ್ವದ ಫ್ಯಾಕ್ಟರಿ ಆಗಲಿದೆʼʼ ಎಂದು ಸಿದ್ದರಾಮಯ್ಯರಿಗೆ ಸವಾಲ್ ಹಾಕಿದರು ಪಂಪವೆಲ್.

ನಾವು ಹೊಡೆದಾಟ ಮಾಡ್ತೀವಿ. ಅನಿವಾರ್ಯವಾದರೆ ನುಗ್ಗಿನೂ ಹೊಡೆದೇ ಹೊಡೀತೀವಿ ಎಂದು ನೇರವಾಗಿ ಹೇಳಿದ ಶರಣ್‌ ಪಂಪ್‌ವೆಲ್‌, ಸಿದ್ದರಾಮಯ್ಯ ಕಾಂಗ್ರೆಸ್‌ನ ಪ್ರಮುಖ ನಾಯಕ. ಅವರನ್ನು ಕೆಲವರು ಖಾನ್ ಎಂದು ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ | BBC Documentary On Modi | ಮೋದಿ ಕುರಿತು ಬಿಬಿಸಿ ಆಕ್ಷೇಪಾರ್ಹ ಡಾಕ್ಯುಮೆಂಟರಿ, ಅಷ್ಟಕ್ಕೂ ಏನಿದೆ ಇದರಲ್ಲಿ? ಯಾಕಿಷ್ಟು ವಿವಾದ?

Exit mobile version