Site icon Vistara News

Karnataka Election: ಗೋಕಾಕ್‌ ಕೈ ಅಭ್ಯರ್ಥಿ ಕಡಾಡಿಗೆ ಸ್ಥಳೀಯ ಮುಖಂಡರ ಬೆಂಬಲ; ಅಶೋಕ್‌ ಪೂಜಾರಿ ಮನವೊಲಿಕೆಗೆ ಯತ್ನ

Gokak congress candidate mahantesh Kadadi has the support of local leaders, tries to convince Ashok Poojary

ಬೆಳಗಾವಿ: ಗೋಕಾಕ್‌ ಕ್ಷೇತ್ರದಲ್ಲಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ನಾಯಕ ಅಶೋಕ್‌ ಪೂಜಾರಿ ಮುಂದಿನ ತೀರ್ಮಾನ ಕೈಗೊಳ್ಳಲು ಬೆಂಬಲಿಗರ ಜತೆ ಸಭೆ ನಡೆಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಟಿಕೆಟ್‌ ಗಿಟ್ಟಿಸಿಕೊಂಡಿರುವ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಮಹಾಂತೇಶ್‌ ಕಡಾಡಿಗೆ ಕ್ಷೇತ್ರದ ಇನ್ನಿತರ ಆಕಾಂಕ್ಷಿಗಳು ಚುನಾವಣೆಯಲ್ಲಿ (Karnataka Election) ಬೆಂಬಲ ಘೋಷಿಸಿದ್ದು, ಅತೃಪ್ತ ಅಶೋಕ್‌ ಪೂಜಾರಿಯ ಮನವೊಲಿಸುವುದಾಗಿ ತಿಳಿಸಿದ್ದಾರೆ.

ಟಿಕೆಟ್‌ ವಂಚಿತ ಅಶೋಕ್‌ ಪೂಜಾರಿ, ಬೆಂಬಲಿಗರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ಗೋಕಾಕ್ ನಗರದ ಜ್ಞಾನ ಮಂದಿರದಲ್ಲಿ‌ ಸಭೆ ನಡೆಸಲು ಚುನಾವಣಾ ಅಧಿಕಾರಿಗಳ ಅನುಮತಿ ಕೇಳಿದ್ದಾರೆ. ಆದರೆ ಸಭೆಗೆ ಅಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ ಸಮುದಾಯ ಭವನದಲ್ಲಿ ಸಭೆ ನಡೆಸಲು ಅನುಮತಿ ಕೇಳಿದ್ದು, ಈ ವಿಷಯ ತಿಳಿದು ಅವರ ನಿವಾಸದತ್ತ ಬೆಂಬಲಿಗರು, ಕಾರ್ಯಕರ್ತರು ತೆರಳುತ್ತಿದ್ದಾರೆ.

ಗೋಕಾಕ್‌ನಲ್ಲಿ ವಿಸ್ತಾರ ‌ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಕೈ ಟಿಕೆಟ್ ವಂಚಿತ ಅಭ್ಯರ್ಥಿ ಅಶೋಕ್ ಪೂಜಾರಿ, ಯಾವ ಕಾರಣಕ್ಕೆ ನನಗೆ ಟಿಕೆಟ್ ಕೈ ತಪ್ಪಿದೆಯೋ ಗೊತ್ತಿಲ್ಲ. ಒಂದೂವರೆ ವರ್ಷದ ಹಿಂದೆ ಕಾಂಗ್ರೆಸ್‌ ಸೇರಿದ್ದೆ, ನನಗೆ ಕಾಂಗ್ರೆಸ್‌ ಟಿಕೆಟ್ ನೀಡಬೇಕು ಎಂತಲೇ ಕೈ ನಾಯಕರು ಪಕ್ಷಕ್ಕೆ ಆಹ್ವಾನಿಸಿದ್ದರು ಎಂದು ಹೇಳಿದರು.

ಇದನ್ನೂ ಓದಿ | Inside Story: ಬರಗಾಲದಲ್ಲಿ ಎರಡು ಬೆಳೆ ತೆಗೆಯೋ ಎಂಟಿಬಿ ಐಡಿಯಾಕ್ಕೆ ಹೌಹಾರಿದ ಯಡಿಯೂರಪ್ಪ!: ರೋಲ್ಸ್ ರಾಯ್ಸ್ ಏರಿ ಹೊರಟ ನಾಗರಾಜು

ಅಶೋಕ್ ಪೂಜಾರಿಗೆ ಯಾಕೆ ಟಿಕೆಟ್ ಕೈ ತಪ್ಪಿತೋ ಗೊತ್ತಾಗಿಲ್ಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಟಿಕೆಟ್‌ ಸಿಗುತ್ತೆ ಎಂಬ ಭಾವನೆ ನಮಗೂ ಇತ್ತು, ಟಿಕೆಟ್ ಕೊಡಬೇಕು ಎಂಬ ಭಾವನೆ ಅವರಲ್ಲೂ ಇತ್ತು. ಇದೊಂದು ಗೂಢಾರ್ಥದ ಪ್ರಶ್ನೆ. ನಾನು ಕೂಡ ಟಿಕೆಟ್ ಯಾಕೆ ತಪ್ಪಿತು ಎಂದು ಯೋಚನೆ ಮಾಡುತ್ತಿದ್ದೇನೆ. ನನ್ನಲ್ಲಿ ಏನಾದರೂ ದೌರ್ಬಲ್ಯ ಕಂಡರೋ ಅಥವಾ ಬೇರೆ ಯಾರೋ ವ್ಯವಸ್ಥಿತ ತಂತ್ರಗಾರಿಕೆ ಮಾಡಿ ಟಿಕೆಟ್ ತಪ್ಪಿಸಿದರೋ ಗೊತ್ತಿಲ್ಲ.

ಕಾರ್ಯಕರ್ತರು ಸ್ಪರ್ಧೆ ಬೇಡ ಎಂದರೆ ನಿಮ್ಮ‌ ನಿರ್ಧಾರವವೇನು ಎಂಬ ಪ್ರಶ್ನೆಗೆ ಉತ್ತರಿಸಿ, ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ನನಗೆ ಕಾರ್ಯಕರ್ತರು, ಅಭಿಮಾನಿಗಳು ಮುಖ್ಯ. ಅವರ ಮಾರ್ಗದರ್ಶನದಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನಾಳೆಯಿಂದಲೇ 7 ದಿನಗಳ ಕಾಲ ಕ್ಷೇತ್ರ ಪರ್ಯಟನೆ ಮಾಡುತ್ತೇನೆ. ಜನರ ಅಭಿಪ್ರಾಯ ಪಡೆದು ಏ.18 ಅಥವಾ 19ರಂದು ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

ಟಿಕೆಟ್ ತಪ್ಪಿದ ಆಕಾಂಕ್ಷಿಗಳಿಂದ ಮಹಾಂತೇಶ ಕಡಾಡಿಗೆ ಬೆಂಬಲ

ಗೋಕಾಕ್‌ ಕ್ಷೇತ್ರದಲ್ಲಿ ಕೈ ಟಿಕೆಟ್‌ ವಂಚಿತ ಇತರ ಆಕಾಂಕ್ಷಿಗಳು, ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಡಾ.ಮಹಾಂತೇಶ್‌ ಕಡಾಡಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಗೋಕಾಕ್‌ನಲ್ಲಿ ಜಂಟಿ ಸುದ್ದಿಗೋಷ್ಠಿ‌ ನಡೆಸಿರುವ ಟಿಕೆಟ್ ವಂಚಿತರಾದ ಪ್ರಕಾಶ್ ಭಾಗೋಜಿ, ಚಂದ್ರಶೇಖರ ಕೊಣ್ಣೂರ, ಬಸನಗೌಡ ಹೊಳೆಯಾಚಿ ಅವರು ಚುನಾವಣೆಯಲ್ಲಿ ಡಾ.ಮಹಾಂತೇಶ ಕಡಾಡಿಗೆ ಬೆಂಬಲ ನೀಡುತ್ತೇವೆ. ಜತೆಗೆ ಅಶೋಕ್‌ ಪೂಜಾರಿ ಅವರನ್ನು ಮನವೊಲಿಸುತ್ತೇವೆ ಎಂದು ಹೇಳಿದ್ದಾರೆ.

ಅಶೋಕ್‌ ಪೂಜಾರಿ ನೇತೃತ್ವದಲ್ಲೇ ಚುನಾವಣೆ ಎಂದ ಕಡಾಡಿ

ಕೈ ನಾಯಕ ಅಶೋಕ್ ಪೂಜಾರಿ ಅಸಮಾಧಾನದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ‌‌, ಅಶೋಕ್‌ ಪೂಜಾರಿ ನೂರಕ್ಕೆ ನೂರರಷ್ಟು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ. ಅವರ ನೇತೃತ್ವದಲ್ಲೇ ನಾನು ಪ್ರಚಾರ ಕೈಗೊಳ್ಳುವೆ. ಅವರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದ್ದಾರೆ.

ಅಶೋಕ್ ಪೂಜಾರಿ ಕಳೆದ 30 ವರ್ಷಗಳಿಂದ ರಾಜಕೀಯದಲ್ಲಿ ಇದ್ದು, ಅವರದ್ದೇ ಆದ ಅಭಿಮಾನಿಗಳು ಇದ್ದಾರೆ. ಕ್ಷೇತ್ರದಲ್ಲಿ ಐವರು ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದೆವು. ಯಾರಿಗೆ ಟಿಕೆಟ್ ಕೊಟ್ಟರೂ ಬೆಂಬಲಿಸಿ, ಗೆಲ್ಲಿಸಬೇಕು ಎಂದು ನಾವು ಮೊದಲೇ ತೀರ್ಮಾನಿಸಿದ್ದೆವು. ಅಶೋಕ್ ಪೂಜಾರಿ ಪಕ್ಷದ ನಿರ್ಧಾರ ಸ್ವಾಗತಿಸಿದ್ದಾರೆ. ಆದರೆ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅವರು ಕೂಡ ನನಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.

ಮಹಾಂತೇಶ ಕಡಾಡಿ ಜನರಿಗೆ ಚಿರಪರಿಚಿತ ಇಲ್ಲವೆಂಬ ಆರೋಪಕ್ಕೆ ಕೈ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ಪ್ರತಿಕ್ರಿಯಿಸಿ, ಗೋಕಾಕ್, ಘಟಪ್ರಭಾದಲ್ಲಿ 200 ಬೆಡ್ ಆಸ್ಪತ್ರೆ ನಡೆಸುತ್ತಿದ್ದೇನೆ. ಎರಡು ನರ್ಸಿಂಗ್ ಕಾಲೇಜುಗಳನ್ನು ನಡೆಸುತ್ತಿದ್ದೇನೆ. ಕೋವಿಡ್ ವೇಳೆ 60 ಬೆಡ್ ಆಸ್ಪತ್ರೆ ಸ್ಥಾಪಿಸಿ ಸೇವೆ ಸಲ್ಲಿಸಿದ್ದೇನೆ. ಗೋಕಾಕ್, ಮೂಡಲಗಿ ತಾಲೂಕಿನ ಜನರಿಗೆ ಚಿರಪರಿಚಿತನಿದ್ದೇನೆ ಎಂದು ಹೇಳಿದ್ದಾರೆ.

ಗೋಕಾಕ್‌ನಲ್ಲಿ ಅಭಿವೃದ್ಧಿ ವಿರೋಧಿ ಆಡಳಿತ, ಭಯದ ವಾತಾವರಣ ಇದೆ. ಕಳೆದ 20 ವರ್ಷಗಳಿಂದ ಜನರು ಬದಲಾವಣೆ ಬಯಸಿದ್ದಾರೆ. ಬದಲಾವಣೆ ತರಬೇಕು ಎಂಬುದು ಗೋಕಾಕ್ ಜನರ ಬಯಕೆ ಆಗಿತ್ತು. ಜನರ ಒತ್ತಾಯದ ಮೇರೆಗೆ ನಾನು ರಾಜಕೀಯಕ್ಕೆ ಕಾಲಿಟ್ಟಿದ್ದೇನೆ. ಅಭ್ಯರ್ಥಿಗಳ ಆಯ್ಕೆಗೆ ಸರ್ವೆ ಒಂದೇ ಮಾನದಂಡ. ಸರ್ವೆಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿದ್ದಿದ್ದರಿಂದ ಟಿಕೆಟ್ ನೀಡಿದ್ದಾರೆ. ಮೆರಿಟ್ ಬೇಸ್, ಸರ್ವೆ ಬೇಸ್ ಮೇಲೆ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ ಎಂದರು.

ಇದನ್ನೂ ಓದಿ | Karnataka Election 2023 : ಕಾಂಗ್ರೆಸ್‌ಗೆ ರಘು ಆಚಾರ್‌ ರಾಜೀನಾಮೆ; ಚಿತ್ರದುರ್ಗದಲ್ಲಿ ಜೆಡಿಎಸ್‌ ಬಲಪಡಿಸಲು ಪ್ರಯತ್ನ

ಜಾರಕಿಹೊಳಿ ಸಹೋದರರನ್ನು ಸೋಲಿಸಲು ಕಡಾಡಿ ಬ್ರದರ್ಸ್ ಒಂದಾದರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈರಣ್ಣಾ ಕಡಾಡಿ ಕುಟುಂಬ ಹಾಗೂ ನಮಗೆ ನಾಲ್ಕು ತಲೆಮಾರಿನ ಸಂಬಂಧ ಇದೆ. ನಮ್ಮೂರು ಕಲ್ಲೊಳ್ಳಿಯಲ್ಲಿ ಶೇಕಡ 30ರಷ್ಟು ಜನರು ಕಡಾಡಿ ಮನೆತನದವರೇ ಇದ್ದಾರೆ. ಅದನ್ನು ಫ್ಯಾಮಿಲಿ ಪಾಲಿಟಿಕ್ಸ್ ಅಂತ ಹೇಳಲು ಸಾಧ್ಯವಿಲ್ಲ. ಈರಣ್ಣ ಕಡಾಡಿಯವರ ಜತೆ ರಾಜಕೀಯ ಸಂಬಂಧವಿಲ್ಲ. ಅಭಿವೃದ್ಧಿ ವಿಚಾರ ಇಟ್ಟುಕೊಂಡು ಜನರ ಬಳಿ ಹೋಗುತ್ತೇವೆ ಎಂದು ಹೇಳಿದರು.

Exit mobile version