ನವದೆಹಲಿ: ಕರ್ನಾಟಕದ ವಷಾಹತು ಕಾಲದ ಚಿನ್ನದ ಗಣಿಗಳಿಂದ (Gold Mine) 5 ಕೋಟಿ ಟನ್ ಅದಿರನ್ನು ಸಂಸ್ಕರಿಸಿ, ಚಿನ್ನವನ್ನು ಹೊರತೆಗೆಯುವ ಯೋಜನೆಯನ್ನು ಸರ್ಕಾರವು ಹಾಕಿಕೊಂಡಿದ್ದು, ಇದಕ್ಕಾಗಿ ಬಿಡ್ ಆಹ್ವಾನಿಸಲಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಚಿನ್ನದ ನಾಡು ಎಂದೇ ಖ್ಯಾತವಾಗಿದೆ. ಬೆಂಗಳೂರಿನಿಂದ ಈಶಾನ್ಯಕ್ಕೆ ಸುಮಾರು 65 ಕಿ.ಮೀ ದೂರದಲ್ಲಿರುವ ಕೋಲಾರ್ ಗೋಲ್ಡ್ ಫೀಲ್ಡ್(KGF)ನಿಂದ ಬ್ರಿಟಿಷ್ ಕಾಲದಿಂದಲೂ ಚಿನ್ನವನ್ನು ಸಂಸ್ಕರಿಸಲಾಗುತ್ತಿತ್ತು. 20 ವರ್ಷಗಳ ಹಿಂದೆ ಈ ಗಣಿಯನ್ನು ಬಂದ್ ಮಾಡಲಾಗಿದೆ.
20 ವರ್ಷದ ಹಿಂದೆ ಸ್ಥಗಿತವಾಗಿರುವ ಕೋಲಾರ ಗಣಿಯಲ್ಲಿ ಸುಮಾರು 200 ಶತಕೋಟಿ ಡಾಲರ್ ಮೌಲ್ಯದ ಚಿನ್ನದ ನಿಕ್ಷೇಪವಿತ್ತು. ಈಗ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಉಳಿದಿರುವ ಗಣಿಯ ಅದಿರನ್ನು ಸಂಸ್ಕರಿಸಿ ಚಿನ್ನವನ್ನು ಹೊರ ತೆಗೆಯಬಹುದಾಗಿದೆ. ಇದರ ಜತೆಗೆ, ಸರ್ಕಾರವು ಸಂಸ್ಕರಿಸಿದ ಅದಿರಿನಿಂದ ಅಥವಾ ಡಂಪ್‌ಗಳಿಂದ ಪಲ್ಲಾಡಿಯಮ್ ಹೊರ ತೆಗೆಯುವ ಗುರಿಯನ್ನು ಹಾಕಿಕೊಂಡಿದೆ.
ಸಂಸ್ಕರಿಸಿದ ಅದಿರಿನಲ್ಲಿರುವ ಚಿನ್ನದ ನಿಕ್ಷೇಪದಿಂದ ನಾವು ಹೇಗೆ ಹಣ ಗಳಿಸಬಹುದು ಎಂಬುದನ್ನು ಯೋಚಿಸುತ್ತಿದ್ದೇವೆ. ಈ ಕಾರ್ಯಕ್ಕಾಗಿ ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಬಿಡ್ ಆಹ್ವಾನಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಜಗತ್ತಿನಲ್ಲಿ ಭಾರತವು ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾಗಿದ್ದು, ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ಹಾಗಾಗಿ, ಹೆಚ್ಚಿನ ಪ್ರಮಾಣದ ಚಿನ್ನವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಜುಲೈ ತಿಂಗಳಲ್ಲಿ ಚಿನ್ನದ ಆಮದು ಸುಂಕವನ್ನು 7.5 ಪ್ರತಿಶತದಿಂದ 12.5 ಪ್ರತಿಶತಕ್ಕೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ | Job News: ಹಟ್ಟಿ ಚಿನ್ನದ ಕಂಪನಿ ನೇಮಕ ತಾತ್ಕಾಲಿಕ ಸ್ಥಗಿತ