Site icon Vistara News

ಡಿ.12ರಂದು ಬೆಳಗಾವಿಯಲ್ಲಿ ಸುವರ್ಣ ಸಂಭ್ರಮ; ಶಾಸಕರ ಭವನ ನಿರ್ಮಾಣಕ್ಕೆ ಸಿಎಂಗೆ ಮನವಿ: ಯು.ಟಿ. ಖಾದರ್

UT Khader infront of Belagavi Winter Session

ಬೆಳಗಾವಿ: ಇಲ್ಲಿನ ಸುವರ್ಣ ಸೌಧದ (Belagavi Suvarna Vidhana Soudha) ಮುಂಭಾಗ ಡಿ.12ರಂದು ಸುವರ್ಣ ಸಂಭ್ರಮ (Golden Jubilee) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Governor Thaawar Chand Gehlot), ಸಿಎಂ ಸಿದ್ದರಾಮಯ್ಯ (CM Siddaramaiah) ಆದಿಯಾಗಿ ಸಚಿವ ಸಂಪುಟ ಸದಸ್ಯರು ಭಾಗವಹಿಸಲಿದ್ದಾರೆ. ಈ ವೇಳೆ ಮಾಜಿ ಸಭಾಧ್ಯಕ್ಷರು ಹಾಗೂ ಮಾಜಿ ಸಭಾಪತಿಗಳನ್ನು ಗೌರವಿಸಲಾಗುವುದು ಎಂದು ಸ್ಪೀಕರ್ ಯು.ಟಿ. ಖಾದರ್ (Speaker UT Khader) ಹೇಳಿದ್ದಾರೆ. ಅಲ್ಲದೆ, ಉತ್ತರ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಮುಂದಿನ ವರ್ಷ ಜಂಟಿ ಅಧಿವೇಶನ ನಡೆಸುವ ಚಿಂತನೆ ಇದೆ. ಜತೆಗೆ ಶಾಸಕರ ಭವನವನ್ನು ಇಲ್ಲಿ ಸ್ಥಾಪಿಸಲು ಸಿಎಂಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿದ ಸ್ಪೀಕರ್ ಯು.ಟಿ. ಖಾದರ್, ಸುವರ್ಣ ಸಂಭ್ರಮ ಕಾರ್ಯಕ್ರಮವು ಸಂಜೆ 6 ಗಂಟೆಗೆ ನಡೆಯಲಿದೆ. ಅಂದು ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ಸಹ ಇರಲಿದೆ. ನುಡಿಸಿರಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಇದರಲ್ಲಿ 250 ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

ಸುವರ್ಣಸೌಧದ ಬಗ್ಗೆ ಹೆಚ್ಚೆಚ್ಚು ಒತ್ತು ನೀಡಲಾಗುವುದು. ಜಂಟಿ ಅಧಿವೇಶನವನ್ನು ಇಲ್ಲಿ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ಮುಂದಿನ ವರ್ಷ ಜಂಟಿ ಅಧಿವೇಶನ ನಡೆಸುವ ಚಿಂತನೆ ಇದೆ. ಇಲ್ಲಿ ಈವರೆಗೆ ಒಂದೂ ಜಂಟಿ ಅಧಿವೇಶನ ನಡೆದಿಲ್ಲ. ಇದು ನಡೆದರೆ ಸುವರ್ಣಸೌಧವನ್ನು ಹೆಚ್ಚೆಚ್ಚು ಬಳಸಲು ಅನುಕೂಲವಾಗಲಿದೆ. ಶಾಸಕರ ಭವನವನ್ನು ಇಲ್ಲಿ ಸ್ಥಾಪಿಸಲು ಸಿಎಂಗೆ ಮನವಿ ಮಾಡಿದ್ದೇವೆ. ಇದರಿಂದ ವಾಸ್ತವ್ಯದ ಸಮಸ್ಯೆ ಬಗೆಹರಿಯುತ್ತದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಬೆಂಗಳೂರಲ್ಲಿ ನಡೆಯುವಂತೆ ನಡೆಯಬೇಕು

ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಗಳು ಬೆಂಗಳೂರಲ್ಲಿ ನಡೆಯುವಂತೆ ನಡೆಯಬೇಕು. ಸರ್ಕಾರದ ಮೇಲೆ ಹೊರೆ ಬೀಳದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.

ಅಧಿವೇಶನ ವಿಸ್ತರಣೆ ಆಗುವುದಿಲ್ಲ

ಸುವರ್ಣಸೌಧ ಕೇವಲ ಅಧಿವೇಶನ ಮಾಡಲು ಮಾತ್ರ ಇರುವುದಲ್ಲ. ಇದನ್ನು ಆದಷ್ಟು ಸದುಪಯೋಗ ಪಡಿಸಲು ಯತ್ನಿಸಲಾಗುವುದು. ಬಿಎಸಿಯಲ್ಲಿ ಅಧಿವೇಶನ ವಿಸ್ತರಣೆಯ ಚರ್ಚೆ ಆಗಿಲ್ಲ. ಅಧಿವೇಶನ ವಿಸ್ತರಣೆ ಆಗುವುದಿಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ ನೀಡಿದರು.

ಸಾವರ್ಕರ್ ಫೋಟೋ ವಿವಾದ

ಸುವರ್ಣ ಸೌಧದಲ್ಲಿ ಅಳವಡಿಸಲಾಗಿರುವ ವೀರ ಸಾವರ್ಕರ್‌ ಅವರ ಫೋಟೊವನ್ನು ತೆಗೆಯಲಾಗುವುದೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯು.ಟಿ. ಖಾದರ್‌,‌ “ಸಂವಿಧಾನ ಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್ ಒಂದು ಮಾತು ಹೇಳಿದ್ದರು. ಸ್ವಾತಂತ್ರ್ಯ ರಥವನ್ನು ಸಾಧ್ಯವಾದರೆ ಮುಂದಕ್ಕೆ ಎಳೆದುಕೊಂಡು ಹೋಗಿ. ಇಲ್ಲವಾದರೆ ಇದ್ದಲ್ಲೇ ಬಿಡಿ. ಆದರೆ ಹಿಂದಕ್ಕೆ ಎಳೆಯುವಂಥ ಕೆಲಸ ಮಾಡಬೇಡಿ” ಎಂದು ಹೇಳಿದ್ದರು. ಈ ಹಿಂದೆ ಆಗಿರುವ ಸರಿ – ತಪ್ಪು ವಿಶ್ಲೇಷಣೆ ಮಾಡುವುದು ಬೇಡ. ಜೋಡಿಸುವುದು ನನ್ನ ಆದ್ಯತೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ 6 ಲಕ್ಷ ಕೋಟಿ ಹೂಡಿಕೆಗೆ ಒಡಂಬಡಿಕೆ; ಶೇ.70 ಸ್ಥಳೀಯರಿಗೆ ಉದ್ಯೋಗ: ಎಂ.ಬಿ. ಪಾಟೀಲ್‌

ಯಾರು ಯಾವ ಕೆಲಸವನ್ನು ಮಾಡಬೇಕೋ ಅದನ್ನೇ ಮಾಡಬೇಕು

ಯಾರು ಯಾರು ಯಾವ ಕೆಲಸವನ್ನು ಮಾಡಬೇಕೋ ಅದನ್ನೇ ಮಾಡಬೇಕು. ಶಾಸಕರು ಸಮಯಕ್ಕೆ ಸರಿಯಾಗಿ ಕಲಾಪಕ್ಕೆ ಬರಬೇಕು. ಶಾಸಕರು ಅಭಿವೃದ್ಧಿ ಕುರಿತು ಚಿಂತನೆ ಮಾಡಬೇಕು. ಮಂತ್ರಿಗಳು ಅದನ್ನು ಜಾರಿಗೊಳಿಸುವ ಕೆಲಸ ಮಾಡಬೇಕು. ಜನರನ್ನು ಬೆಸೆಯುವ ಕೆಲಸ ಮಾಡುತ್ತಿರಬೇಕು. ಯಲಹಂಕ ಫ್ಲೈಓವರ್ ಇಲ್ಲವಾ? ಅದರ ಕೆಳಗೆ ಜನ‌ ಓಡಾಡುವುದಿಲ್ಲವಾ? ಕಟ್ಟಬೇಕೇ ಹೊರತು, ಕಿತ್ತು ಬಿಸಾಕಬಾರದು. ಇದು ನನ್ನ ಕ್ಷೇತ್ರದ ಸಂಸ್ಕೃತಿ, ಅದು ನನ್ನ ಸಂಸ್ಕೃತಿಯಾಗಿದೆ. 500 ಜನರು ಒಂದೊಂದು ವಿಚಾರ ಹೇಳುತ್ತಾರೆ. ಪ್ರೀತಿಯಿಂದ ಸಮಾಜವನ್ನು ಗೆಲ್ಲುತ್ತೇವೆ. ಪ್ರೀತಿಯಿಂದ ದೇಶವನ್ನು ಕಟ್ಟುತ್ತೇವೆ ಎಂದು ಯು.ಟಿ. ಖಾದರ್‌ ತಿಳಿಸಿದರು.

Exit mobile version