Site icon Vistara News

Anganawadi Workers: ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗಲಿದೆಯೇ ಗ್ರಾಚ್ಯುಟಿ?; ಅಧಿಕೃತ ಆದೇಶವೊಂದೇ ಬಾಕಿ!

Anganawadi Workers protest

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು (Anganawadi Workers) ನಡೆಸಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇದರ ಭಾಗವಾಗಿ ರಾಜ್ಯ ಸರ್ಕಾರ ಮೊದಲ ಗುಡ್‌ ನ್ಯೂಸ್‌ ಒಂದನ್ನು ಕೊಟ್ಟಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಹಣ ನೀಡಲು ರಾಜ್ಯ ಸರ್ಕಾರವು ಒಪ್ಪಿಗೆ ನೀಡಿದೆ. ಈ ಸಂಬಂಧ ಆರ್ಥಿಕ ಇಲಾಖೆ ಸಹಮತದ ಪತ್ರವನ್ನು ನೀಡಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಭವಿಷ್ಯದ ದೃಷ್ಟಿಯಿಂದ ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

varalakshmi

ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.‌ಆರ್.‌ ಲಲಿತಾ ಅವರು ಲಿಖಿತ ಆದೇಶವನ್ನು ಹೊರಡಿಸಿದ್ದು, ಆಡಳಿತ ಇಲಾಖೆಯ ಪ್ರಸ್ತಾವನೆಗೆ ಸಹಮತಿ ನೀಡಿರುವುದಾಗಿ ತಿಳಿಸಿದ್ದಾರೆ. ಅಂಗನವಾಡಿ ಕಟ್ಟಡಗಳಿಗೆ 20 ಲಕ್ಷ ಅನುದಾನ ನೀಡಲು ಒಪ್ಪಿರುವ ಸರ್ಕಾರವು, ಅಂಗನವಾಡಿ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣವೆಂದು ದೃಢೀಕರಣ ಪತ್ರ ನೀಡಲು ಒಪ್ಪಿತ್ತು. ಈಗ ಇದರ ಬೆನ್ನಲ್ಲೇ ಗ್ರಾಚ್ಯುಟಿ ಬಿಡುಗಡೆಗೂ ಸಮ್ಮತಿಸಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.‌ ವರಲಕ್ಷ್ಮಿ ವಿಸ್ತಾರನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ಗುರುವಾರವೂ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಗ್ರಾಚ್ಯುಟಿ ನೀಡುವ ಬಗ್ಗೆ ಇನ್ನೂ ಅಧಿಕೃತ ಆದೇಶ ಸಿಕ್ಕಿಲ್ಲ. ಯಾವ ದಿನಾಂಕದಿಂದ ಗ್ರಾಚ್ಯುಟಿಯನ್ನು ನೀಡಲಾಗುತ್ತಿದೆ ಎಂಬುದೂ ಮುಖ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶಕ್ಕೆ ಕಾಯಲಾಗುತ್ತಿದೆ. ಆದೇಶ ಪ್ರತಿ ಕೈಸೇರಿದ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: UPSC Recruitment 2023 : ಐಎಎಸ್‌, ಐಎಫ್‌ಎಸ್‌ ನೇಮಕಕ್ಕೆ ಅಧಿಸೂಚನೆ; ಈ ಬಾರಿ 1,105 ಹುದ್ದೆಗಳಿಗೆ ನೇಮಕ

ಬುಧವಾರ (ಫೆ.೧) ಅಂತ್ಯವಾಗಿತ್ತು ೧೦ ದಿನಗಳ ಹೋರಾಟ

ಕಾರ್ಯಕರ್ತೆಯರು, ಸಹಾಯಕಿಯರ ಸೇವೆ ಕಾಯಂ, ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ, ಪೆನ್ಷನ್​ ಹಣ‌ ಸೇರಿದಂತೆ ಇನ್ನಿತರ ಸಮಸ್ಯೆಗಳ ಈಡೇರಿಕೆಗಾಗಿ ಜನವರಿ ೨೩ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದರು. ಬುಧವಾರ (ಫೆ. ೧) ಸಚಿವ ಹಾಲಪ್ಪ ಆಚಾರ್ ಅವರ ಸಂಧಾನದ ಫಲವಾಗಿ ಪ್ರತಿಭಟನೆಯು ಅಂತ್ಯಗೊಂಡಿತ್ತು.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಹಾಲಪ್ಪ ಆಚಾರ್‌ ಅವರು ಭರವಸೆ ನೀಡಿದ ತಕ್ಷಣ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಂತಸ ವ್ಯಕ್ತಪಡಿಸಿ ಬುಧವಾರ ರಾತ್ರಿಯೇ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಹಾಲಪ್ಪ ಆಚಾರ್‌, ಅಂಗನವಾಡಿ ಕಾರ್ಯಕರ್ತೆಯರ ಬಹುತೇಕ ಬೇಡಿಕೆಗಳನ್ನು ಈಡೇರಿಕೆ ಮಾಡಲು ಒಪ್ಪಿಗೆ ಕೊಟ್ಟಿದ್ದೇವೆ. 10 ರಿಂದ 1 ಗಂಟೆವರೆಗೆ ಕಾರ್ಯಕರ್ತೆಯರನ್ನು ಇತರೆ ಯಾವುದೇ ಕೆಲಸಕ್ಕೆ ನಿಯೋಜನೆ ಮಾಡುವ ಹಾಗಿಲ್ಲ ಎಂಬ ಬೇಡಿಕೆ ಒಪ್ಪಿದ್ದೇವೆ. ಸಿಎಂ ಕೂಡ ಗ್ರಾಚ್ಯುಟಿ ನೀಡಲು ಸಹಮತ ಸೂಚಿಸಿದ್ದಾರೆ. ಎಲ್ಲವನ್ನೂ ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಪ್ರತಿಭಟನೆ ಕೈ ಬಿಡುವುದಾಗಿ ಕಾರ್ಯಕರ್ತರು ಒಪ್ಪಿದ್ದಾರೆ. ಇಂದು ರಾತ್ರಿ ಮತ್ತೆ ಗ್ರಾಚ್ಯುಟಿ ವಿಚಾರವಾಗಿ ಸಭೆ ಮಾಡಿ ಕಾರ್ಯರೂಪಕ್ಕೆ ತರುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: Sharavathi Project : ಶರಾವತಿ ಸಂತ್ರಸ್ತರಿಗೆ ಭೂಮಿ ಒದಗಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಬಿ.ಎಸ್‌. ಯಡಿಯೂರಪ್ಪ

ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳೇನಿತ್ತು?

೧. ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು
೨. ಅನ್ನದ ಜತೆ ಅಕ್ಷರ ಕೇಂದ್ರವನ್ನಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಬಲಿಷ್ಠ ಪಡಿಸಬೇಕು
3. ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಾಗಬೇಕು
4. ಅಂಗನವಾಡಿ ಕಾರ್ಯಕರ್ತೆಯನ್ನು ಶಿಕ್ಷಕಿ ಎಂಬ ಪದನಾಮದಿಂದ ಕರೆಯಬೇಕು
೫. ಅಂಗನವಾಡಿ ನೌಕರರ ಮೇಲೆ ಹೆಚ್ಚುತ್ತಿರುವ ಶಿಸ್ತುಕ್ರಮ
೬. ಉಚಿತ ಕೆಲಸ ನಿಲ್ಲಿಸಿ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಬೇಕು
೭. ನ್ಯಾಯಯುತ ಮುಂಬಡ್ತಿಗಳನ್ನು ಕೊಡದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು
8. ದಿನನಿತ್ಯದ ಸಮಸ್ಯೆಗಳಿಗೆ ಇಲಾಖಾಧಿಕಾರಿಗಳು ಸ್ಪಂದಿಸುವ ವಿಧಾನ ಕುಂಠಿತವಾಗುತ್ತಿದೆ
9. ಐಸಿಡಿಎಸ್‌ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು ಹಾಗೂ ಅನುದಾನವನ್ನು ಹೆಚ್ಚಿಸಬೇಕು

Exit mobile version