Site icon Vistara News

Cabinet Meeting : ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌; ಯಜಮಾನಿ ಇಲ್ಲದಿದ್ದರೆ ಸೀನಿಯರ್‌ ಖಾತೆಗೆ ಹಣ

Anna bhagya scheme and Vidhana sousdha

ಬೆಂಗಳೂರು: ಅನ್ನಭಾಗ್ಯ ಯೋಜನೆಯ (Anna Bhagya Scheme) ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ಕೊಟ್ಟಿದೆ. ಈ ಮೂಲಕ ರಾಜ್ಯ ಸರ್ಕಾರದ ಐದು ಗ್ಯಾರಂಟಿಯಲ್ಲಿ (Congress Guarantee Scheme) ಒಂದಾದ ಅನ್ನಭಾಗ್ಯ ಯೋಜನೆಯ ಫಲ ಸಿಗದೆ ಪರಿತಪಿಸುತ್ತಿದ್ದ ಕುಟುಂಬಗಳಿಗೆ ಈಗ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಇಲ್ಲದಿದ್ದರೆ ಕುಟುಂಬದ ಸೀನಿಯರ್ ಯಾರು ಇರುತ್ತಾರೋ ಅವರ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ (Cabinet Meeting) ತೀರ್ಮಾನವನ್ನು ತೆಗೆದುಕೊಂಡಿದೆ.

ರಾಜ್ಯದಲ್ಲಿ ಒಟ್ಟು 12774648 ಬಿಪಿಎಲ್ ಕಾರ್ಡ್‌ಗಳು (BPL Card) ಇವೆ. ಏಳು ಲಕ್ಷಕಿಂತಲೂ (7.67 ಲಕ್ಷ) ಅಧಿಕ ಅಂತ್ಯೋದಯ ಕಾರ್ಡ್ ಇವೆ. ಯಜಮಾನಿ ಇಲ್ಲದ ಮನೆಗೆ ಕುಟುಂಬದ ಸೀನಿಯರ್‌ಗೆ ಕೊಡಲಾಗುವುದು ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದ್ದಾರೆ.

ಸಚಿವ ಸಂಪುಟದ ಇನ್ನಿತರ ನಿರ್ಣಯ

ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ, ಹುಬ್ಬಳ್ಳಿ ಇವರಿಗೆ ಸಾಯಿ ಮಂದಿರಕ್ಕಾಗಿ ಲೀಸ್ ಆಧಾರದ ಮೇಲೆ ನೀಡಲಾಗಿದ್ದ ಹುಬ್ಬಳ್ಳಿ ವಿಭಾಗದ ಹಳೇ ಕೋರ್ಟ್ ಹತ್ತಿರ ಇರುವ ಹುಬ್ಬಳ್ಳಿ ಶಹರದ ಸಿ.ಟಿ.ಎಸ್. ನಂ. 498ರಲಿನ ಲೋಕೋಪಯೋಗಿ ಇಲಾಖೆಯ ಜಾಗವನ್ನು ದಿನಾಂಕ: 05.02.2023 ಪೂರ್ವಾನ್ವಯವಾಗುವಂತೆ ಮುಂದಿನ 30 ವರ್ಷಗಳ ಅವಧಿಗೆ ಲೀಸ್ ಅವಧಿಯನ್ನು ವಿಸ್ತರಿಸಲಾಗಿದೆ.

2023-24ರ ಶೈಕ್ಷಣಿಕ ವರ್ಷದಲ್ಲಿ 17 ಜಿಲ್ಲೆಗಳ 93 ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿನ 24,347 ಶಾಲೆಗಳಿಗೆ ರೂ. 20.00 ಕೋಟಿಗಳ ವೆಚ್ಚದಲ್ಲಿ ಪುಸ್ತಕ ಮತ್ತು ನಿಯತಕಾಲಿಕೆಗಳನ್ನು ಖರೀದಿಸಲು ಅನುಮೋದನೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಕೆರೂರು ಪಟ್ಟಣಗಳು ಹಾಗೂ ಮಾರ್ಗ ಮಧ್ಯದ 18 ಗ್ರಾಮಗಳಿಗೆ ಆಲಮಟ್ಟಿ ಜಲಾಶಯದ ಹಿನ್ನೀರು ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು 227 ಕೋಟಿ ರೂಪಾಯಿಯಿಂದ 250.36 ಕೋಟಿ ರೂಪಾಯಿಯ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ

ಒಂದು ಲಕ್ಷಕಿಂತಲೂ ಹೆಚ್ಚು ಜನಸಂಖ್ಯೆ ಇರುವ ಗಂಗಾವತಿ, ಉಡುಪಿ, ಮಂಡ್ಯ, ಕೋಲಾರ, ಚಿಕ್ಕಮಗಳೂರು, ಹೊಸಪೇಟೆ, ಗದಗ, ರಾಣೆಬೆನ್ನೂರು ನಗರಗಳಿಗೆ 15 ರಿಂದ 20 ಕೋಟಿ ರೂಪಾಯಿ ಬಿಡುಗಡೆ ಮಾಡಲು ಒಪ್ಪಿಗೆ. ಈ ಹಣವನ್ನು ಮೂಲ ಸೌಕರ್ಯಗಳ ಕಲ್ಪಿಸಲು ಸೂಚನೆ. ಎನ್‌ಜಿಟಿ ಅಡಿಯಲ್ಲಿ ಹಣ ಬಿಡುಗಡೆಗೆ ಅನುಮೋದನೆ

ಡಿ.ಕೆ. ಶಿವಕುಮಾರ್‌ ಮೇಲಿನ ಸಿಬಿಐ ಕೇಸ್‌ ವಾಪಸ್‌

ಆದಾಯ ಮೂಲಕ್ಕಿಂತ 200 ಕೋಟಿ ಹೆಚ್ಚು ಅಕ್ರಮ ಸಂಪಾದನೆ (Illegal editing) ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧದ ಸಿಬಿಐ ಕೇಸ್‌ (CBI Case) ಅದನ್ನು ವಾಪಸ್‌ ಪಡೆದು ರಾಜ್ಯ ತನಿಖಾ ಸಂಸ್ಥೆಗೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ (Cabinet Meeting) ಸಭೆ ತೆಗೆದುಕೊಂಡಿದೆ.

ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಬಗ್ಗೆ ಊಹೆ ಮಾಡ್ಬೇಡಿ, ನಾವೇಕೆ ಸಮಾಜ ಒಡೆಯುತ್ತೇವೆ? ಸಿಎಂ ಖಡಕ್‌ ಪ್ರಶ್ನೆ

ರಾಜಕೀಯ ಪ್ರೇರಿತ ಪ್ರಕರಣ ಎಂದು ಸಂಪುಟ ಸದಸ್ಯರು ತೀರ್ಮಾನಿಸಿ ಈ ಪ್ರಕರಣವನ್ನು ಕೈಬಿಟ್ಟಿದ್ದಾರೆ. ಡಿ.ಕೆ. ಶಿವಕುಮಾರ್‌ ಗೈರು ಹಾಜರಿಯಲ್ಲಿ ಸಂಪುಟದಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸ್ಪೀಕರ್ ಅನುಮತಿ ಪಡೆಯದೆ ಸರ್ಕಾರ ಸಿಬಿಐ ತನಿಖೆಗೆ ಕಳುಹಿಸಿದೆ. ಇದು ಕಾನೂನು ವಿರುದ್ಧದ ತೀರ್ಮಾನವಾಗಿದೆ. ಹಾಗಾಗಿ ಡಿ.ಕೆ. ಶಿವಕುಮಾರ್ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿದೆ.

Exit mobile version