ಬೆಂಗಳೂರು: ಪಠ್ಯೇತರ ಚಟುವಟಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ವರ್ಷಗಳಿಂದ ಚರ್ಚೆಯಲ್ಲಿರುವ ನೋ ಬ್ಯಾಗ್ (ಬ್ಯಾಗ್‌ಲೆಸ್) ಡೇಗೆ (Bagless Day) ಕೊನೆಗೂ ಮುಹೂರ್ತ ಕೂಡಿಬಂದಿದೆ. ಇದೇ ಡಿಸೆಂಬರ್‌ನಿಂದ “ಬ್ಯಾಗ್‌ಲೆಸ್ ಡೇ” ನಡೆಸಲು ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಶನಿವಾರದಂದ್ದು ಬ್ಯಾಗ್ ಲೆಸ್ ಡೇ ನಡೆಸಲು ಚಿಂತನೆ ನಡೆಸಲಾಗಿದೆ. ಆ ದಿನ ಮಕ್ಕಳು ಶಾಲೆಗೆ ಬ್ಯಾಗ್ ಅನ್ನು ತೆಗೆದುಕೊಂಡು ಹೋಗುವುದು ಬೇಡ. ಶಾಲೆಯಲ್ಲಿ ನೈತಿಕ ಪಾಠ, ಯೋಗ, ಆಟ, ವ್ಯಾಯಾಮಗಳಂತಹ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶವನ್ನು ಹೊಂದಲಾಗಿದೆ.
ಈ ಮೂಲಕ ಮಕ್ಕಳಿಗೆ ಶನಿವಾರದಂದು ಬ್ಯಾಗ್ ಹೊರೆ ತಪ್ಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ವೈದ್ಯರು, ಶಿಕ್ಷಣ ತಜ್ಞರೂ ಸಹ ಮಕ್ಕಳ ಬ್ಯಾಗ್ ತೂಕದ ಬಗ್ಗೆ ಅನೇಕ ಬಾರಿ ಅಸಮಾಧಾನ ಹೊರಹಾಕಿದ್ದರು. ಕೊರೊನಾ ಬಳಿಕ ಮಕ್ಕಳಲ್ಲಿ ಅಪೌಷ್ಟಿಕತೆ ಸೇರಿದಂತೆ ನಾನಾ ಸಮಸ್ಯೆ ಉದ್ಭವಿಸುತ್ತಿದ್ದು, ಹೆಚ್ಚಿನ ಭಾರವುಳ್ಳ ಬ್ಯಾಗ್ ಅನ್ನು ಹೊತ್ತೊಯ್ಯುವುದು ಅವರಿಗೆ ಹೊರೆಯಾಗಿರಲಿದೆ ಎಂಬ ವಾದವೂ ಕೇಳಿಬಂದಿತ್ತು. ಪೋಷಕರೂ ಸಹ ಇದಕ್ಕೆ ಧನಿಗೂಡಿಸಿದ್ದರು.
ಈ ವರ್ಷವೇ ಜಾರಿ?
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರತಿ ಶನಿವಾರ ಬ್ಯಾಗ್‌ಲೆಸ್ ಡೇ ನಿಯಮವನ್ನು ಜಾರಿ ಮಾಡಲು ತಯಾರಿ ನಡೆದಿದ್ದು, ಡಿಸೆಂಬರ್‌ನಿಂದಲೇ ಪ್ರಾರಂಭ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನು ಅಧಿಕೃತ ಆದೇಶವಷ್ಟೇ ಹೊರಬೀಳಬೇಕಿದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ | Education | ಗ್ರಾಮೀಣಾಭಿವೃದ್ಧಿ ವಿವಿ ವಿದ್ಯಾರ್ಥಿಗಳಿಗಿಲ್ಲ ಸಂಶೋಧನಾ(PhD) ಭಾಗ್ಯ: NET, SLET ಗೂ ಅವಕಾಶ ಇಲ್ಲ