ವಿನಾಯಕ್ ಹೆಗಡೆ ಕಲ್ಮನೆ, ಶಿರಸಿ
ಇದು ಹುಟ್ಟಿದಾಗ ಅಣ್ಣ-ತಮ್ಮ, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿ ಎನ್ನುವ ನಾಣ್ಣುಡಿಗೆ ಅಪವಾದದಂತೆ ಬದುಕಿ ಮಾದರಿಯಾಗಿರುವ ಅವಿಭಕ್ತ ಕುಟುಂಬದ ಒಗ್ಗಟ್ಟಿನ (ಮಾದರಿ ಕುಟುಂಬ) ಕತೆ. ಹೌದು, ಒಬ್ಬಿಬ್ಬರು ಅಣ್ಣ-ತಮ್ಮಂದಿರಲ್ಲೇ ಒಡಕನ್ನು ಕಾಣುವ ಈ ಕಾಲದಲ್ಲೂ 8 ಮಂದಿ ಸಹೋದರರು ಏಕತೆಯ ಮಂತ್ರವನ್ನು ಜಪಿಸುತ್ತಿದ್ದಾರೆ. ಈಗ ಇವರು ಒಂದೇ ತೆರನಾದ 7 ಮನೆಯನ್ನು ಕಟ್ಟುವ ಮೂಲಕ ಸುದ್ದಿಯಲ್ಲಿದ್ದಾರೆ.
ಶಿರಸಿ ತಾಲೂಕಿನ ಗುಡ್ನಾಪುರ ಪಂಚಾಯಿತಿ ವ್ಯಾಪ್ತಿಯ ಕಂತ್ರಾಜಿ ಗ್ರಾಮದ ರಾಜಶೇಖರ ಗೌಡರ ಕುಟುಂಬದವರು ಹೀಗೆ ಮನೆ ನಿರ್ಮಾಣದಲ್ಲೂ ಒಗ್ಗಟ್ಟು ಪ್ರದರ್ಶನ ತೋರಿದ್ದಾರೆ. ಈ ಗ್ರಾಮ ಸಹಿತ ಸುತ್ತಮುತ್ತಲಿನ ಗ್ರಾಮದವರಿಗೆ ಈಗ ಈ ಮನೆಗಳ ವಿಶೇಷತೆಗಳದ್ದೇ ಚರ್ಚೆ.
ಈ ಮನೆಗಳಲ್ಲಿ ಏನೇನಿದೆ..?
ಬಣ್ಣ, ಗಾತ್ರ, ಸೌಲಭ್ಯಗಳಿಂದ ಹಿಡಿದು ಮನೆಯ ಇಂಚಿಂಚಿನಲ್ಲೂ ಯಾವುದೇ ವ್ಯತ್ಯಾಸ ಕಾಣದು. ಇದರ ಜತೆಗೆ ಈ ಸಹೋದರರು ಮತ್ತು ಕುಟುಂಬದವರ ಹೊಂದಾಣಿಕೆ, ನಂಬಿಕೆ, ಪ್ರೀತಿ, ವಿಶ್ವಾಸ, ಕಾಳಜಿ, ಸಮಾನತೆಯನ್ನೂ ಕಾಣಬಹುದು. ಅಂದಹಾಗೆ ಅಣ್ಣ ರಾಜಶೇಖರ ಗೌಡ ಅವರು ಹಳೇ ಮನೆಯಲ್ಲಿಯೇ ಉಳಿದುಕೊಂಡು ಉಳಿದ ಸಹೋದರರಿಗೆ ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ.
ಮನೆ ಬೇರೆಯಾದರೂ ಮನಸ್ಸೊಂದೇ!
ರಾಜಶೇಖರ ಗೌಡರು ಈ ಕುಟುಂಬದ ಹಿರಿಯಣ್ಣ. ಇವರು ಸೇರಿದಂತೆ ಒಟ್ಟು 12 ಮಂದಿ ಮಕ್ಕಳಲ್ಲಿ 9 ಗಂಡು ಹಾಗೂ ಮೂವರು ಹೆಣ್ಣುಮಕ್ಕಳು ಜನಿಸಿದ್ದರು. ಹೆಣ್ಣು ಮಕ್ಕಳಿಗೆಲ್ಲ ವಿವಾಹವಾಗಿದ್ದು, 9 ಗಂಡು ಮಕ್ಕಳಲ್ಲಿ ಒಬ್ಬರು ನಿಧನರಾಗಿದ್ದಾರೆ. ಇನ್ನುಳಿದ ಎಂಟು ಸಹೋದರರು ಒಗ್ಗಟ್ಟಿನಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಒಟ್ಟು 42 ಜನ ಸದಸ್ಯರಿದ್ದು, ಅಣ್ಣ-ತಮ್ಮಂದಿರು ಇದುವರೆಗೂ ಬೇರೆ ವಾಸ ಇಲ್ಲ. ಮನೆಯಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಇರುವುದರಿಂದ ಜಾಗದ ಕೊರತೆ ಆಗಿದೆ. ಹೀಗಾಗಿ ಎಲ್ಲರೂ ಸೇರಿ ತೀರ್ಮಾನ ಮಾಡಿ ಒಟ್ಟಾಗಿಯೇ ಮನೆಗಳ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ, ಇದು ವಿಭಕ್ತ ಕುಟುಂಬವಲ್ಲ. ಮನೆಗಳು ಬೇರೆಯಾದರೂ ಮನಸುಗಳು ಒಂದೇ. ಆದರೆ, ಹಿಂದಿನಂತೆ ಮುಂದೆಯೂ ಎಲ್ಲರೂ ಊಟ, ವ್ಯವಹಾರವನ್ನು ಒಟ್ಟಾಗಿಯೇ ಮಾಡುತ್ತೇವೆ ಎಂದು ರಾಜಶೇಖರ ಗೌಡ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಒಂದೇ ವಿನ್ಯಾಸದ 7 ಮನೆಗಳು!
ಕಂತ್ರಾಜಿ ಗ್ರಾಮದಲ್ಲಿ ಒಟ್ಟು 110 ಮನೆಗಳಿವೆ. ಈಗಾಗಲೇ ರಾಜಶೇಖರ ಗೌಡರ ಹಳೇ ಮನೆ ಇದೆ. ಇದರ ಜೊತೆಗೆ ಸುಮಾರು 2 ಎಕರೆ ವ್ಯಾಪ್ತಿಯಲ್ಲಿ 10 ಅಡಿ ಅಂತರದಲ್ಲಿ ಏಳು ಮನೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಒಬ್ಬರೇ ಎಂಜಿನಿಯರ್ ವಿನ್ಯಾಸಗೊಳಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ನಿರ್ಮಾಣ ಮಾಡಲಾಗಿರುವ ಈ ಮನೆಗಳಲ್ಲಿ ಎಲ್ಲವೂ ಒಂದೇ ತೆರನಾಗಿವೆ. ಬಣ್ಣ, ಸೌಲಭ್ಯ ಸಹಿತ ಎಲ್ಲೂ ಕಿಂಚಿತ್ ವ್ಯತ್ಯಾಸವನ್ನು ಕಾಣಲಾಗದು. ಈ ಏಳೂ ಮನೆಗಳ ಗೃಹಪ್ರವೇಶ ಕಾರ್ಯಕ್ರಮವು 2022ರ ಮೇ ತಿಂಗಳಲ್ಲಿ ನಡೆದಿದೆ.
ರಾಜಶೇಖರ ಗೌಡರು ಕುಟುಂಬದ ವ್ಯವಹಾರ ನೋಡಿಕೊಂಡರೆ ಇನ್ನುಳಿದ ಏಳು ಮಂದಿ ಸಹೋದರರು ಅವರಿಗೆ ಸಹಕರಿಸುತ್ತಾರೆ. ಇವರದ್ದು ಸುಮಾರು 40 ಎಕರೆಯಷ್ಟು ಕೃಷಿ ಜಮೀನಿದ್ದು ಅದರಲ್ಲಿ ಹೊಸದಾಗಿ ಅಡಕೆ ತೋಟವನ್ನು ಹಾಕಿದ್ದಾರೆ. ಇನ್ನು ಭತ್ತ, ಕಬ್ಬು, ಅನಾನಸ್, ಶುಂಠಿ, ಜೋಳ ಹೀಗೆ ಎಲ್ಲ ತೆರನಾದ ಬೆಳೆಯನ್ನು ಬೆಳೆಯುತ್ತಾರೆ. ಒಟ್ಟು 30 ವಿವಿಧ ತಳಿಗಳ ಆಕಳುಗಳನ್ನು ಸಾಕಿದ್ದು, ದಿನಕ್ಕೆ 20ರಿಂದ 30 ಲೀಟರ್ ಹಾಲನ್ನು ಉತ್ಪಾದನೆಯಾಗುತ್ತದೆ.
ಯಾರೂ ಹೆಚ್ಚಲ್ಲ, ಕಡಿಮೆಯೂ ಅಲ್ಲ
ಮನೆಬಳಕೆಗಿಂತ ಹೆಚ್ಚುವರಿ ಹಾಲನ್ನು ಡೈರಿಗೆ ನೀಡಲಾಗುತ್ತದೆ. ಎಲ್ಲ ಸಹೋದರರೂ ಒಟ್ಟಾಗಿಯೇ ದುಡಿಯುವುದರಿಂದ ಕೃಷಿ ವೆಚ್ಚ ಕಡಿಮೆಯಾಗುವುದಲ್ಲದೆ, ಕೂಲಿ ಕಾರ್ಮಿಕರ ಸಮಸ್ಯೆಯೂ ಅಲ್ಪ ಮಟ್ಟಿಗೆ ನೀಗಿದೆ. ಅಲ್ಲದೆ, ನಮ್ಮ ನಡುವೆ ಯಾರೊಬ್ಬರೂ ಹೆಚ್ಚು, ಕಡಿಮೆ ಎಂಬುದು ಇಲ್ಲ ಎಂದು ರಾಜಶೇಖರ ಗೌಡ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.