ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಬಳಿ ಸೋಮವಾರ ಗೂಡ್ಸ್ ಆಟೋ (Auto Rickshaw Accident) ಹಳ್ಳಕ್ಕೆ ಉರುಳಿ ಬಿದ್ದಿದ್ದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಬರುತ್ತಿದ್ದ 17 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕ ಅಂಕನಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಹದೇವಪುರಕ್ಕೆ ಹೋಗಿದ್ದರು. ಪರೀಕ್ಷೆ ನಂತರ ಗೂಡ್ಸ್ ಆಟೋದಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಅರಕೆರೆ, ಮಹದೇವಪುರ ಮಾರ್ಗ ಮಧ್ಯೆ ಅಪಘಾತ ನಡೆದಿದೆ. ಗಾಯಾಳು ವಿದ್ಯಾರ್ಥಿಗಳನ್ನು ಮೈಸೂರಿನ ಚೆಲುವಾಂಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸವಾರ ಸಾವು
ಬಳ್ಳಾರಿ: ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಮೋತಿ ಸರ್ಕಲ್‌ನಲ್ಲಿ ಸೋಮವಾರ ಸಂಜೆ ನಡೆದಿದೆ. ಆಂಧ್ರದ ಓಬಳಾಪುರ ಗ್ರಾಮದ ಮಹೇಶ್ (28) ಮೃತ.
ರಾಯಚೂರಿನ ಕಡೆಗೆ ಹೊರಟಿದ್ದ ಕೇರಳದ ಲಾರಿ, ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಕೆಳಕ್ಕೆ ಬಿದ್ದ ಬೈಕ್ ಸವಾರ, ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿದ್ದರಿಂದ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಯುವಕ ಬಳ್ಳಾರಿ ಲಾರಿ ಟ್ರಾನ್ಸ್ ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂತಿದ್ದ ಟಿಪ್ಪರ್ ಲಾರಿಗೆ ಆಂಧ್ರ ಸಾರಿಗೆ ಬಸ್ ಡಿಕ್ಕಿ; ಚಾಲಕನಿಗೆ ಗಂಭೀರ ಗಾಯ
ಕೋಲಾರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75ರ ಬೆತ್ತನಿ ಗ್ರಾಮದ ಗೇಟ್ ಬಳಿ ನಿಂತಿದ್ದ ಲಾರಿಗೆ ಆಂಧ್ರ ಪ್ರದೇಶ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದು, ಚಾಲಕನಿಗೆ ಕಾಲಿಗೆ ಗಂಭಿರ ಗಾಯಗಳಾಗಿವೆ. ಡಿಕ್ಕಿ ಹೊಡೆದ ರಭಸಕ್ಕೆ ಕಾಲು ಸಿಲುಕಿದ್ದರಿಂದ ಚಾಲಕ ನರಳಾಡಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಚಾಲಕನನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Road accident : ಬೈಕ್‌ಗೆ ಕಾರು ಡಿಕ್ಕಿಯಾಗಿ ತಂದೆ- ಮಗಳು ಸ್ಥಳದಲ್ಲೇ ಸಾವು, ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ದುರಂತ
ಅಕ್ರಮವಾಗಿ ಸಾಗಿಸುತ್ತಿದ್ದ 72 ಲೀಟರ್ ಮದ್ಯ ಜಪ್ತಿ
ಯಾದಗಿರಿ: ವಿವಿಧೆಡೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 72 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮೂರು ಕಡೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆನಕನಹಳ್ಳಿ ಕ್ರಾಸ್, ಕೆಂಭಾವಿ ಕ್ರಾಸ್, ಕೊಡೇಕಲ್ ಕ್ರಾಸ್‌ನಲ್ಲಿ ಅಬಕಾರಿ ಅಧಿಕಾರಿಗಳ ದಾಳಿ ನಡೆಸಿದ್ದು, ಕಾರು ಹಾಗೂ 2 ಬೈಕ್ ಸಮೇತ ಮದ್ಯವನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.