ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯು ಎರಡು ಹಂತದಲ್ಲಿ 212 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದ ಬೆನ್ನಲ್ಲೇ ಬಂಡಾಯದ ಬಿಸಿ ಹೆಚ್ಚಾಗಿದೆ. ಹಲವು ನಾಯಕರ ರಾಜಕೀಯ ನಿವೃತ್ತಿ, ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿರುವವರ ಪಟ್ಟಿಗೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ್ (Goolihatti Shekhar) ಅವರು ಕೂಡ ಸೇರಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಗೂಳಿಹಟ್ಟಿ ಶೇಖರ್ ಅವರು ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರ ಕಚೇರಿಗೆ ಗುರುವಾರ ರಾತ್ರಿ ತೆರಳಿ ಶಾಸಕ ಸ್ಥಾನಕ್ಕೆ ಗೂಳಿಹಟ್ಟಿ ಶೇಖರ್ ರಾಜೀನಾಮೆ ನೀಡಿದ್ದಾರೆ. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪರಿಶಿಷ್ಟ ಜಾತಿಗೆ ಸೇರಿದ ನನಗೆ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿಲ್ಲ. ಸಾಮಾಜಿಕ ನ್ಯಾಯದ ಅಡಿಯಲ್ಲಿ ನನಗೆ ಸಿಗಬೇಕಾಗಿತ್ತು. ಟಿಕೆಟ್ ಕೊಟ್ಟಿಲ್ಲ. ಹಾಗಾಗಿ, ರಾಜೀನಾಮೆ ಸಲ್ಲಿಸಿದ್ದು, ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ” ಎಂದು ಹೇಳಿದ್ದಾರೆ. “ನನಗೆ ಹಲವಾರು ಪಕ್ಷಗಳಿಂದ ಕರೆಗಳು ಬರುತ್ತಿವೆ. ಆದರೆ, ನನ್ನ ಕ್ಷೇತ್ರದ ಜನರ ಅಭಿಪ್ರಾಯ ಮುಖ್ಯ. ಅವರ ಜತೆ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ” ಎಂದು ತಿಳಿಸಿದರು.
ಗೂಳಿಹಟ್ಟಿ ಶೇಖರ್ ಅವರು ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿಯೂ ಅವರು ಗೆದ್ದಿದ್ದರಿಂದ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷದಿಂದಲೂ ಗೂಳಿಹಟ್ಟಿ ಶೇಖರ್ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಬಿಜೆಪಿಗೆ ಶಶಿಕಾಂತ ನಾಯಿಕ ರಾಜೀನಾಮೆ ಘೋಷಣೆ
ಬೆಳಗಾವಿ ಜಿಲ್ಲೆ ಹುಕ್ಕೇರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಶಶಿಕಾಂತ ನಾಯಿಕ ಅವರು ಕೂಡ ಬಿಜೆಪಿಗೆ ವಿದಾಯ ಹೇಳಲು ತೀರ್ಮಾನಿಸಿದ್ದಾರೆ. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗುವ ಕುರಿತು ಮಾತುಕತೆ ಕೇಳಿಬರುತ್ತಿವೆ. “ಪಕ್ಷ ಸಂಘಟನೆಗಾಗಿ ಹಲವು ವರ್ಷಗಳ ಕಾಲ ದುಡಿದಿದ್ದೇನೆ. ಗ್ರಾಮ ಗ್ರಾಮಗಳಿಗೆ ತೆರಳಿ ಪಕ್ಷ ಸಂಘಟನೆ ಮಾಡಿದ್ದೇನೆ. ಹಾಗಾಗಿ, ಹುಕ್ಕೇರಿ ಕ್ಷೇತ್ರದಿಂದ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ, ಪಕ್ಷವು ನನಗೆ ಕನಿಷ್ಠ ಗೌರವವನ್ನೂ ನೀಡಿಲ್ಲ. ಹಾಗಾಗಿ, ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ” ಎಂದು ಸುದ್ದಿಗಾರರಿಗೆ ತಿಳಿಸಿದರು. ಮೂಡಿಗೆರೆ ಕ್ಷೇತ್ರದ ಟಿಕೆಟ್ ವಂಚಿತ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಕೂಡ ಬಿಜೆಪಿ ತೊರೆದಿದ್ದಾರೆ.