ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವುದಕ್ಕೆ ಆಕಾಂಕ್ಷಿ ಗೋಪಿಕೃಷ್ಣ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ತಮ್ಮ ನಾಯಕನಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದು, ಸಿದ್ದರಾಮಯ್ಯ ಹಾಗೂ ಬೈರತಿ ಸುರೇಶ್ ವಿರುದ್ಧ ಘೋಷಣೆಗಳನ್ನು ಕೂಗಿ ಆಟೋಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ತರೀಕೆರೆ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿ ಗೋಪಿ ಕೃಷ್ಣ ಡಿ.ಕೆ.ಶಿವಕುಮಾರ್ ಬೆಂಬಲಿಗರಾಗಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಆಪ್ತ ಮಾಜಿ ಶಾಸಕ ಶ್ರೀನಿವಾಸ್‌ಗೆ ಕೈ ಟಿಕೆಟ್ ಸಿಕ್ಕಿದೆ. ಹೀಗಾಗಿ ಗೋಪಿ ಕೃಷ್ಣ ಬೆಂಬಲಿಗರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇವರು ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಅದರೆ ಶ್ರೀನಿವಾಸ್‌ಗೆ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಗೋಪಿಕೃಷ್ಣ, ಕೈ ನಾಯಕರ ವಿರುದ್ಧ ಕಿಡಿಕಾರಿದ್ದು, ಮುಂದಿನ ನಿರ್ಧಾರ ಕೈಗೊಳ್ಳಲು ಆಪ್ತರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.
ತರೀಕೆರೆಯಲ್ಲಿ ಆಟೋಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದ ಬೆಂಬಲಿಗರನ್ನು ಸಮಾಧಾನಪಡಿಸಿದ ಬಳಿಕ ಗೋಪಿಕೃಷ್ಣ ಗಳಗಳನೆ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಟಿಕೆಟ್ ಕೈ ತಪ್ಪಲು ಬೈರತಿ ಸುರೇಶ್ ಕಾರಣ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದವೂ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | Karnataka Election 2023 : ಕಾಂಗ್ರೆಸ್ ಮೂರನೇ ಪಟ್ಟಿ ಪ್ರಕಟ; ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಇಲ್ಲ
2013ರಿಂದ ಮೂರು ಪಕ್ಷಗಳಿಂದ ಆನ್ಯಾಯವಾಗಿದೆ. 2013ರಲ್ಲಿ ಜೆಡಿಎಸ್, 2018ಬಿಜೆಪಿ, 2023ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ಬೆಂಬಲಿಗರೊಂದಿಗೆ ಸೋಮವಾರ ಸಭೆ ನಡೆಸಿ, ಮುಂದಿನ ರಾಜಕಾರಣದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.
ಯಾರೂ ರಾಜಕೀಯಕ್ಕೆ ಬರಬೇಡಿ
ಟಿಕೆಟ್ ಕೈತಪ್ಪಿದ್ದರಿಂದ ರಾಜಕೀಯ ಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದ ಗೋಪಿಕೃಷ್ಣ, ಸಣ್ಣ ಸಣ್ಣ ಸಮುದಾಯದ ಹಿತೈಷಿಗಳಿಗೆ ನಾನು ಮನವಿ ಮಾಡುತ್ತೇನೆ. ರಾಜಕೀಯಕ್ಕೆ ಮಾತ್ರ ಬರಬೇಡಿ, ನಾನು ಮಾಡಿರುವುದೇ ಸಾಕು. 14 ವರ್ಷದಿಂದ ನನ್ನದೆ ಆದ ಕೆಲಸ ಮಾಡಿಕೊಂಡು ಕೋಟ್ಯಂತರ ರೂಪಾಯಿ ಹಾಳು ಮಾಡಿಕೊಂಡೆ. ತರೀಕೆರೆಗೆ ಏನಾದರೂ ಸಹಾಯ ಮಾಡಬೇಕು ಎಂದು ರಾಜಕೀಯಕ್ಕೆ ಬಂದಿದ್ದೆ. ಆದರೆ, ಮೂರು ಪಕ್ಷಗಳಿಂದ ನನಗೆ ಘೋರ ಆನ್ಯಾಯ ಆಗಿದೆ ಎಂದು ಅಸಮಾಧಾನ ಹೊರಹಾಕಿದರು.
ನಯನಾ ಮೋಟಮ್ಮಗೆ ಮೂಡಿಗೆರೆ ಟಿಕೆಟ್ ನೀಡಿದ್ದಕ್ಕೆ ಕಾರ್ಯಕರ್ತರ ವಿರೋಧ
ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದಲ್ಲಿ ತೀವ್ರ ವಿರೋಧದ ಮಧ್ಯೆಯೂ ನಯನಾ ಮೋಟಮ್ಮಗೆ ಟಿಕೆಟ್ ನೀಡಲಾಗಿದೆ ಎಂದು ಮೂಡಿಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಸಮಾಧಾನ ಹೊರಹಾಕಿದ್ದಾರೆ. ಹೋಬಳಿಗಳಲ್ಲಿ ಮೋಟಮ್ಮ ವಿರುದ್ಧ ಬಹಿರಂಗ ಸಭೆ ನಡೆಸಿರುವ ಕಾರ್ಯಕರ್ತರು, ಮೋಟಮ್ಮಗೆ ಟಿಕೆಟ್ ಬೇಡ, ಬೇರೆ ಯಾರಿಗಾದರೂ ಟಿಕೆಟ್ ಕೊಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | Karnataka Election 2023 : ಕಾಂಗ್ರೆಸ್‌ನಿಂದ ಒಟ್ಟು 209 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ; ಯಾವ ಜಾತಿಗೆ ಎಷ್ಟು ಟಿಕೆಟ್?
ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದ ಮೂಡಿಗೆರೆ ಬಿಜೆಪಿ ಅಭ್ಯರ್ಥಿ
ಚಿಕ್ಕಮಗಳೂರು: ಬಿಜೆಪಿ ಟಿಕೆಟ್ ಸಿಕ್ಕ ಬೆನ್ನಲ್ಲೇ ಮೂಡಿಗೆರೆ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಬಾಬಾಬುಡನ್ ಗಿರಿಯ ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದಿದ್ದಾರೆ. ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ. ಪಿ. ಕುಮಾರಸ್ವಾಮಿಗೆ ಟಿಕೆಟ್ ತಪ್ಪಿಸಿ ದೀಪಕ್ ದೊಡ್ಡಯ್ಯಗೆ ಬಿಜೆಪಿ ಮಣೆ ಹಾಕಿದೆ. ಹೀಗಾಗಿ ದತ್ತಾತ್ರೇಯನ ಪಾದುಕೆ ದರ್ಶನ ಪಡೆದು ದೀಪಕ್ ದೊಡ್ಡಯ್ಯ ಪ್ರಚಾರ ಆರಂಭಿಸಿದ್ದಾರೆ.