ಚಿಕ್ಕಮಗಳೂರು: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣಾ (Karnataka Election 2023) ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ರಾಜ್ಯದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಈಗಾಗಲೇ ಘೋಷಿಸಿವೆ. ಇನ್ನು ಕೆಲವೇ ಕೆಲವು ಕ್ಷೇತ್ರಗಳು ಮಾತ್ರ ಬಾಕಿ ಇವೆ. ಈ ನಡುವೆ ಟಿಕೆಟ್ ವಂಚಿತರು ಬೇಸರಗೊಂಡಿದ್ದು, ಕೆಲವರು ಬಂಡಾಯವೆದ್ದಿದ್ದಾರೆ. ತರೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋಪಿಕೃಷ್ಣ ಈಗ ಬಂಡಾಯದ ಬಾವುಟ ಹಾರಿಸಿದ್ದಾರೆ. ಇದೇ ವೇಳೆ ತಾವು ಟಿಕೆಟ್‌ಗಾಗಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರದಲ್ಲಿ ಮತದಾರರಿಗೆ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ತರೀಕೆರೆಯಲ್ಲಿ ಕಾಂಗ್ರೆಸ್ ಬಂಡಾಯ ಮುಂದುವರಿದಿದ್ದು, ಸೋಮವಾರ (ಏ. 17) ಕಾಂಗ್ರೆಸ್ ಟಿಕೆಟ್ ಕೈತಪ್ಪಿದ 10 ಮಂದಿ ಆಕಾಂಕ್ಷಿಗಳ ನೇತೃತ್ವದಲ್ಲಿ ಅಜ್ಜಂಪುರ ತಾಲೂಕಿನ ಗಡಿಹಳ್ಳಿ ತೋಟದಲ್ಲಿ ಸಭೆಯನ್ನು ನಡೆಸಲಾಗಿದೆ. ಈ ವೇಳೆ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ: D ಕೋಡ್ ಅಂಕಣ: ರಾಹುಲ್ ಗಾಂಧಿ ವಿರುದ್ಧ ನರೇಂದ್ರ ಮೋದಿ ನಿರಂತರ ವಾಗ್ದಾಳಿ ನಡೆಸಲು ಏನು ಕಾರಣ?
ಗೋಪಿಕೃಷ್ಣ ಅವರು ಬಹುತೇಕ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಈ ತೀರ್ಮಾನಕ್ಕೆ ಉಳಿದ ಎಲ್ಲರೂ ಬಂದಿದ್ದಾರೆ. ಈ ಸಭೆಯಲ್ಲಿ ನೂರಾರು ಬೆಂಬಲಿಗರು ಭಾಗಿಯಾಗಿದ್ದರು.
ಈ ಕಾಂಗ್ರೆಸ್ ಬಂಡಾಯ ಸಭೆಯಲ್ಲಿ ಮಾತನಾಡಿದ ಟಿಕೆಟ್ ಆಕಾಂಕ್ಷಿ ಗೋಪಿಕೃಷ್ಣ, ನಾನು ಸಿದ್ದರಾಮಯ್ಯ ಅವರ ಮಾತನ್ನು ನಂಬಿ ಮೋಸ ಹೋದೆ ಎಂದು ಕಣ್ಣೀರಿಟ್ಟಿದ್ದಾರೆ. ವರುಣ ವಿಧಾನಸಭಾ ಕ್ಷೇತ್ರದಲ್ಲಿ 4500 ಕುಕ್ಕರ್ ಹಾಗೂ ಐರನ್ ಬಾಕ್ಸ್‌ಗಳನ್ನು ಹಂಚಿದ್ದೇನೆ. ಇದಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ 2 ಕೋಟಿ ರೂಪಾಯಿ ನೀಡಿದ್ದೇನೆ. ಮೂರು ತಿಂಗಳ ಹಿಂದಷ್ಟೆ ವರುಣ ಕ್ಷೇತ್ರದಲ್ಲಿ ಮತ್ತೊಂದು ಕಾರ್ಯಕ್ರಮವನ್ನು ಸಹ ಮಾಡಿದ್ದೇನೆ. 20 ಲಕ್ಷ ಖರ್ಚು ಮಾಡಿ ವರುಣಾದಲ್ಲಿ ಕಾರ್ಯಕ್ರಮ ಮಾಡಿದ್ದೆ. ನಿಮ್ಮ ಊರಿಗೆ ಬಂದು ಅಲ್ಲಿಯೇ ನಿಂತು ನಿನಗೆ ಟಿಕೆಟ್ ಘೋಷಣೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ನನಗೆ ಟಿಕೆಟ್ ಘೋಷಣೆಯಾಗಲೇ ಇಲ್ಲ. ಈ ಬಗ್ಗೆ ಆಮೇಲೆ ಅವರನ್ನು ಕೇಳಿದ್ದಕ್ಕೆ “ಹೇ… ಸುಮ್ನೆ ನಡಿಯಪ್ಪಾ ನೀನು ಅಂದ್ರು…” ಎಂದು ಕಣ್ಣೀರಿಟ್ಟಿದ್ದಾರೆ.
ಮೂರನೇ ಬಾರಿಯೂ ಸೋಲಿಸಬೇಡಿ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನೀವೆಲ್ಲರೂ ಸೇರಿ ಸ್ಪರ್ಧೆ ಮಾಡು, ನಿನ್ನನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರೆ ಮಾತ್ರ ನಾನು ಈ ಬಾರಿ ಸ್ಪರ್ಧೆ ಮಾಡುತ್ತೇನೆ. ಬೇಡ ಅಂದ್ರೆ, ಮನೆಗೆ ಹೋಗುತ್ತೇನೆ. ಮೂರನೇ ಬಾರಿಯೂ ಸೋಲಿಸಬೇಡಿ ಎಂದು ಮನವಿ ಮಾಡಿದರು.