Site icon Vistara News

Uniform, shoe row : ಸಮವಸ್ತ್ರ, ಶೂ ವಿತರಣೆ ಮಾಹಿತಿ ನೀಡದ ಸರ್ಕಾರ; ಅಧಿಕಾರಿಯನ್ನು ಜೈಲಿಗಟ್ಟಿದರೆ ಸರಿ ಹೋಗ್ತದೆ ಎಂದ ನ್ಯಾಯಮೂರ್ತಿಗಳು

high court cancels acquttal of rape victim

high court cancels acquttal of rape victim

ಬೆಂಗಳೂರು: ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡ ಹೊರತಾಗಿಯೂ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ (Uniform, shoe row) ಮತ್ತು ಸಾಕ್ಸ್‌ ವಿತರಣೆ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ಮಾಹಿತಿ ನೀಡದ ಬಗ್ಗೆ ಉಚ್ಚ ನ್ಯಾಯಾಲಯ ಫುಲ್‌ ಗರಂ ಆಗಿದೆ. ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ ಸರಿಹೋಗುತ್ತದೆ ಎಂದು ಅತ್ಯಂತ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂದು 2019ರ ಆಗಸ್ಟ್‌ 28ರಂದು ಹೊರಡಿಸಿರುವ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆಯ ಮಾಸ್ಟರ್ ಮಂಜುನಾಥ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ಎಂ.ಜಿ ಉಮಾ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು.

ಅಲ್ಲದೆ, ರಾಜ್ಯದ ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು (ಡಿಡಿಪಿಐ), ಸಮವಸ್ತ್ರ  ಖರೀದಿಸಲು ರಾಜ್ಯ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ. ಅದರಲ್ಲಿ ಎಷ್ಟು ಹಣ ಸದ್ಭಳಕೆಯಾಗಿದೆ ಎಂಬ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ನಡೆಸಬೇಕು. ಹಾಗೆಯೇ, 2019-20ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಮತ್ತು ಶೂ, ಕಾಲು ಚೀಲ ವಿತರಣೆ ಮಾಡುವ ಮೂಲಕ ಸರ್ಕಾರವು ಹೈಕೋರ್ಟ್‌ನ 2019ರ ಆಗಸ್ಟ್‌ 28ರ ತೀರ್ಪು ಪಾಲಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತರಿಪಡಿಸಿ ಎರಡು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ಪೀಠವು ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ನಿರ್ದೇಶಕರು ಸಲ್ಲಿಸಿರುವ ಅಫಿಡವಿಟ್‌ ಅನ್ನು ಸರ್ಕಾರಿ ವಕೀಲರು ಪೀಠಕ್ಕೆ ಒದಗಿಸಿದರು. ಸಮವಸ್ತ್ರ ಖರೀದಿಸಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. 2019-20, 2020-21, 2021-22, 2022-23ನೇ ಶೈಕ್ಷಣಿಕ ಸಾಲಿನಲ್ಲಿ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ ಮತ್ತು ಕಾಲುಚೀಲ ನೀಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿತ್ತು.

ಇದನ್ನು ಪರಿಶೀಲಿಸಿದ ಪೀಠವು ಸಮವಸ್ತ್ರ, ಶೂ ಮತ್ತು ಕಾಲುಚೀಲ ನೀಡಿರುವುದನ್ನು ಪುಷ್ಟೀಕರಿಸುವ ದಾಖಲೆ ಒದಗಿಸಿಲ್ಲ. ವಿದ್ಯಾರ್ಥಿಗಳಿಗೆ ಸಮವಸ್ತ್ರ ತಲುಪಿರುವುದು ದೇವರಿಗೆ ಮಾತ್ರ ಗೊತ್ತಾಗಬೇಕು. ಸರ್ಕಾರವು ನ್ಯಾಯಾಲಯದ ಆದೇಶ ಪಾಲಿಸಿಲ್ಲ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸಬೇಕೆಂಬ ಮನೋಭಾವ ಸರ್ಕಾರಕ್ಕೆ ಇದ್ದರೆ, ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ನ್ಯಾಯಾಂಗ ನಿಂದನೆ ಆರೋಪದಿಂಡ ತಪ್ಪಿಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಸುಮ್ಮನೆ ಅಫಿಡವಿಟ್‌ ಸಲ್ಲಿಸಿದರೆ ಸಾಲದು ಎಂದು ಕಿಡಿಕಾರಿತಲ್ಲದೆ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗುವುದು ಎಂದು ತಿಳಿಸಿತು. ಆಗ ಸರ್ಕಾರಿ ವಕೀಲರು, ʻಹಾಗೆ ಮಾಡಿದರೆ ಏನು ಬರುತ್ತದೆ ಸ್ವಾಮಿ? ಎಂದು ಪೀಠವನ್ನು ಕೇಳಿಕೊಂಡರು.

ಇದರಿಂದ ಕೋಪಗೊಂಡ ನ್ಯಾಯಮೂರ್ತಿ ಬಿ ವೀರಪ್ಪ ಅವರು, ಏನು ಬರುತ್ತದೆ ಎಂದರೆ; ಅಧಿಕಾರಿಯನ್ನು ಜೈಲಿಗೆ ಕಳುಹಿಸುತ್ತೇವೆ. ಆಗ ಮಕ್ಕಳಿಗೆ ಸಮವಸ್ತ್ರ ಹೇಗೆ ಬರುವುದಿಲ್ಲ ಎನ್ನುವುದನ್ನು ನೋಡುತ್ತೇವೆ. ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ; ನಮ್ಮನ್ನು ಕಾಪಾಡಲು ನ್ಯಾಯಾಲಯವಿದೆ ಎಂಬುದು ಜನರಿಗೆ ಗೊತ್ತಾಗುತ್ತದೆ. ಆದರೆ, ಮಾನ ಮಾರ್ಯದೆ ಇಲ್ಲದಿದ್ದರೆ ಅಧಿಕಾರಿಗಳು ಆರು ತಿಂಗಳು ಜೈಲಿಗೆ ಹೋಗಿಬರುತ್ತಾರೆ. ಆಗ ಏನೂ ಮಾಡೋಕೆ ಆಗಲ್ಲ. ನ್ಯಾಯಾಲಯಕ್ಕೂ ಸಹ ಎಲ್ಲೋ ಒಂದು ಕಡೆ ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದು ತೀಕ್ಷ್ಣವಾಗಿ ನುಡಿದರು.

ಇದನ್ನೂ ಓದಿ : High court furious : ಬೇಕಾಬಿಟ್ಟಿ ಖರ್ಚು ಮಾಡಲು ದುಡ್ಡಿದೆ, ಮಕ್ಕಳ ಸಮವಸ್ತ್ರಕ್ಕೆ ದುಡ್ಡಿಲ್ವಾ?: ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Exit mobile version