ಬೆಂಗಳೂರು: ಪರಿಶಿಷ್ಟ ಜಾತಿಯ ಒಳಪಂಡಗಳಿಗೆ ಮೀಸಲಾತಿ ವರ್ಗೀಕರಣ ಮಾಡುವ ಒಳಮೀಸಲಾತಿ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ವೇಗ ನೀಡಿದ್ದು, ಈ ಕುರಿತು ಅಧ್ಯಯನ ನಡೆಸಲು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಿದೆ.
ಪರಿಶಿಷ್ಟ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಬೇಕು ಎಂದು ನ್ಯಾ. ಸದಾಶಿವ ಆಯೋಗವು 2012ರಲ್ಲಿ ವರದಿ ಸಲ್ಲಿಸಿದೆ. ಆದರೆ ಇಲ್ಲಿವರೆಗೂ ವರದಿಯನ್ನು ಒಪ್ಪುವುದಾಗಲಿ, ತಿರಸ್ಕರಿಸುವುದಾಗಲಿ, ಸದನದಲ್ಲಿ ಮಂಡಿಸುವುದನ್ನಾಗಲಿ ಯಾವುದೇ ಸರ್ಕಾರ ಮಾಡಿಲ್ಲ.
ಒಳಮೀಸಲಾತಿ ಕಲ್ಪಿಸುವ ಕುರಿತು ಸಂಪುಟ ಉಪಸಮಿತಿ ರಚನೆ ಮಾಡಲು ನವೆಂಬರ್ 11ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದೀಗ ಜೆ.ಸಿ. ಮಾಧುಸ್ವಾಮಿ ಅವರ ಅಧ್ಯಕ್ಷತೆಯ ಸಮಿತಿಗೆ ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ, ಮೀನುಗಾರಿಕೆ ಸಚಿವ ಎಸ್. ಅಂಗಾರ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಆರೋಗ್ಯ ಸಚಿವ ಡಾ. ಎಸ್. ಸುಧಾಕರ್ ಅವರನ್ನು ಸದಸ್ಯರಾಗಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಮಿತಿಗೆ ಅಗತ್ಯ ನೆರವನ್ನು ಕಲ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ.
ಚಾಮರಾಜನಗರ ಪ್ರವಾಸಕ್ಕೆ ಹೊರಡುವ ಮುನ್ನ ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಒಳಮೀಸಲಾತಿಯನ್ನು ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. 5 ವರ್ಷ ಮುಖ್ಯಮಂತ್ರಿಗಳಾಗಿದ್ದಾಗ ವರದಿಯನ್ನು ಮಂಡಿಸುವ ಸಮಾವೇಶವೊಂದರಲ್ಲಿ ಕೇವಲ ದೀಪ ಹಚ್ಚಿ ಬಂದರು, ಮಾತನಾಡಲೂ ಇಲ್ಲ. ಎಲ್ಲಾ ನಡೆನುಡಿಗಳು ಜನರ ಮನದಾಳದಲ್ಲಿದೆ. ಅದನ್ನು ಮುಚ್ಚಿಹಾಕಲು ಸಮಾವೇಶ ಮಾಡಿದರು. ಜನರನ್ನು ಪದೇ ಪದೇ ಮರುಳು ಮಾಡಲು ಸಾಧ್ಯವಿಲ್ಲ. ಹಿಂದೆ ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಮ್ಮೆಯಾದರೂ ಒತ್ತಾಯ ಮಾಡಿದ್ದರೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಒಡೆದು ಆಳುವುದು ಕಾಂಗ್ರೆಸ್ ನೀತಿ. ಚುನಾವಣೆ ಬಂದಾಗ ಒಡೆದು ಆಳುವುದಕ್ಕೆ ಮುಂದಾಗುತ್ತಾರೆ. ಕಳೆದ ಬಾರಿ ವೀರಶೈವ ಲಿಂಗಾಯತಕ್ಕೆ ಕೈ ಹಾಕಿದ್ದರು. ಇದೇ ಭಾರತ್ ಜೋಡೋ ಮಾಡೆಲ್ ಅನ್ನಿಸುತ್ತದೆ. ನಾವು ಮೀಸಲಾತಿ ಪರ ಇದ್ದೇವೆ. ಹಿಂದೆ ಕಾಂಗ್ರೆಸ್ ಸರ್ಕಾರ ಇತ್ತು, ಆಗ ಯಾಕೆ ಮೀಸಲಾತಿ ಜಾರಿಗೆ ತರಲಿಲ್ಲ? ಏನು ಉತ್ತರ ಕೊಡ್ತಾರೆ? ಡಿಕೆಶಿ, ಸಿದ್ದರಾಮಯ್ಯ ಏನೂ ಉತ್ತರ ಕೊಡಲ್ಲ. ವಿವೇಚನಾ ರೀತಿಯಾಗಿ ಕೆಲಸ ಮಾಡಬೇಕಿದೆ. ನಮ್ಮ ಸರ್ಕಾರ ಅದನ್ನು ಮಾಡಲಿದೆ. ನಿಮ್ಮ ಅಧಿಕಾರ ಇದ್ದಾಗ ನೀವು ಯಾಕೆ ಮಾಡಲಿಲ್ಲ ಅನ್ನೋದಕ್ಕೆ ಉತ್ತರ ಕೊಡಲಿ. ಒಳ ಮೀಸಲಾತಿ ನ್ಯಾಯಯುತವಾಗಿ ಮಾಡಬೇಕಿದೆ. ಅದನ್ನು ವಿವೇಚನೆಯಿಂದ ಮಾಡಬೇಕಿದೆ. ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.
ಸಮಿತಿ ರಚನೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಎಸ್‌ಸಿ ಒಳ ಮೀಸಲಾತಿ ಕೊಡುವ ವಿಚಾರದಲ್ಲಿ ಸರ್ಕಾರ ಒಂದು ಕಮಿಟಿ ಮಾಡಿದೆ. ಜನರ ಒತ್ತಾಯ ಅರಿತು ಸಮಿತಿ ಮಾಡಿದ್ದಾರೆ. ಆದಷ್ಟು ಬೇಗ ರಿಪೋರ್ಟ್ ಕೊಡುತ್ತಾರೆ. ನಮ್ಮ ಕಾಲದಲ್ಲಿಯೇ ವರದಿ ಬರುತ್ತದೆ. ವರದಿ ಅನುಷ್ಠಾನ ಮಾಡುತ್ತೇವೆ. ಕಾಂಗ್ರೆಸ್ ಆರು ವರ್ಷ ಗೆಣಸು ಕೆತ್ತುತ್ತಿತ್ತು, ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ, ಮಹದೇವಪ್ಪ ಈಗ ಹೇಳುತ್ತಿದ್ದಾರೆ. ಅವರು ಸಮಯಸಾಧಕತನ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಸಮಾವೇಶದಲ್ಲಿ ಒಂದು ಮಾತೂ ಹೇಳದೇ ಹೋಗಿದ್ದರು. ಬಲಗೈನವರು ಅವರು ವಿರೋಧ ಇದ್ದಾರೆ ಎಂದು ಹೇಳಿದ್ದರು, ಈ ಬಗ್ಗೆ ಕೆ.ಎಚ್ ಮುನಿಯಪ್ಪ ಹೇಳಲಿ. ಜನರನ್ನು ಒಡೆಯುವುದೇ ಕಾಂಗ್ರೆಸ್ ಕೆಲಸ ಎಂದು ಟೀಕಿಸಿದರು.
ಇದನ್ನೂ ಓದಿ | ವಿಸ್ತಾರ ವಿಶೇಷ | SCST ಮೀಸಲು ನಂತರ ಸರ್ಕಾರದ ಮತ್ತೊಂದು ಅಸ್ತ್ರ: ಸದಾಶಿವ ಆಯೋಗದ ಕುರಿತು ಮಹತ್ವದ ನಿರ್ಧಾರ