Site icon Vistara News

Bitcoin Scam : ಬಿಟ್‌ ಕಾಯಿನ್‌ ಹಗರಣ ಮರುತನಿಖೆಗೆ ಸರ್ಕಾರ ಆದೇಶ ; ಬಿಜೆಪಿಗೆ ನಡುಕ?

Bitcoin scam

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಹಲವು ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ ಎನ್ನಲಾದ ಬಿಟ್‌ ಕಾಯಿನ್‌ ಹಗರಣದ (Bitcoin scam) ಮರು ತನಿಖೆಗೆ ರಾಜ್ಯ ಸರ್ಕಾರದ (State Government) ಆದೇಶ ನೀಡಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳಾ ಮಹೇಶ್‌ ಕರ್ಭೀಕರ್‌, ವಂಶಿಕೃಷ್ಣ ಮತ್ತು ಅನೂಪ್‌ ಶೆಟ್ಟಿ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ (Special Investigation team- SIT) ರಚಿಸಲಾಗಿದ್ದು, ಅದು ತನಿಖೆಯನ್ನು ನಡೆಸಲಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (G Parameshwar) ಅವರು ಹೇಳಿದರು.

ವಿಧಾನ ಮಂಡಲದ ಅಧಿವೇಶನಕ್ಕೆ (Joint Session) ಆಗಮಿಸುವ ವೇಳೆ ವಿಧಾನಸೌದದ ಕೆಂಗಲ್‌ ಗೇಟ್‌ನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಹಿಂದೆ ಬಿಜೆಪಿ ಸರ್ಕಾರ ಇದ್ದ ವೇಳೆ ಬಿಟ್ ಕಾಯಿನ್ ಹಗರಣದಲ್ಲಿ ಕೊಟ್ಯಂತರ ರೂ ಹಗರಣ ಆಗಿದೆ ಅಂತ ಮಾತನಾಡುತ್ತಿದ್ದೆವು. ಈಗ ನಮ್ಮ ಸರ್ಕಾರ ಬಂದ ಬಳಿಕ ಇದರ ತನಿಖೆಗೆ ನಿರ್ಧಾರ ಮಾಡಿದ್ದೇವೆ/ ಎಸ್ಐಟಿ ತನಿಖೆಗೆ ಆದೇಶ ಮಾಡಿದ್ದೇವೆʼʼ ಎಂದು ಹೇಳಿದರು.

ಬಿಟ್‌ ಕಾಯಿನ್‌ ಹಗರಣದ ಬಗ್ಗೆ ಹಿಂದಿನ ಸರ್ಕಾರದ ಅವಧಿಯಲ್ಲೇ ಸಿಐಡಿ ತನಿಖೆ ನಡೆದಿದ್ದರೂ ಅದರ ವಾಸ್ತವಾಂಶಗಳನ್ನು ಮುಚ್ಚಿ ಹಾಕಲಾಗಿತ್ತು. ಹೀಗಾಗಿ ಮರುತನಿಖೆಗೆ ಅದೇಶ ನೀಡಿದ್ದೇವೆ. ಇದೊಂದು ತಾಂತ್ರಿಕ ಪ್ರಕರಣವಾಗಿರುವುದರಿಂದ ಎಸ್ಐಟಿಗೆ ಬೇರೆ ಯಾವ ಸಂಸ್ಥೆಗಳ ಸಹಕಾರ ಬೇಕೋ ತೆಗೆದುಕೊಳ್ಳಲು ತಿಳಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಸಂಪೂರ್ಣ ಆಳ ಅಗಲ ಹೊರಕ್ಕೆ

ʻʻಬಿಟ್‌ಕಾಯಿನ್ ಪ್ರಕರಣವನ್ನು ಸಂಪೂರ್ಣವಾಗಿ ಬೇಧಿಸಲು ಸಿಐಡಿ ಅಡಿಯಲ್ಲಿಯೇ ಎಸ್ಐಟಿ ತಂಡ ರಚಿಸಿ ತನಿಖೆಗೆ ಆದೇಶ ನೀಡಿದ್ದೇವೆ. ಈ ಸಂಬಂಧ ಅಧಿಕೃತ ಆದೇಶವನ್ನೂ ನೀಡಲಿದ್ದೇವೆ ಎಂದು ತಿಳಿಸಿದರು.

ʻʻಮುಚ್ಚಿ ಹಾಕಿರುವ ಪ್ರಕರಣದ ಹಗರಣದ ನಿಜಸ್ವರೂಪವನ್ನು ಹೊರಗೆ ತರುವ ಕೆಲಸ ಮಾಡ್ತೀವಿ. ಮನೀಶ್ ಕರ್ಭೀಕರ್‌ ಅನ್ನುವ ಎಡಿಜಿಪಿ ನೇತೃತ್ವದಲ್ಲಿ ಟೀಮ್ ಮಾಡಿದ್ದೇವೆ. ಅವರಿಗೆ ಬೇಕಾದ ಟೀಂ ರೆಡಿ ಮಾಡಿಕೊಳ್ಳಲು ಅವಕಾಶವಿದೆ. ಆದಷ್ಟು ಶೀಘ್ರದಲ್ಲಿ ತನಿಖೆಯಾಗಬೇಕು ಎಂದು ಸೂಚಿಸುತ್ತೇವೆ. ಆದರೆ, ಇಷ್ಟೇ ಸಮಯ ಅಂತ ನಿಗದಿ ಮಾಡೋದಕ್ಕೆ ಆಗಲ್ಲʼʼ ಎಂದು ಹೇಳಿದ ಜಿ. ಪರಮೇಶ್ವರ್‌ ಅವರು, ಇದರಲ್ಲಿ ರಾಜ್ಯ, ಅಂತಾರಾಜ್ಯ, ರಾಷ್ಟ್ರೀಯ, ಅಂತಾರಾಷ್ಟೀಯ ಮತ್ತು ಸೈಬರ್‌ ವಿಚಾರಗಳಿರುವುದರಿಂದ ತನಿಖೆಗೆ ಸಮಯ ಹಿಡಿಯಲಿದೆ ಎಂದು ಹೇಳಿದರು.

ಬಿಟ್‌ ಕಾಯಿನ್‌ ಶ್ರೀಕಿ ಎಲ್ಲಿದ್ದಾನೆ?

ಬಿಟ್‌ ಕಾಯಿನ್‌ ಪ್ರಕರಣದ ಪ್ರಧಾನ ಸೂತ್ರಧಾರ ಬಿಟ್‌ಕಾಯಿನ್‌ ಶ್ರೀಕಿ ಎಲ್ಲಿದ್ದಾನೆ, ಅವನನ್ನು ಹುಡುಕಿ ಏನೇನು ವಿಚಾರಣೆ ನಡೆಸಬೇಕು ಎಂಬೆಲ್ಲ ವಿಚಾರಗಳನ್ನು ಎಸ್‌ಐಟಿ ತನಿಖೆ ನಡೆಸಲಿದೆ ಎಂದು ಪರಮೇಶ್ವರ್‌ ತಿಳಿಸಿದರು.

ಕಾಂಗ್ರೆಸ್‌ ಬೆದರಿಕೆಗೆ ಬಗ್ಗಲ್ಲ, ಸೆಂಟ್ರಲ್‌ ನಮ್ದು ಎಂದ ಆರ್‌ ಅಶೋಕ್‌

ಬಿಟ್ ಕಾಯಿನ್ ಎಸ್ಐಟಿ ತನಿಖೆಗೆ ಕೊಟ್ಟಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ, ಮಾಜಿ ಸಚಿವ ಆರ್‌. ಅಶೋಕ್‌ ಅವರು, ಕಾಂಗ್ರೆಸ್‌ನ ಬೆದರಿಕೆಗೆ ಬಿಜೆಪಿ ಬಗ್ಗುವುದಿಲ್ಲ ಎಂದಿದ್ದಾರೆ. ಈಗ ಅಧಿವೇಶನ ಆರಂಭವಾಗಿರುವುದರಿಂದ ಬಿಜೆಪಿಯವರನ್ನು ಬೆದರಿಸಬೇಕು ಎನ್ನುವ ಕಾರಣಕ್ಕೆ ತನಿಖೆ ಎಂದು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ತನಿಖೆಗೆಲ್ಲ ಬಿಜೆಪಿ ಹೆದರಲ್ಲ ಎಂದರು. ʻʻರಾಜ್ಯದಲ್ಲಿ ಅವರ ಸರ್ಕಾರ ಇದ್ದರೆ, ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ. ತನಿಖೆ ಮಾಡಿಸಲಿ ನೋಡೋಣʼʼ ಎಂದು ಸವಾಲು ಹಾಕಿದರು ಅಶೋಕ್‌.

ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಬೊಮ್ಮಾಯಿ

ಈ ನಡುವೆ, ವಿಧಾನ ಮಂಡಲ ಅಧಿವೇಶನಕ್ಕೆ ಹೊರಟ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಟ್ ಕಾಯಿನ್ ತನಿಖೆ ಹಾಗೂ ವಿಪಕ್ಷ ನಾಯಕನ ಆಯ್ಕೆ ವಿಳಂಬದ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದರು. ಯಾವುದೇ ಪ್ರತಿಕ್ರಿಯೆ ಕೊಡದೆ ಕಾರು ಹತ್ತಿ ವಿಧಾನಸೌಧಕ್ಕೆ ತೆರಳಿದರು.

ಇದನ್ನೂ ಓದಿ: Athletic BinduRani : ಅಥ್ಲೀಟ್‌ ಬಿಂದುರಾಣಿಗೆ ಕಳ್ಳಿ ಎಂದು ಚಪ್ಪಲಿ ತೋರಿಸಿ ಕೋಚ್‌ ಪತ್ನಿ ಅವಾಜ್‌

Exit mobile version