Site icon Vistara News

Government High School | ಮಾಜಿ ಡಿಸಿಎಂ, ಹಾಲಿ ಶಾಸಕರ ಪಟ್ಟಣದಲ್ಲಿ ಇಲ್ಲ ಸರ್ಕಾರಿ ಪ್ರೌಢಶಾಲೆ!

BEO office Athani

ಮಂಜುನಾಥ ಹುಡೇದ, ಚಿಕ್ಕೋಡಿ
ಬಡತನಕ್ಕೆ ಮೂಲ ಕಾರಣ ಅನಕ್ಷರತೆ. ಅಲ್ಲದೆ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಂತದಲ್ಲಿ ಶಾಲೆ ಬಿಡುವುದನ್ನು ತಪ್ಪಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದಲ್ಲಿಯೂ ಶೈಕ್ಷಣಿಕ ಪ್ರಗತಿಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ವಿಪರ್ಯಾಸವೆಂದರೆ, ಒಬ್ಬರು ಮಾಜಿ ಡಿಸಿಎಂ, ಇನ್ನೊಬ್ಬರು ಪ್ರಭಾವಿ ಶಾಸಕರಿದ್ದರೂ ಪ್ರಮುಖ ಪಟ್ಟಣವಾದ ಅಥಣಿಯಲ್ಲಿ ಒಂದೇ ಒಂದು ಸರ್ಕಾರಿ ಪ್ರೌಢಶಾಲೆ (Government High School) ಇಲ್ಲ!

ಇದು ನಿರ್ಲಕ್ಷ್ಯವೋ, ಇಚ್ಛಾಶಕ್ತಿಯ ಕೊರತೆಯೋ ಎಂಬ ಮಾತುಗಳು ಸಾರ್ವಜನಿಕವಾಗಿ ವ್ಯಕ್ತವಾಗಿದ್ದು, ಸಾಮಾನ್ಯ ವರ್ಗದ ಜನರಿಗೆ ಶಿಕ್ಷಣ ಎಂಬುದು ದುಸ್ತರವಾಗುತ್ತಿದೆ. ಪ್ರೌಢಶಾಲೆಗೆ ಕಲಿಯಲು ಹೋಗಬೇಕೆಂದರೆ ಖಾಸಗಿ ಶಾಲೆಗಳೇ ಗತಿ ಎಂಬಂತೆ ಆಗಿದೆ. ಅದೂ ಸ್ವಾತಂತ್ರ್ಯ ಬಂದು 75 ವರ್ಷವಾಗಿ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲೂ ಒಂದು ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದಿರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ.

ಇನ್ನು ಅಥಣಿಯು ತಾಲೂಕು ಕೇಂದ್ರವೂ ಆಗಿದೆ. ಇಂಥ ತಾಲೂಕು ಕ್ಷೇತ್ರದ ಪಟ್ಟಣದಲ್ಲಿ ಸರ್ಕಾರದ ಪ್ರೌಢಶಿಕ್ಷಣ ಇಲ್ಲವೆಂದರೆ ಹೇಗೆ? ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಥಣಿ ಪಟ್ಟಣದ ಪ್ರಭಾವಿ ನಾಯಕರು ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಬ್ಬರು ಹಿಂದಿನ ಸರ್ಕಾರವನ್ನು ಕೆಡವಿ ನೂತನ ಸರ್ಕಾರ ರಚನೆಗೆ ಕಾರಣರಾಗಿದ್ದರೆ, ಮತ್ತೊಬ್ಬರು ಸರ್ಕಾರದಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿರುವವರು. ಇಷ್ಟಿದ್ದರೂ ಶೈಕ್ಷಣಿಕವಾಗಿ ಆಗಬೇಕಾದ ಸೌಕರ್ಯ ಆಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕ್ರಿಯಾಯೋಜನೆ ಕಳಿಸಿದ್ದೇವೆ- ಬಿಇಒ
ಇಷ್ಟು ವರ್ಷವಾದರೂ ಅಥಣಿ ಪಟ್ಟಣದಲ್ಲಿ ಸರ್ಕಾರಿ ಫ್ರೌಡಶಾಲೆ ಇಲ್ಲದಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್ ತಳವಾರ ಅವರನ್ನು ವಿಸ್ತಾರ ನ್ಯೂಸ್‌ ಸಂಪರ್ಕಿಸಿದಾಗ, “ಅಥಣಿ ಪಟ್ಟಣದಲ್ಲಿ 2 ಕಡೆ ಸರ್ಕಾರಿ ಪ್ರೌಢಶಾಲೆಯ ಅಗತ್ಯವಿದೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿಯೂ ಅಗತ್ಯ ಇರುವ ಸರ್ಕಾರಿ ಪ್ರೌಢಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಈಗಾಗಲೇ ಕ್ರಿಯಾಯೋಜನೆಯನ್ನು ಸಿದ್ಧಗೊಳಿಸಿ ಅಪರ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆಯಾಗಿ ಶೀಘ್ರದಲ್ಲೇ ಮಂಜೂರು ಆದೇಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಲಿ ಇರುವ ಪ್ರೌಢಶಾಲೆಗಳು
ಅಥಣಿ ಶೈಕ್ಷಣಿಕ ವಲಯದಲ್ಲಿ ಒಟ್ಟು 94 ಪ್ರೌಢಶಾಲೆಗಳಿದ್ದು ಅದರಲ್ಲಿ 39 ಸರ್ಕಾರಿ ಪ್ರೌಢಶಾಲೆಗಳಿವೆ. ಉಳಿದಂತೆ 22 ಅನುದಾನಿತ ಶಾಲೆಗಳಿದ್ದರೆ, 33 ಅನುದಾನ ರಹಿತ ಪ್ರೌಢಶಾಲೆಗಳಿವೆ. ಹೀಗಾಗಿ ಪಟ್ಟಣ ವ್ಯಾಪ್ತಿಯಲ್ಲಿ ಹೈಸ್ಕೂಲ್‌ ಕಲಿಯಬೇಕು ಎಂದರೆ ಖಾಸಗಿ ಸಂಸ್ಥೆಗಳಲ್ಲೇ ಪ್ರವೇಶವನ್ನು ಪಡೆಯಬೇಕು. ಇಲ್ಲವಾದರೆ ದೂರದ ಹಳ್ಳಿಗಳಲ್ಲಿ ಇರುವ ಅಥವಾ ಊರುಬಿಟ್ಟು ಬೇರೆಡೆ ಹೋಗಿ ಹಾಸ್ಟೆಲ್‌ ಇಲ್ಲವೇ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಕಲಿಯಬೇಕಾದ ಪರಿಸ್ಥಿತಿ ಇದೆ.

80 ಸಾವಿರ ಜನಸಂಖ್ಯೆ
ಅಥಣಿ ಪಟ್ಟಣದಲ್ಲಿ ಸುಮಾರು 70ರಿಂದ 80 ಸಾವಿರ ಮಂದಿ ವಾಸಿಸುತ್ತಿದ್ದಾರೆ. ಇಷ್ಟು ಜನಸಂಖ್ಯೆಯನ್ನು ಹೊಂದಿರುವ ಒಂದು ಪಟ್ಟಣಕ್ಕೆ ಒಂದೇ ಒಂದು ಸರ್ಕಾರಿ ಪ್ರೌಢಶಾಲೆ ಇಲ್ಲದಿದ್ದರೆ ಹೇಗೆ? ಇದರಿಂದ ಉಳ್ಳವರಿಗೆ ಯಾವುದೇ ರೀತಿಯ ಸಮಸ್ಯೆಯಾಗದು. ಇನ್ನು ಬಡವರು, ಮಧ್ಯಮ ವರ್ಗದವರು ಶಿಕ್ಷಣವನ್ನು ಪಡೆಯಬೇಕಾದರೆ ಬಹಳವೇ ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಈ ನಿಟ್ಟಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಾಗಲೀ ಅಥವಾ ಶಾಸಕರಾದ ಮಹೇಶ್‌ ಕುಮಟಳ್ಳಿ ಅವರಾಗಲೀ ಇನ್ನಾದರೂ ಪ್ರಯತ್ನ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಹಾಗೂ ಅವಶ್ಯಕತೆ ಇರುವೆಡೆ ಸರ್ಕಾರಿ ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಬೇಕು ಎಂಬ ಆಗ್ರಹಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

Exit mobile version