Site icon Vistara News

School Bag : ಮುಂದಿನ ವರ್ಷದಿಂದ ಶಾಲಾ ಮಕ್ಕಳಿಗೆ ಒಂದೇ ವಿಷಯದ ಎರಡೆರಡು ಪಠ್ಯ ಪುಸ್ತಕ!

government school bag weight

government school bag weight

ರಾಮಸ್ವಾಮಿ ಹುಲಕೋಡು
ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮುಂದಿನ ವರ್ಷದಿಂದ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡೆರಡು ಪುಸ್ತಕ ಸರಬರಾಜಾಗಲಿದೆ. ಹೌದು, 1ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬ್ಯಾಗ್‌ ಹೊರೆಯನ್ನು (government school bag weight) ಕಡಿಮೆ ಮಾಡಲು ಶಾಲಾ ಶಿಕ್ಷಣ ಇಲಾಖೆ (education department) ಈ ಕ್ರಮ ತೆಗೆದುಕೊಂಡಿದೆ.

ಒಂದೇ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಮಕ್ಕಳಿಗೆ ಒದಗಿಸಲಾಗುತ್ತದೆ. ಈ ಸಂಬಂಧ ಡಿ.8 ರಂದು ಇಲಾಖೆಯು (government of karnataka orders) ಆದೇಶ ಹೊರಡಿಸಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿ.12 ರಂದು ಜ್ಞಾಪನ ಪತ್ರ ಹೊರಡಿಸಿ ಸೂಚಿಸಿದೆ.

1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪಠ್ಯಪುಸ್ತಕಗಳನ್ನು ಸಂಕಲನಾತ್ಮಕ ಮೌಲ್ಯಮಾಪನ ರೀತಿಯಲ್ಲಿ ಎಸ್‌ಎ-1 ಮತ್ತು ಎಸ್‌ಎ-2 ಗಳಾಗಿ ವಿಂಗಡಿಸಿ ಪುಠ್ಯಪುಸ್ತಕಗಳನ್ನು ಮುದ್ರಿಸಲಾಗುತ್ತದೆ. ಎರಡನ್ನೂ ಒಟ್ಟಿಗೇ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತದೆ.

ಎಸ್‌ಎ-1ರಲ್ಲಿ ಬರುವ ಪಾಠಗಳು ನಡೆಯುತ್ತಿದ್ದಾಗ, ಚಿಕ್ಕದಾಗಿರುವ ಈ ಪುಸ್ತಕವನ್ನು ತೆಗೆದುಕೊಂಡು ಹೋದರೆ ಸಾಕು. ಇದರಿಂದ ದೊಡ್ಡ ದೊಡ್ಡ ಪುಸ್ತಕಗಳನ್ನು ಹೋರುವುದು ತಪ್ಪಿ, ಮಕ್ಕಳ ಪಾಠಿ ಚೀಲದ ತೂಕ ಕಡಿಮೆಯಾಗಲಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹೊರಡಿಸಿದ ಆದೇಶ.

ಅರ್ಧದಷ್ಟು ಇಳಿಯಲಿದೆ ಬ್ಯಾಗ್‌ನ ತೂಕ!

ಕಳೆದ ಅಕ್ಟೋಬರ್‌ನಲ್ಲಿ ಮಕ್ಕಳ ಶಾಲಾ ಬ್ಯಾಗ್‌ ತೂಕ ಕಡಿಮೆ ಮಾಡುವ ಸಂಬಂಧ ಸಲಹೆ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮಾಡಿದ ಶಿಫಾರಸುಗಳ ಜಾರಿಗೆ ಸಂಬಂಧಿಸಿದಂತೆ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತೊಂದು ಸಮಿತಿ ರಚಿಸಿದ್ದರು. ಈ ಸಮಿತಿಯ ಶಿಫಾರಸಿನಂತೆ ಇಲಾಖೆಯು ಈಗ ಕ್ರಮ ತೆಗೆದುಕೊಂಡಿದೆ.

ಇದರಿಂದ ಮಕ್ಕಳ ಬ್ಯಾಗ್‌ನ ತೂಕ ಅರ್ಧದಷ್ಟು ಕಡಿಮೆಯಾಗಲಿದೆ. ಉದಾಹರಣೆಗೆ ಈಗ ಐದನೇ ತರಗತಿಯ ಪಠ್ಯ ಪುಸ್ತಕವೊಂದರ ತೂಕ 1.180 ಕೆ.ಜಿ. ಇದೆ ಎಂದುಕೊಂಡರೆ ಇದನ್ನು ಮೊದಲಿಗೆ ಎಸ್‌ಎ-1 ಪಾಠಗಳನ್ನು ಮಾತ್ರ ಅಳವಡಿಸಿ ಒಂದು ಪುಸ್ತಕ ಮುದ್ರಿಸಲಾಗುತ್ತದೆ. ಆಗ ಅದರ ತೂಕ 639 ಗ್ರಾಂ ಆಗಲಿದೆ. ಎಸ್‌ಎ-2 ಪಾಠಗಳನ್ನು ಇನ್ನೊಂದು ಪುಸ್ತಕದಲ್ಲಿ ಅಳವಡಿಸಿ ಮುದ್ರಿಸಲಾಗುತ್ತದೆ. ಇದರ ತೂಕ 600 ಗ್ರಾಂ ಆಗಲಿದೆ. ವಿದ್ಯಾರ್ಥಿಗಳು 1.180 ಕೆ.ಜಿ. ತೂಕದ ಪುಸ್ತಕದ ಬದಲು, ಅರ್ಧ ವರ್ಷ 639 ಗ್ರಾಂ ಮತ್ತೊಂದು ಅರ್ಧ ವರ್ಷ 600 ಗ್ರಾಂ ಪುಸ್ತಕವನ್ನು ಶಾಲೆಗೆ ತೆಗೆದುಕೊಂಡರೆ ಸಾಕು. ಹೀಗ ಪಠ್ಯಚೀಲದ ತೂಕವನ್ನು ಅರ್ಧದಷ್ಟು ಇಳಿಸಲಾಗುತ್ತಿದೆ.

ಖರ್ಚಿಲ್ಲದೆ ಐಡಿಯಾ ಜಾರಿ

ಒಂದೇ ಪುಸ್ತಕವನ್ನು ಎರಡೆರಡು ಪುಸ್ತಕಗಳಾಗಿ ಮುದ್ರಿಸುವಾಗ ಎರಡೆರಡು ಮುಖಪುಟಗಳನ್ನು ಮುದ್ರಿಸಬೇಕಾಗುತ್ತದೆ. ಮುಖಪುಟ ಸೇರಿ 8 ರಿಂದ 10 ಪುಟಗಳ ಮುದ್ರಣ ಹೆಚ್ಚಾಗಲಿದೆ. ಪ್ರತಿ ಪುಟದ ಮುದ್ರಣಕ್ಕೆ 0.45 ಪೈಸೆ ಖರ್ಚಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದ್ದು, ಇದು ಹೆಚ್ಚುವರಿ ಖರ್ಚಾಗಿರುತ್ತದೆ.

ಎಲ್ಲ ಪಠ್ಯಗಳನ್ನು ಈ ರೀತಿ ಎರಡು ಭಾಗಗಳಾಗಿ ವಿಂಗಡಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 8.45 ಕೋಟಿ ಹೊರೆ ಬೀಳಲಿದೆ ಎಂದು ಸಮಿತಿಯು ಅಂದಾಜಿಸಿತ್ತು. ಹೀಗಾಗಿ ಈ ಶಿಫಾರಸನ್ನು ಜಾರಿ ಮಾಡುವುದೇ ಬೇಡವೇ ಎಂಬ ಕುರಿತು ಲೆಕ್ಕಾಚಾರ ಹಾಕಲಾಗಿತ್ತು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಕ್ಲಿಕ್‌ (Click Here) ಮಾಡಿ.

ಈ ಹೊರೆಯನ್ನು ತಪ್ಪಿಸಲು ಇಲಾಖೆಯ ಐಡಿಯಾ ಮಾಡಿದ್ದು, ಪಠ್ಯ ಪುಸ್ತಕ ಒಂದೇ ಮುಖಪುಟವನ್ನು ಮುದ್ರಿಸಲಿದೆ. ಪಾಠಗಳನ್ನು ಹಾಳೆಯ ರೂಪದಲ್ಲಿ ಮುದ್ರಿಸಿ ಒದಗಿಸಲಾಗುತ್ತದೆ. ಶಾಲೆಯಲ್ಲಿ ಶಿಕ್ಷಕರು ಪಾಠಗಳು, ಕಲಿಕೆ ಪೂರ್ಣಗೊಂಡ ನಂತರ ಪಾಠವಿರುವ ಹಾಳೆಗಳನ್ನು ಕೃತಿ ಸಂಪುಟದಲ್ಲಿ (ಮುಖಪುಟದ ಪುಸ್ತಕದಲ್ಲಿ) ಸೇರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಒದಗಿಸಲಿದ್ದಾರೆ. ಹೀಗೆ ಖರ್ಚಿಲ್ಲದೆ ಇಲಾಖೆಯು ಪಾಠಿ ಚೀಲದ ತೂಕವನ್ನು ಕಡಿಮೆ ಮಾಡುವ ಐಡಿಯಾ ಮಾಡಿದೆ. ಆದರೆ ಇದರಿಂದ ಶಾಲೆಗಳಲ್ಲಿ ಯಾವ ರೀತಿಯ ಗೊಂದಲ ಉಂಟಾಗಲಿದೆ ಎಂಬುದರ ಬಗ್ಗೆ ಇಲಾಖೆಯು ತಲೆಕೆಡಿಸಿಕೊಂಡಿಲ್ಲ.

ಈ ಶೈಕ್ಷಣಿಕ ವರ್ಷ ಆರಂಭವಾದಾಗ ಅಂದರೆ ಕಳೆದ ಜೂನ್‌ನಲ್ಲಿ ಪ್ರತಿಯೊಂದು ತರಗತಿಯ ವಿದ್ಯಾರ್ಥಿಗಳು ಎಷ್ಟು ತೂಕದ ಚೀಲವನ್ನು ಬಳಸಬೇಕೆಂದು ಶಾಲಾ ಶಿಕ್ಷಣ ಇಲಾಖೆಯೇ ನಿಗದಿಪಡಿಸಿ ಸುತ್ತೋಲೆ ಹೊರಡಿಸಿತ್ತು.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಮಕ್ಕಳು ಮತ್ತು ಕಾನೂನಿಗೆ ಸಂಬಂಧಿಸಿದ ಕೇಂದ್ರ ಹಾಗೂ ಡಿಎಸ್‌ಇಆರ್‌ಟಿ ಅಧ್ಯಯನ ನಡೆಸಿದ್ದು, ಈ ಅಧ್ಯಯನ ವರದಿಯಂತೆ ಇಲಾಖೆಯು ಪಾಠಿಚೀಲಗಳ ತೂಕವನ್ನು ನಿಗದಿಪಡಿಸಿತ್ತು. ವಿದ್ಯಾರ್ಥಿಗಳು ತಮ್ಮ ದೇಹದ ತೂಕದ ಶೇ. 10 ರಿಂದ ಶೇ.15 ರಷ್ಟು ತೂಕದ ಶಾಲಾ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ ಎಂದು ಮೂಳೆ ತಜ್ಞರು ಶಿಫಾರಸು ಮಾಡಿರುವುದಾಗಿ ಈ ವರದಿಯಲ್ಲಿ ಹೇಳಲಾಗಿತ್ತು. ಹೀಗಾಗಿ 2020 ರಲ್ಲಿ ಸರ್ಕಾರ ಜಾರಿಗೆ ತಂದಿರುವ ʻಶಾಲಾಬ್ಯಾಗ್‌ ನೀತಿʼಯ ಅನ್ವಯ ಈ ಆದೇಶ ಹೊರಡಿಸಲಾಗಿತ್ತು.

ಯಾವ ತರಗತಿಯ ವಿದ್ಯಾರ್ಥಿಯ ಬ್ಯಾಗ್‌ ಎಷ್ಟು ತೂಕವಿರಬೇಕು?

ವಿದ್ಯಾರ್ಥಿಗಳು ಕಲಿಕೆಯ ಎಲ್ಲಾ ಪಠ್ಯ ಪುಸ್ತಕಗಳು/ನೋಟ್‌ ಪುಸ್ತಕಗಳು ಮತ್ತು ಅಭ್ಯಾಸ ಪುಸ್ತಕಗಳನ್ನು ಪ್ರತಿ ದಿನವು ತರುವುದನ್ನು ತಪ್ಪಿಸಲು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಆಯಾ ದಿವಸದ ವೇಳಾಪಟ್ಟಿಗೆ ಅನುಗುಣವಾಗಿ ಅಗತ್ಯವಿರುವ ಪುಸ್ತಕಗಳನ್ನು ಮಾತ್ರ ಶಾಲೆಗೆ ತರಲು ಸೂಚನೆ ನೀಡುವುದು ಸೇರಿದಂತೆ ಹಲವು ಸಲಹೆಗಳನ್ನು ಇಲಾಖೆಯು ಜೂನ್‌ 20 ರಂದು ಹೊರಡಿಸಿದ್ದ ಈ ಆದೇಶದಲ್ಲಿ (ಈ ವರದಿಯನ್ನು ಓದಲು Click Here ) ಸೂಚಿಸಿತ್ತು.

ಈ ವರದಿಯ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ ಮಾಡಿ.

ಇದನ್ನೂ ಓದಿ : Residential School: ವಸತಿ ಶಾಲೆಯ 6ನೇ ತರಗತಿ ಪ್ರವೇಶಾತಿ; ಅರ್ಜಿ ಸಲ್ಲಿಸೋಕೆ ಡಿ.31 ಕೊನೇ ದಿನ

Exit mobile version