ರಾಜು ಪಾಟೀಲ್, ವಿಜಯಪುರ
ಇಲ್ಲಿನ ದೇವರಹಿಪ್ಪರಗಿ ತಾಲೂಕಿನ ಹಂಚಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (Government School) ನಾಡಿನ ಬಾವುಟದ ಬಣ್ಣ ತೊಟ್ಟು ನಳನಳಿಸುತ್ತಿದೆ. ಮಕ್ಕಳಲ್ಲಿ ಬಣ್ಣ-ಬಣ್ಣದ ಕನಸುಗಳನ್ನು ಬಿತ್ತುತ್ತಿದೆ. ಸೊರಗಿದ್ದ ಶಾಲೆಗೆ ಬಣ್ಣದ ಮೆರುಗು ಕೊಟ್ಟಿರುವ ಗ್ರಾಮಸ್ಥರ ಕೆಲಸಕ್ಕೆ ನಾಗರಿಕರಿಂದ, ಶಿಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 150ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದರೆ, ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಹಲವು ಮಕ್ಕಳು ಶಾಲೆ ತೊರೆಯುತ್ತಿದ್ದರು. ಇದನ್ನು ಅರಿತ ಆರೂರು ಗೆಳೆಯರ ಬಳಗದ ಸದಸ್ಯರು, ಶಾಲೆಗೆ ಬರೀ ಬಣ್ಣ ಬಳಿಯುವುದಲ್ಲ, ಬಣ್ಣದ ಜತೆಗೆ ನಾಡಿನ ತತ್ವಗಳು ಮಕ್ಕಳ ಬದುಕಿನ ಭಾಗವಾಗಲಿ ಎನ್ನುವ ಪರಿಕಲ್ಪನೆಯಡಿ ಈ ಶಾಲೆಯನ್ನು ಉದ್ಧರಿಸಿದ್ದಾರೆ.
ಶಾಲೆಯ ಪ್ರತಿ ಕೊಠಡಿಗೆ ನಾಡಧ್ವಜದ ಬಣ್ಣ ಲೇಪಿಸಿದ್ದಲ್ಲದೆ, ಪ್ರತಿ ಕೊಠಡಿಗಳಿಗೆ ಈ ನೆಲದ ದಾರ್ಶನಿಕರ ಹೆಸರನ್ನಿಡಲಾಗಿದೆ. 1ರಿಂದ 2ನೇ ತರಗತಿಗೆ ಮಕ್ಕಳ ಸಾಹಿತಿ ಶಂ.ಗು. ಬಿರಾದಾರ, 5ನೇ ತರಗತಿಗೆ ಭಕ್ತ ಕನಕದಾಸ, 7ನೇ ತರಗತಿ ಕೊಠಡಿಗೆ ವಿಶ್ವ ಗುರು ಬಸವಣ್ಣ, 6ನೇ ತರಗತಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂಬುದಾಗಿ ನಾಮಕರಣ ಮಾಡಿ, ಆಯಾ ದಾರ್ಶನಿಕರ ಸಂಕ್ಷಿಪ್ತ ಪರಿಚಯ ಹಾಗೂ ಅವರ ಸಂದೇಶಗಳನ್ನು ಬರೆಸಿದ್ದಾರೆ.
ಇದನ್ನೂ ಓದಿ | School Teachers | ಕ್ಲಾಸ್ಗೆ ಚಕ್ಕರ್ ಹಾಕುವ ಶಿಕ್ಷಕರಿಗೆ ಶಿಕ್ಷಣ ಸಚಿವರಿಂದ ಕ್ಲಾಸ್!
ಸುಣ್ಣ-ಬಣ್ಣ ಕಾಣದ ಶಾಲೆ
ಹಲವು ದಶಕಗಳಿಂದ ಸುಣ್ಣ-ಬಣ್ಣವನ್ನೇ ಕಾಣದ ಹಂಚಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಾಮಫಲಕವೂ ಇರಲಿಲ್ಲ. ಅದಕ್ಕಾಗಿ 25 ಸಾವಿರ ರೂ. ಖರ್ಚು ಮಾಡಿ ಹೊಸ ನಾಮಫಲಕವನ್ನು ಹಾಕಿಸಲಾಗಿದೆ. ಜತೆಗೆ ಶುದ್ಧ ಕುಡಿಯುವ ನೀರು ಮರೀಚಿಕೆ ಆಗಿದ್ದನ್ನು ಮನಗಂಡ ಬಳಗದ ಬಸು ಕುಂಟೋಜಿ ಎಂಬುವವರು 25 ಸಾವಿರ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದು, ಸದಸ್ಯರು ಶಾಲೆಯ ದಾಖಲೆಗಳನ್ನು ಸಂರಕ್ಷಿಸಿಡಲು ಹೊಸ ತಿಜೋರಿ ಪೂರೈಸಿದ್ದಾರೆ.
೧.೬೮ ಲಕ್ಷ ರೂಪಾಯಿ ಖರ್ಚಿನ ಹೊಣೆ
ಮಧ್ಯಾಹ್ನದ ಬಿಸಿಯೂಟಕ್ಕಾಗಿ ಮಕ್ಕಳಿಗೆ ಊಟದ ತಟ್ಟೆ ಹಾಗೂ ಗ್ಲಾಸ್ಗಳನ್ನು ಪೂರೈಸಲಾಗಿದೆ. ಹಂಚಲಿ ಗ್ರಾಮಸ್ಥರು, ಮೂವರು ಗ್ರಾಪಂ ಸದಸ್ಯರು ಹಾಗೂ ಆರೂರು ಗೆಳೆಯರ ಬಳಗದ ಸದಸ್ಯರೆಲ್ಲ ಸೇರಿ ಈ ಶಾಲೆಗೆ ಒಟ್ಟು 1.68 ಲಕ್ಷ ರೂ. ಖರ್ಚಿನ ಹೊಣೆಯನ್ನು ನಿಭಾಯಿಸಿದ್ದಾರೆ.