Site icon Vistara News

MB Patil: ಬಿಜೆಪಿ ಅವಧಿಯ ಎಲ್ಲ ಹಗರಣಗಳ ತನಿಖೆ ನಡೆಯಲಿದೆ ಎಂದ ಎಂ.ಬಿ ಪಾಟೀಲ್‌

Government to investigate all scams under BJP Government, Says MB Patil

Government to investigate all scams under BJP Government, Says MB Patil

ಬೆಂಗಳೂರು: ಬಿಜೆಪಿ ಸರ್ಕಾರದ (BJP Government in Karnataka) ಅವಧಿಯಲ್ಲಿ ನಡೆದ ಪಿಎಸ್‌ಐ ಹಗರಣ (PSI Scam), 40% ಹಗರಣವೂ ಸೇರಿದಂತೆ ಎಲ್ಲ ಹಗರಣಗಳ ತನಿಖೆಯನ್ನು ಕಾಂಗ್ರೆಸ್‌ ಸರ್ಕಾರ (Congress Government) ನಡೆಸಲಿದೆ ಎಂದು ನೂತನ ಸಚಿವ ಎಂ.ಬಿ ಪಾಟೀಲ್‌ (MB Patil) ಹೇಳಿದ್ದಾರೆ. ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ ಅವರು, ಪಿಎಸ್‌ಐ , ಬಿಟ್ ಕಾಯಿನ್ ಸೇರಿದಂತೆ ಪ್ರತಿಯೊಂದು ಇಲಾಖೆಯಲ್ಲಿ ನಡೆದಿರುವ ಹಗರಣವನ್ನು ಬಯಲಿಗೆಳೆಯಲಾಗುವುದು ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನೇ ಪ್ರಮುಖವಾಗಿ ಪ್ರಸ್ತಾಪಿಸಿ ಜಯ ಸಾಧಿಸಿರುವ ಕಾಂಗ್ರೆಸ್‌ ಇದೀಗ ತನ್ನ ಆರೋಪಗಳಿಗೆ ಸಂಬಂಧಿಸಿ ಕಾನೂನಾತ್ಮಕ ಹೆಜ್ಜೆ ಇಡಲು ಮುಂದಾಗಿದೆ ಎಂದು ಎಂ.ಬಿ. ಪಾಟೀಲ್‌ ಅವರ ಹೇಳಿಕೆಯನ್ನು ವ್ಯಾಖ್ಯಾನಿಸಲಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನೇಕ ಹಗರಣಗಳು ನಡೆದಿರುವ ಆರೋಪಗಳು ಬಂದಿತ್ತು. ಬಿಟ್‌ ಕಾಯಿನ್‌, ಪಿಎಸ್‌ಐ ನೇಮಕಾತಿ, ಗುತ್ತಿಗೆಗಳಲ್ಲಿ 40% ಕಮಿಷನ್‌ ದಂಧೆಯ ಗಂಭೀರ ಆರೋಪಗಳಿದ್ದವು. ಇವುಗಳಲ್ಲಿ ಹೆಚ್ಚಿನವುಗಳ ಬಗ್ಗೆ ಸರಿಯಾದ ತನಿಖೆಯೇ ನಡೆದಿಲ್ಲ. ಕೆಲವನ್ನು ನಡೆಸಿದರೂ ಅವುಗಳಿಗೆ ತೃಪ್ತಿಕರ ತಾತ್ವಿಕ ಅಂತ್ಯ ನೀಡಲಾಗಿಲ್ಲ. ಹಾಗಾಗಿ, ನೂತನ ಕಾಂಗ್ರೆಸ್ ಸರ್ಕಾರ ಆ ಎಲ್ಲಾ ಹಗರಣಗಳ ಮರು ತನಿಖೆ ಮಾಡುತ್ತದೆ. ಜೊತೆಗೆ, ತನಿಖೆಯಾಗದೇ ಉಳಿದಿರುವ ಕೆಲವು ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದವರು ಹೇಳಿದರು.

ನಾವು ಬಿಜೆಪಿ ಸರ್ಕಾರದಲ್ಲಿ ಕೇಳಿಬಂದ ಎಲ್ಲಾ ಹಗರಣಗಳನ್ನು ಮರು ತನಿಖೆಗೆ ಒಳಪಡಿಸುವ ಅವಶ್ಯಕತೆಯಿದೆ ಎಂದು ಖುದ್ದು ಸಿದ್ದರಾಮಯ್ಯನವರೇ ತಮ್ಮ ಬಳಿ ಹೇಳಿದ್ದಾಗಿ ಎಂ.ಬಿ. ಪಾಟೀಲ್ ಹೇಳಿದ್ದಾಗಿಯೂ ಇನ್ನೊಂದು ಕಡೆ ವರದಿಯಾಗಿದೆ.

ಪ್ರತಿಯೊಂದು ಇಲಾಖೆಯ ಕೇಸ್‌ ಟು ಕೇಸ್‌ ತನಿಖೆ

ಬಿಟ್‌ ಕಾಯಿನ್‌, ಪಿಎಸ್‌ಐ ಹಗರಣಗಳು ಮಾತ್ರವಲ್ಲ, ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿಗಳಲ್ಲಿ ಕೇಸ್‌ ಟು ಕೇಸ್‌ ಪ್ರತಿಯೊಂದು ಪ್ರಕರಣವನ್ನು ಗಮನಿಸಲಾಗುವುದು. ʻʻಕೆಲವು ಕಡೆ ಎಸ್ಟಿಮೇಷನ್ ಹೆಚ್ಚು ಮಾಡಿದ್ದಾರೆ. 100 ಕೋಟಿ ಇರುವ ಕಡೆ 120, 150 ಕೋಟಿ ಮಾಡಿದ್ದಾರೆ.ʼʼ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

ಅಧಿಕಾರಿಗಳ ವರ್ಗಾವಣೆಯೂ ಸನ್ನಿಹಿತ

ಈ ನಡುವೆ, ಕೆಲವೊಂದು ಅಧಿಕಾರಿಗಳನ್ನು ವರ್ಗಾಯಿಸುವ ಕೆಲಸವೂ ನಡೆಯಲಿದೆ ಎಂದ ಅವರು, ಅಧಿಕಾರಿಗಳ ವರ್ಗಾವಣೆ ಸಿಎಂ ಪರಮಾಧಿಕಾರವಾಗಿದ್ದು, ಹೊಸ ಸರ್ಕಾರ ಬಂದ ಮೇಲೆ ಬದಲಾವಣೆ ಆಗ್ತದೆ. ಇದಕ್ಕೆ ಅಧಿಕಾರಿಗಳ ಪಟ್ಟಿ ಸಿದ್ಧವಿದೆ ಎಂದರು.

ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು

ಈ ನಡುವೆ, ಕಳೆದ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿರುವುದು ಸತ್ಯ. ಎಲ್ಲ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ ತನಿಖೆ ಆಗಬೇಕಿದೆ. ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು. ತನಿಖಾ ಆಯೋಗ ರಚನೆ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್​ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ತನಿಖೆಯಾಗಲಿ ಎಂದ ಯಡಿಯೂರಪ್ಪ

ʻʻಬಿಜೆಪಿ ಸರ್ಕಾರದ ಹಗರಣಗಳ ತನಿಖೆ ನಡೆಸಲಾಗುವುದುʼʼ ಎಂಬ ಎಂ.ಬಿ. ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು, ʻʻಅವರು ಈ ಥರ ಹೇಳಿಕೆ ಕೊಟ್ಟಿರೋದು ಸ್ವಾಭಾವಿಕ. ಇದಕ್ಕೆ ನಾವು ಚಿಂತೆ ಮಾಡಲ್ಲ. ಯಾವುದೇ ಹಗರಣ ಇದ್ದರೂ ತನಿಖೆ ಮಾಡಲಿ, ನಾವು ಚಿಂತೆ ಮಾಡಲ್ಲ. ಯಾರು ತಪ್ಪು ಮಾಡಿದಾರೋ ಅವರಿಗೆ ಶಿಕ್ಷೆ ಆಗಲಿʼʼ ಎಂದು ಹೇಳಿದರು.

ಇದನ್ನೂಓದಿ : BS Yediyurappa: ಕಾಂಗ್ರೆಸ್‌ ಗ್ಯಾರಂಟಿ ಜಾರಿ ಬಗ್ಗೆ ನನಗೆ ಗ್ಯಾರಂಟಿ ಇದೆ: ಬಿ.ಎಸ್‌. ಯಡಿಯೂರಪ್ಪ

Exit mobile version