Site icon Vistara News

Government Transfer : ಇನ್ನು ವರ್ಗಾವಣೆಗೆ ಸಿಎಂ ಅನುಮತಿ ಕಡ್ಡಾಯ!

Vistara Editorial, Pay attention to the demands of government employees

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ವರ್ಗಾವಣೆ (Government Transfer) ವಿಚಾರವು ಸಾಕಷ್ಟು ಗದ್ದಲ, ಬಿರುಗಾಳಿಯನ್ನು ಎಬ್ಬಿಸಿತ್ತು. ಅಲ್ಲದೆ, ಈ ವಿಷಯವಾಗಿ ಸಚಿವರ ವಿರುದ್ಧ ಕಾಂಗ್ರೆಸ್‌ ಪಕ್ಷದ ಶಾಸಕರೇ ಅಸಮಾಧಾನವನ್ನು ಹೊರಹಾಕಿದ್ದರು. ಇದು ಕಾಂಗ್ರೆಸ್‌ ಸರ್ಕಾರಕ್ಕೆ (Congress Government) ತೀವ್ರ ಮುಜುಗರವನ್ನು ತಂದೊಡ್ಡಿತ್ತು ಈಗ ಈ ಸಂಬಂಧ ಎಚ್ಚೆತ್ತಿರುವ ರಾಜ್ಯ ಸರ್ಕಾರ ಹೊಸ ಆದೇಶವೊಂದನ್ನು ಹೊರಡಿಸಿದೆ. “ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆಗೆ ಆಗಬೇಕು ಎಂದಾದರೆ ಅದಕ್ಕೆ ಸಿಎಂ ಅನುಮತಿ ಕಡ್ಡಾಯ (CM permission mandatory)” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಿಎಂ ಅನುಮತಿ ಪಡೆದುಕೊಂಡೇ ಇಲಾಖಾವಾರು ವರ್ಗಾವಣೆ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಆರೋಪಗಳು ಬರುತ್ತಿರುವುದರ ನಡುವೆ ಈ ಆದೇಶ ಹೊರಬಿದ್ದಿದೆ. ಇನ್ನು ಸಾರ್ವತ್ರಿಕ ವರ್ಗಾವಣೆ ಅವಧಿಯೂ ಸಹ ಮುಗಿದಿದೆ. ಹೀಗಾಗಿ ಇನ್ನು ಮುಂದೆ ನಡೆಯುವ ಪ್ರತಿ ವರ್ಗಾವಣೆಗೆ ಸಿಎಂ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Lok Sabha Election 2024 : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್‌ ಬೇಡಿಕೆ ಇಟ್ಟ ಸತೀಶ್‌ ಜಾರಕಿಹೊಳಿ!

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಕಾರ್ಯದರ್ಶಿಯವರಿಂದ ಸುತ್ತೋಲೆ ಹೊರಡಿಸಲಾಗಿದೆ. ಸಿಎಂ ಪೂರ್ವಾನುಮತಿ ಪಡೆಯದೇ ವರ್ಗಾವಣೆ ಮಾಡಿದಲ್ಲಿ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ. ಅನುಮತಿ ಪಡೆಯದಿದ್ದರೆ ಸರ್ಕಾರದ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಇಲಾಖೆ ಮುಖ್ಯಸ್ಥರೇ ಜವಾಬ್ದಾರರಾಗಿರುತ್ತಾರೆ. ಅಂಥ ಪ್ರಕರಣಗಳಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವರ್ಗಾವಣೆ ಮಾಡಿ ನಂತರ ಸಿಎಂ ಅನುಮತಿ ಪಡೆಯುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಎಲ್ಲ ಇಲಾಖೆಗಳ ಎ, ಬಿ, ಸಿ, ಡಿ ದರ್ಜೆಗಳ ನೌಕರರ ವರ್ಗಾವಣೆಗೆ ಈ ಆದೇಶ ಅನ್ವಯವಾಗಲಿದೆ. ಎಲ್ಲ ಇಲಾಖೆಗಳಿಗೂ ಕಟ್ಟುನಿಟ್ಟಾಗಿ ಆದೇಶ ಪಾಲನೆಗೆ ತಾಕೀತು ಮಾಡಲಾಗಿದೆ.

ಅನುಮತಿ ಇಲ್ಲದೇ ನಡೆಯುತ್ತಿದ್ದ ವರ್ಗಾವಣೆ!

ಈ ಆದೇಶದ ಪ್ರಕಾರ, ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ಬಳಿಕವೂ ಕೆಲವು ಇಲಾಖೆಗಳಲ್ಲಿ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ ನಂತರದಲ್ಲಿ ಘಟನೋತ್ತರ ಅನುಮೋದನೆಯನ್ನು ಪಡೆಯಲು ಸಿಎಂ ಗಮನಕ್ಕೆ ತರಲಾಗುತ್ತಿದೆ. ಹೀಗಾಗಿ ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಆದೇಶದಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: BK Hariprasad : ಸಣ್ಣ ಸಮುದಾಯದವರ ಅವಕಾಶಕ್ಕಾಗಿ ಬೀದಿಗಿಳಿಯುವೆ: ಸಿಎಂ ವಿರುದ್ಧ ಹರಿಪ್ರಸಾದ್‌ ಮತ್ತೆ ಗುಡುಗು

ಈ ಮೊದಲು ಜೂನ್‌ 1ರಿಂದ ಜುಲೈ 3ರ ವರೆಗೆ ಶೇಕಡಾ 6 ರಷ್ಟು ಮೀರದಂತೆ ಗ್ರೂಪ್‌ ಎ, ಬಿ, ಸಿ, ಡಿ ವರ್ಗದ ಅಧಿಕಾರಿಗಳು, ನೌಕರರ ವರ್ಗಾವಣೆಗೆ ಅವಕಾಶ ನೀಡಿ ಆಯಾ ಇಲಾಖೆಯ ಸಚಿವರಿಗೆ ಅಧಿಕಾರವನ್ನು ನೀಡಲಾಗಿತ್ತು. ಅದರಂತೆ ವರ್ಗಾವಣೆ ಪ್ರಕ್ರಿಯೆಗಳು ನಡೆದಿದ್ದವು. ಇದರ ತರುವಾಯವೂ ಕೆಲವು ಇಲಾಖೆಗಳಲ್ಲಿ ಸಿಎಂ ಅನುಮತಿಯನ್ನು ಪಡೆಯದೇ ವರ್ಗಾವಣೆ ಮಾಡಿ, ಬಳಿಕ ಅನುಮೋದನೆಯನ್ನು ಪಡೆಯಲು ಮುಂದಾಗಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನೂತನ ಆದೇಶವನ್ನು ಹೊರಡಿಸಲಾಗಿದ್ದು, ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.

Exit mobile version