Site icon Vistara News

ನೀತಿ ಕತೆಗಳು ಮಕ್ಕಳ ಭವಿಷ್ಯಕ್ಕೆ ಪೂರಕ: ಕಥಾ ಲೋಕ ಕೃತಿಗೆ ರಾಜ್ಯಪಾಲರ ಶ್ಲಾಘನೆ

ಥಾವರ್ ಚಂದ್ ಗೆಹ್ಲೋಟ್‌

ಬೆಂಗಳೂರು: ಮನೆಯನ್ನು ನಿರ್ಮಾಣ ಮಾಡುವಾಗ ದೀರ್ಘಕಾಲವಾಗಿ ಉಳಿಯಲು ಅದರ ತಳಪಾಯ ಬಲವಾಗಿರಬೇಕು ಎಂದು ಗುಣಮಟ್ಟದ ವಸ್ತುಗಳನ್ನು ಬಳಸುತ್ತೇವೆ. ಇದೇ ಮನಸ್ಥಿತಿಯನ್ನು ನಮ್ಮ ಮಕ್ಕಳ ವಿಚಾರದಲ್ಲೂ ಹೊಂದಿರಬೇಕು. ಬಾಲ್ಯವು ಮಗುವಿನ ಜೀವನದ ಅಡಿಪಾಯವಾಗಿದ್ದು, ಅದನ್ನು ಗಟ್ಟಿಯಾಗಿ ಇಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಅಡಿಪಾಯದ ಮೇಲೆ ಈ ಮಕ್ಕಳ ಭವಿಷ್ಯದ ಜೀವನವು ಅವಲಂಬಿಸಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ತಿಳಿಸಿದರು.

ರಾಜಭವನದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾನಿಲಯ ವತಿಯಿಂದ ಹೊರತರಲಾಗಿರುವ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ನೈತಿಕ ಕಥೆಗಳ ಸಂಕಲನ “ಕಥಾ ಲೋಕ” ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇದನ್ನೂ ಓದಿ | Talakaveri Temple | ತಲಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ದಿನಾಂಕ ನಿಗದಿ

ನೈತಿಕ ಕಥೆಗಳು ಮಕ್ಕಳ ಜೀವನಕ್ಕೆ ನಿಕಟ ಸಂಬಂಧ ಹೊಂದಿವೆ. ಮಕ್ಕಳ ಅಡಿಪಾಯವನ್ನು ಬಲಪಡಿಸುವಲ್ಲಿ, ಸಾಂಸ್ಕೃತಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಅಭಿವೃದ್ಧಿಪಡಿಸುವಲ್ಲಿ ನೈತಿಕ ಕಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನೈತಿಕ ಕಥೆಗಳು ಮಕ್ಕಳಿಗೆ ಉತ್ತಮ ಕಲಿಕೆಯನ್ನು ನೀಡುವ ಮಾನಸಿಕ ವಿಧಾನವಾಗಿದೆ. ವ್ಯಕ್ತಿಯ ರಚನೆ ಮತ್ತು ಸಮಾಜದ ಉನ್ನತಿಯಲ್ಲಿ ಶಿಕ್ಷಣವು ಬಹಳ ಮುಖ್ಯವಾದ ಕೊಡುಗೆಯನ್ನು ಹೊಂದಿದೆ ಎಂದು ಅವರು ಹೇಳಿದರು.

ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆಯನ್ನು ಮೂಡಿಸುವ ಮತ್ತು ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಜೋಡಿಸುವ, ಧರ್ಮ-ಸಂಸ್ಕೃತಿ, ರಾಷ್ಟ್ರದ ಏಕತೆ-ಸಮಗ್ರತೆಯನ್ನು ಕಾಪಾಡುವ ಮತ್ತು ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಕಾಪಾಡುವಂತಹ ಶಿಕ್ಷಣದ ಅವಶ್ಯಕತೆ ಇದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಇಂದಿನ ಮತ್ತು ಭವಿಷ್ಯದ ಪೀಳಿಗೆಯ ಭವಿಷ್ಯವನ್ನು ಉಜ್ವಲವಾಗಿ ಮತ್ತು ಸುರಕ್ಷಿತವಾಗಿಸಲಿದೆ. ನವ ಭಾರತ ನಿರ್ಮಾಣದಲ್ಲಿ ಇದರ ಪಾತ್ರ ನಿರ್ಣಾಯಕವಾಗಿರುತ್ತದೆ. ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿಯವರ ನೇತೃತ್ವದಲ್ಲಿ ಹೊರತರಲಾಗಿರುವ “ಕಥಾ ಲೋಕ” ಪುಸ್ತಕವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಕನ್ನಡ ನೈತಿಕ ಕಥೆಗಳ ಸಂಗ್ರಹವಾಗಿದೆ. ಈ ಪುಸ್ತಕದ ಅಧ್ಯಯನವು ಮಕ್ಕಳಲ್ಲಿ ನೈತಿಕತೆ ಮತ್ತು ದೇಶಭಕ್ತಿಯನ್ನು ಬೆಳೆಸುತ್ತದೆ ಮತ್ತು ಜೀವನಶೈಲಿಯ ಮೌಲ್ಯಗಳನ್ನು ಕಲಿಸುತ್ತದೆ ಎಂಬ ನಂಬಿಕೆ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ “ಡಾ. ದೊರೆಸ್ವಾಮಿ ಅವರ ಐದು ದಶಕಗಳ ಶೈಕ್ಷಣಿಕ ಅನುಭವ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತಾಗಿದೆ. ಅವರು ಪರಿಚಯಿಸಿದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಯೋಜನೆ ಬಹುದೊಡ್ಡ ಕೊಡುಗೆಯಾಗಿದೆ, ಹಿಡಿದ ಕೆಲಸವನ್ನು ಪಟ್ಟು ಹಿಡಿದು ಮಾಡುವ ಅವರ ಗುಣ ಅನುಕರಣೀಯ. ‌ಕಥಾಲೋಕ ಪಿ.ಇ.ಎಸ್. ಸಂಸ್ಥೆಯ ಅಪರೂಪದ ಕಾಳಜಿಯ ಸಂಕೇತʼʼ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಮಾತನಾಡಿ “”ಭಾರತೀಯ ಕಥಾ ಪರಂಪರೆಗೆ ಜನಪದದ ಕೊಡುಗೆ ತುಂಬಾ ದೊಡ್ಡದು. ಇಂದಿನ ತಾಂತ್ರಿಕ ಯುಗದಲ್ಲಿ ಕತೆ ಹೇಳುವ ಕಲೆ ಮಾಯವಾದ ಹೊತ್ತಲ್ಲಿ ಕಥಾಲೋಕ ಪ್ರಕಟಣೆ ಮಾಡಿ, ಹೊಸ ಮನ್ವಂತರ ಬರೆದಿದ್ದಾರೆ. ಇದರ ಪ್ರತಿಫಲವನ್ನು ಶಿಕ್ಷಣ ಕ್ಷೇತ್ರದವರು ಪಡೆಯಬೇಕುʼʼ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಇ.ಎಸ್. ಕುಲಾಧಿಪತಿ, ಸರ್ಕಾರದ ಶೈಕ್ಷಣಿಕ ಸಲಹೆಗಾರ ಡಾ. ಎಂ. ಆರ್. ದೊರೆಸ್ವಾಮಿ, ತಮ್ಮ ಕನಸನ್ನು ನನಸು ಮಾಡಿದ ನಾಡಿನ ಹಿರಿಯ ನಾಯಕ ಯಡಿಯೂರಪ್ಪ ಅವರ ಔದಾರ್ಯವನ್ನು ಕೊಂಡಾಡಿದರು. ಅವರ ಸಮಯಪ್ರಜ್ಞೆ ಹಾಗೂ ಜೀವನೋತ್ಸಾಹ ಇಂದಿನ ಯುವಕರು ಪರಿಪಾಲಿಸಬೇಕು ಎಂದ ಅವರು, ಶಾಲಾ ದತ್ತು ಯೋಜನೆಯ ಯಶಸ್ಸಿಗೆ ಯಡಿಯೂರಪ್ಪ ಅವರ ಕೊಡುಗೆ ದೊಡ್ಡದಾಗಿದೆ. ಇಂತಹ ಅಪರೂಪದ ಕಾರ್ಯಕ್ರಮ ನಡೆಸಲು ಕಾರಣರಾದ ರಾಜ್ಯಪಾಲರು ಮತ್ತು ಸರ್ಕಾರಕ್ಕೆ ಕೃತಜ್ಞತೆ ಎಂದರು.

ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ಸೂರ್ಯಪ್ರಸಾದ, ಕುಲಸಚಿವ ಡಾ. ಕೆ. ಎಸ್. ಶ್ರೀಧರ, ಪ್ರೊ. ವಿ. ಕೃಷ್ಣ,
ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ಸಾಹಿತಿಗಳು ಹಾಗೂ ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | ಸೆ.18ರಂದು ಸಂಸ್ಕೃತಿ ಕೇಂದ್ರದಿಂದ ನಾದ ನೂಪುರ-ಹರಿದಾಸ ನೃತ್ಯ ಸಂಪದ ಕಾರ್ಯಕ್ರಮ

Exit mobile version