ಬೆಂಗಳೂರು: ಸದ್ಯಕ್ಕೆ ಎನ್‌ಆರ್‌ಬಿಸಿ – 5ಎ ಕಾಲುವೆಯನ್ನು ಮಾಡಲು ಆಗುವುದಿಲ್ಲ. ಈ ಕಾಲುವೆಯ 15 ಕಿ.ಮೀ ಸುರಂಗವು ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಹಾದುಹೋಗುತ್ತದೆ. ಅದನ್ನು ಹಟ್ಟಿ ಮೈನ್ಸ್ ಅಧಿಕಾರಿಗಳು ಒಪ್ಪುವುದಿಲ್ಲ. ಅದಲ್ಲದೆ 80 ಮೀಟರ್ ಡೀಪ್ ಕಟ್ ಕೂಡ ಬರುತ್ತದೆ. ಅದಕ್ಕಾಗಿ ಈ ಕಾಲುವೆಯನ್ನು ಮಾಡುವುದು ಕಷ್ಟ ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ವಾಟರ್ ಲೋಕೆಷನ್ ಕೂಡಾ ಇಲ್ಲ. ಹೀಗಾಗಿ ಸದ್ಯದಲ್ಲಿ ಕಾಲುವೆ ನಿರ್ಮಾಣ ಮಾಡುವಂತಹ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ | ಶಿಕ್ಷಕರ ನೇಮಕಾತಿ ಹಗರಣ ನಡೆದಿದೆ, ಆದರೆ ನಾವು ಹೊಣೆಯಲ್ಲ ಎಂದ ಕಿಮ್ಮನೆ ರತ್ನಾಕರ
ಈ ವೇಳೆ ಅಂದಿನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೀಡಿದ್ದ ಭರವಸೆಯನ್ನು ಬಸನಗೌಡ ತುರುವಿಹಾಳ ನೆನಪಿಸಿದರು. ಆಗ ಭರವಸೆ ಕೊಟ್ಟು, ಈಗ ಮಾಡಲು ಆಗಲ್ಲ ಎಂದರೆ ಹೇಗೆ ಎಂದು ಶಾಸಕರು ಪ್ರಶ್ನಿಸಿದರು. ಆಗ ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಉಪಚುನಾವಣೆ ವೇಳೆ ಮಸ್ಕಿ ಭಾಗದಲ್ಲಿ ನೀರಾವರಿ ಯೋಜನೆ ಆಗಬೇಕು ಎಂದು ರೈತರು ಪ್ರತಿಭಟನೆ ಮಾಡಿದ್ದರು. ಆ ಸಂದರ್ಭದಲ್ಲಿ ನಾನು ರೈತರನ್ನು ಭೇಟಿ ಮಾಡಿದ್ದೆ. ಆಗ ನಮಗೆ ಒತ್ತಾಯ ಮಾಡಿದ್ದರು. ಮುಂಬರುವ ಅಧಿವೇಶನದೊಳಗೆ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಆಗಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಈ ಕಾಲುವೆ ನಿರ್ಮಾಣದಿಂದ ಕೃಷ್ಣಾ ಮತ್ತು ತುಂಗಭದ್ರಾ ಉಪ ಜಲಾನಯನ ಪ್ರದೇಶ ಹಾದುಹೋಗುತ್ತದೆ. ಇದರಿಂದ ಆಂಧ್ರ ಮತ್ತು ತೆಲಂಗಾಣದವರು ಕ್ಯಾತೆ ತೆಗೆಯುತ್ತಾರೆ. ಇದರಿಂದ ಅಂತಾರಾಜ್ಯ ಸಮಸ್ಯೆ ಸೃಷ್ಟಿಯಾಗುತ್ತದೆ. ಕಾಲುವೆಯ 15 ಕಿ.ಮೀ ಸುರಂಗ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಹೋಗುತ್ತದೆ. ಆದ್ದರಿಂದ ಮುಂದಿನ ದಿನದಲ್ಲಿ ಪರಿಶೀಲನೆ ಮಾಡಿ, ಬೇರೆ ಯೋಜನೆಯಲ್ಲಿ 5ಎ ಕಾಲುವೆಯಲ್ಲಿ ಪ್ರದೇಶಕ್ಕೆ ಅನುಕೂಲ ಮಾಡಿಕೊಡಲು ಏನು ಮಾಡಬೇಕೋ ಮಾಡೋಣ ಎಂದು ಹೇಳಿದರು.
ತಿಗಡಿ ಹರಿನಾಲಾ ಪ್ರದೇಶದ ರಸ್ತೆಗಳ ನಿರ್ಮಾಣಕ್ಕೆ ಜಿಪಂ ಸಿಇಒಗೆ ಸೂಚಿಸ್ತೀನಿ
ಕಳೆದ ಎರಡು ವರ್ಷದಿಂದ ಲೆಕ್ಕ ಶೀರ್ಷಿಕೆ 4701 ಅಡಿ ತಿಗಡಿ ಹರಿನಾಲಾ ಪ್ರದೇಶದ ರಸ್ತೆಗಳ ನಿರ್ಮಾಣ ಆಗಬೇಕೆಂದು ಕೇಳಿದ್ದೆ, ಆದರೆ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ದೊಡ್ಡನಗೌಡರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಚಿವರು, ಶಾಸಕರು ಆರು ರಸ್ತೆಗಳನ್ನು ಮಾಡಿಕೊಡಲು ಕೇಳಿದ್ದಾರೆ. ಅದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ಇಲಾಖೆಗೆ ಬರುವ ಮೂರು ರಸ್ತೆಗಳು ಇವೆ. ನಾನು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಮ್ಮ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಎನ್‌ಆರ್‌ಜಿಯಲ್ಲಿ ಮಾಡಿಕೊಡಿ ಎಂದು ಹೇಳುವುದಾಗಿ ತಿಳಿಸಿದರು.
ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಮೂರು ರಸ್ತೆಗಳಿವೆ. ಅನುದಾನದ ಕೊರತೆಯಿಂದ ಅವುಗಳನ್ನೂ ಮಾಡಿಲ್ಲ. ಅದನ್ನೂ ಎನ್‌ಆರ್‌ಜಿಯಲ್ಲಿ ಮಾಡಿಕೊಡಲು ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚನೆ ನೀಡುತ್ತೇನೆ ಎಂದರು. ಆಗ ಎನ್‌ಆರ್‌ಜಿ ಮೂಲಕ ಮಾಡುವ ರಸ್ತೆಗಳು ರಿಪೇರಿಯಾಗಲು ಸಾಧ್ಯವಿಲ್ಲ, ಅಲ್ಲಿ ಬಸ್‌ಗಳು ಓಡಾಡಬೇಕು, ಹೀಗಾಗಿ ಲೆಕ್ಕ ಶೀರ್ಷಿಕೆ 4701ರ ಅಡಿಯಲ್ಲಿ ಮಾಡಿಕೊಂಡುವಂತೆ ದೊಡ್ಡನಗೌಡರು ಮನವಿ ಮಾಡಿದರು. ಆದರೆ, ನಮ್ಮ ಇಲಾಖೆಗೆ ಒಳಪಡುವ ಸರ್ವಿಸ್ ರೋಡ್‌ಗಳನ್ನು ಮಾಡಿಕೊಂಡಿರುತ್ತೇವೆ. ಅಲ್ಲಿ ಬಸ್, ಟ್ರ್ಯಾಕ್ಟರ್ ಓಡಿಸಲು ಅವಕಾಶ ಇಲ್ಲ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮಾಡಿಸಿಕೊಡುತ್ತೇವೆ ಎಂದು ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.
ದೇವರಹಿಪ್ಪರಗಿ ಕ್ಷೇತ್ರದಲ್ಲಿ ಕಾಮಗಾರಿ ಮಾಡಲು ಸೂಚನೆ
ದೇವರಹಿಪ್ಪರಗಿ ಕ್ಷೇತ್ರದಲ್ಲಿ ಮೂರು ವರ್ಷದಲ್ಲಿ ಒಂದು ಕಾಮಗಾರಿಯೂ ಆಗಿಲ್ಲ ಎಂಬ ಬಗ್ಗೆ ವೆಂಕಟರೆಡ್ಡಿ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಮಂಜೂರಾದ ಕಾಮಗಾರಿಗಳನ್ನು ಕೂಡಲೇ ಅನುಷ್ಠಾನ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. ಕಳೆದ ಮೂರು ವರ್ಷಗಳಿಂದ ಆ ಪ್ರದೇಶದಲ್ಲಿ ಮಳೆ ಜಾಸ್ತಿಯಾಗಿರುವುದರಿಂದ ಕಾಮಗಾರಿ ಮಾಡಲು ವಿಳಂಬವಾಗಿದೆ. ಕಾಮಗಾರಿ ಮಾಡಲು ಸೂಚನೆ ಕೊಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | ಕರ್ನಾಟಕದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯುವ ಕುರಿತು ಸರ್ಕಾರದ ಮಹತ್ವದ ಘೋಷಣೆ