ಬೆಂಗಳೂರು: ಜೈನ ಮುನಿಗಳನ್ನು ಹತ್ಯೆ (Jain Muni Murder) ಮಾಡಿರುವುದನ್ನು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತ ಮಾಡದೆ ಅದನ್ನು ಸಾಮಾಜಿಕ ಹಿನ್ನೆಲೆಯಲ್ಲಿ ನೋಡುವಂತಾಗಲು ಆಳಕ್ಕಿಳಿತು ತನಿಖೆ ನಡೆಯಬೇಕು, ಅದಕ್ಕಾಗಿ ಸಿಬಿಐಗೆ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಒತ್ತಾಯಿಸಿದೆ. ಆದರೆ ನಮ್ಮ ಪೊಲೀಸರ ಮೇಲಿನ ಗೌರವವನ್ನು ಇದು ಕಡಿಮೆ ಮಾಡುವುದರಿಂದ ಸಿಬಿಐಗೆ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.
ವಿಧಾನಸಭೆಯಲ್ಲಿ ಈ ಕುರಿತು ಗೃಹಸಚಿವ ಡಾ. ಜಿ. ಪರಮೇಶ್ವರ್ ಲಿಖಿತ ಉತ್ತರ ನೀಡಿದರು. ಆಚಾರ್ಯ ಕಾಮ ಕುಮಾರ ನಂದಿ ಅವರು ಆರು ಲಕ್ಷ ರೂ. ಸಾಲ ನೀಡಿದ್ದರು, ಅದನ್ನು ಮರಳಿಸುವಂತೆ ಪೀಡಿಸುತ್ತಿದ್ದರಿಂದ ಇಬ್ಬರೂ ಸೇರಿ ರಾತ್ರಿ ಕೊಲೆ ಮಾಡಿ ಶರೀರವನ್ನು ತುಂಡು ಮಾಡಿದೆವು ಎಂದು ಆರೋಪಿಗಳು ಒಪ್ಪಿದ್ದರು. ಮೊದಲ ಆರೋಪಿಯ ಜಮೀನಿನ ಹಾಳು ಬಾವಿಯಲ್ಲಿ ದೇಹವನ್ನು ಹಾಕಿರುವುದಾಗಿ ಹೇಳಿದ್ದರು.
ಈ ಮಾಹಿತಿಯನ್ನು ಪಡೆದ ಬೆಳಗಾವಿ ಐಜಿಪಿ, ಎಸ್‌ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೊಳವೆ ಬಾವಿಯನ್ನು ಜುಲೈ 8ರಂದು ಬಗೆಯಲಾಗಿದೆ. ಎಂಟು ಗಂಟೆಯ ಕಾರ್ಯಾಚರಣೆ ನಂತರ ದೇಹದ ಭಾಗಗಳು ಸಿಕ್ಕಿದವು. ಹೆಚ್ಚಿನ ಪರೀಕ್ಷೆಗೆ ದೇಹವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೊದಲ ಆರೋಪಿ ನಾರಾಯಣ ಬಸಪ್ಪ ಮಾಳಿ, ಎರಡನೇ ಆರೋಪಿ ಹಸನ್ ಸಾಬ್ ಮಕ್ಬೂಲ್ ದಲಾಯತ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಪ್ರಕರಣದ ತನಿಖೆಯನ್ನು ಡಿವೈಎಸ್‌ಪಿ ನಡೆಸುತ್ತಿದ್ದಾರೆ. ಎಸ್‌ಪಿ ಹಾಗೂ ಐಜಿಪಿ ಮಾರ್ಗದರ್ಶನದಲ್ಲಿ ತನಿಖೆ ನಡೆದಿದೆ. ಜುಲೈ 10ರಂದು ಘಟನಾ ಸ್ಥಳಕಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಎಲ್ಲ ಆಯಾಮಗಳಿಂದ ತನಿಖೆಯನ್ನು ಕೈಗೊಳ್ಳಲಾಗುತ್ತದೆ.
ದೂರು ಬಂದ ಕೇವಲ ಆರು ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದಕ್ಕಾಗಿ ಪೊಲೀಸರಿಗೆ ಪ್ರಶಂಸೆ ವ್ಯಕ್ತಪಡಿಸುತ್ತೇನೆ. ಇದೇನೂ ಹೊಸದಾಗಿ ಈ ರೀತಿ ನಮ್ಮ ಸರ್ಕಾರ ಬಂದ ಮೇಲೆ ಆಗಿರುವ ಹತ್ಯೆ ಅಲ್ಲ. ಆದರೆ ಇದನ್ನು ಅತ್ಯಂತ ಶೀಘ್ರವಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬಿಜೆಪಿ ಸಿಬಿಐಗೆ ಕೇಳಿರುವುದನ್ನು ಅಲ್ಲಗಳೆಯುವುದಿಲ್ಲ. ಆದರೆ ನಮ್ಮ ಪೊಲೀಸರು ಸಮರ್ಥವಾಗಿಲ್ಲವೇ? ಕೇವಲ ಒಂದೂವರೆ ತಿಂಗಳ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೊಲೀಸರು ಸಮರ್ಥವಾಗಿರಲಿಲ್ಲವೇ? ನಮ್ಮ ಪೊಲೀಸರು ಅತ್ಯಂತ ಸಮರ್ಥರು ಎಂದು ಬಿಜೆಪಿಯವರೇ ಹೇಳಿದ್ದರು. ಕರ್ನಾಟಕ ಪೊಲೀಸರು ದೇಶದಲ್ಲೇ ಅತ್ಯುತ್ತಮ ಪೊಲೀಸರಲ್ಲಿ ಒಬ್ಬರು. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಕೆಲವೊಂದು ನ್ಯೂನತೆಗಳಿರಬಹುದು, ಆದರೆ ಈಗ ಇಷ್ಟು ಶೀಘ್ರವಾಗಿ ತನಿಖೆ ಮಾಡುತ್ತಿದ್ದಾರೆ. ಸಿಬಿಐಗೆ ಕೊಡಬೇಕು ಎನ್ನುವುದಾದರೆ ಪೊಲೀಸರ ಮೇಲೆ ನಂಬಿಕೆ ಇಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಸಿಬಿಐ ತನಿಖೆ ಅಗತ್ಯ ಇಲ್ಲ, ಹಾಗಾಗಿ ಸಿಬಿಐಗೆ ಕೊಡುವುದಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹಿಂದೆಯೂ ಅನೇಕ ಹತ್ಯೆಗಳು ನಡೆದಿವೆ. ಆದರೆ ಇದೊಂದು, ಈ ಹಿಂದೆಂದೂ ಕೇಳಿಲ್ಲದ ಹೇಯ ಕೃತ್ಯ, ಎಲ್ಲ ಕೊಲೆಗಳನ್ನೂ ಒಂದೇ ರೀತಿ ನೋಡಲು ಆಗುತ್ತದೆ. ಅನೇಕ ರೀತಿಯ ಹತ್ಯೆಗಳಿವೆ. ಹಿಂದಿನ ಕೊಲೆಗಳನ್ನು ಈ ಕೊಲೆಯ ಜತೆಗೆ ಹೋಲಿಸಲು ಆಗುವುದಿಲ್ಲ. ಎಲ್ಲವನ್ನೂ ಪರಿತ್ಯಾಗ ಮಾಡಿರುವವರೊಬ್ಬರನ್ನು ಕೇವಲ ಹಣಕಾಸಿನ ವ್ಯವಹಾರಕ್ಕೆ ಈ ರೀತಿ ಹತ್ಯೆ ಮಾಡುವುದಕ್ಕೆ ಆಗುತ್ತದೆಯೇ?
ಎಲ್ಲ ಕೊಲೆ ರೀತಿಯಲ್ಲಿ ಇದನ್ನು ಪರಿಗಣಿಸಬೇಡಿ. ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿದ್ದಾರೆ ಅಂದರೆ ಪೂರ್ವ ನಿಯೋಜಿತ ಆಗಿರಬೇಕು. ಒಳಗಿನ ವಿಚಾರ ತಿಳಿದಿರಬೇಕು. ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರ ಇದೆ. ಜೈನ ಮುನಿ ಅಲ್ಲಿಗೆ ಬಂದು ನೆಲೆಸಿದ ನಂತರ ಅನೇಕ ಬೆಳವಣಿಗೆಗಳು ನಡೆದಿವೆ. ಇದರ ಪರ ಹಾಗೂ ವಿರೋಧವಾಗಿಯೂ ಅನೇಕರಿದ್ದಾರೆ. ಅದಕ್ಕಾಗಿ ಈ ಘಟನೆ ನಡೆದಿರಬಹುದು. ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನುವುದು ಒಳ್ಳೆಯದಾದರೂ, ಪ್ರಕರಣವನ್ನು ಅಲ್ಲಿಗೇ ಮುಕ್ತಾಯಗೊಳಿಸಲು ಮುಂದಾಗಿದ್ದಾರೆ. ಹಾಗಾಗಿ ಇದಕ್ಕೆ ಸಂಶಯ ಬರುತ್ತದೆ. ಇದರ ಹಿಂದಿರುವ ಕೆಲವರನ್ನು ರಕ್ಷಣೆ ಮಾಡಲಾಗುತ್ತಿದೆ, ಮುಚ್ಚಿ ಹಾಕಲಾಗುತ್ತಿದೆ ಎಂಬ ಅನುಮಾನ ಬರುತ್ತಿದೆ. ಸ್ಥಳೀಯ ಪೊಲೀಸರಿಗೆ ಅಲ್ಲಿನವರ ಸಂಪರ್ಕವೂ ಇರುವುದರಿಂದ ಇದನ್ನು ವಿಶೇಷವಾಗಿ ಪರಿಗಣಿಸಬೇಕು. ಜೈನ ಮುನಿಗಳ ಹತ್ಯೆ ಆಗಿರುವುದರಿಂದ ಇಡೀ ದೇಶದಲ್ಲಿ ಆಘಾತ ಮೂಡಿಸಿದೆ. ಅದರಿಂದಾಗಿ ಸಿಬಿಐಗೆ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು.
ಇದನ್ನೂ ಓದಿ: Murder Case: ಹಿಂದು ಕಾರ್ಯಕರ್ತ ವೇಣುಗೋಪಾಲ್ ಕುಟುಂಬಕ್ಕೆ ₹25 ಲಕ್ಷ ಕೊಡಿ: ಸರ್ಕಾರಕ್ಕೆ ಬಿಜೆಪಿ ಒತ್ತಾಯ
ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. ಆದರೆ ಸಾಕಷ್ಟು ದಿನಗಳು ಕೇವಲ ಒಬ್ಬನೇ ಆರೋಪಿಯ ಹೆಸರನ್ನು ಮಾತ್ರ ಹೇಳುತ್ತಿದ್ದರಿಂದ ಅನುಮಾನ ಮೂಡಿದೆ. ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ವಿಚಾರವನ್ನೂ ಸುಮ್ಮನೆ ಎಫ್‌ಐಆರ್ ಹಾಕಿ ಬಿಡಬಹುದಿತ್ತು. ಆದರೆ ಎನ್‌ಐಎಗೆ ಕೊಟ್ಟಿದ್ದರಿಂದ ಅದರಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ ಎಂದರು. ಅಭಯತ್ ಪಾಟೀಲ್ ಸಹ ಮಾತನಾಡಿ, ಸಿಬಿಐ ತನಿಖೆಗೆ ಒತ್ತಾಯಿಸಿದರು.
ಮತ್ತೆ ಉತ್ತರಿಸಿದ ಡಾ. ಜಿ. ಪರಮೇಶ್ವರ್, ನಮ್ಮ ಪೊಲೀಸರಿಗೆ ಯಾವುದೇ ಒತ್ತಡ ಹೇರಿಲ್ಲ. ಯಾವ ಹೆಸರನ್ನೂ ಮುಚ್ಚಿಡಲಿಲ್ಲ. ನಿಮಗೆ ವಿಶ್ವಾಸ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ನನಗೆ ಪೊಲೀಸರ ಮೇಲೆ ವಿಶ್ವಾಸ ಇದೆ. ಇದರ ಹಿಂದೆ ಷಡ್ಯಂತ್ರ ಇದೆ ಎನ್ನುವುದು ತನಿಖೆ ಆದ ಮೇಲೆಯೇ ಗೊತ್ತಾಗುತ್ತದೆ ಎಂದರು. ಮಧ್ಯಪ್ರವೇಶಿಸಿದ ಬಸವರಾಜ ಬೊಮ್ಮಾಯಿ, ಕೊಲೆ ನಡೆದಿರುವುದನ್ನು ಗಮನಿಸಿದರೇ ತೀವ್ರತೆ ಗೊತ್ತಾಗುತ್ತದೆ. ಪ್ರತಿಷ್ಠೆ ಮಾಡಿಕೊಳ್ಳಲು ಹೋಗಬೇಡಿ ಎಂದರು.
ಆದರೂ ಒತ್ತಡಕ್ಕೆ ಬಗ್ಗದ ಡಾ. ಜಿ. ಪರಮೇಶ್ವರ್, ಇಂತಹ ಘಟನೆಗಳು ಉತ್ತರ ಭಾರತದಲ್ಲಿ ಅನೇಕ ನಡೆದಿವೆ. ಕೊಲೆ ಎನ್ನುವುದು ಕೊಲೆ. ಸ್ವಾಮೀಜಿ ಆದಾಕ್ಷಣ ಬೇರೆ ಆಗುವುದಿಲ್ಲ. ಹಾಗಾಗಿ ಸಿಬಿಐಗೆ ನೀಡಲು ಸಾಧ್ಯವಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಸಹ ಮಾತನಾಡಿ, ನಮ್ಮ ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸರೇ ಗಂಭೀರವಾಗಿ ತನಿಖೆ ಮಾಡುತ್ತಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು. ಈ ಸಮಯದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಎದುರು ಪ್ರತಿಭಟನೆ ನಡೆಸಿದರು. ಗಲಾಟೆ ಹೆಚ್ಚಾದಾಗ ಸದನವನ್ನು 10 ನಿಮಿಷ ಮುಂದೂಡಲಾಯಿತು.