Site icon Vistara News

86,500 ಸರ್ಕಾರಿ ನೌಕರರು ಕಂಪ್ಯೂಟರ್‌ ಪರೀಕ್ಷೆಯಲ್ಲಿ ಫೇಲ್‌ !

Govt employees failed in computer literacy test

ಬೆಂಗಳೂರು: ಕಂಪ್ಯೂಟರ್‌ ಎನ್ನುವುದು ಆಡುವ ಮಕ್ಕಳ ಕೈಯಲ್ಲೂ ಇರುವ ಸಮಯದಲ್ಲಿಯೂ ಅತ್ಯಂತ ಪ್ರಾಥಮಿಕ ಕಂಪ್ಯೂಟರ್‌ ಸಾಕ್ಷರತೆ ಪಡೆಯುವಲ್ಲಿ ರಾಜ್ಯ ಸರ್ಕಾರದ ಅನೇಕ ನೌಕರರು ವಿಫಲರಾಗಿದ್ದಾರೆ. ಕಂಪ್ಯೂಟರ್‌ ಆನ್‌ ಮಾಡುವುದು, ಮೈಕ್ರೋಸಾಫ್ಟ್‌ ವರ್ಡ್‌ ಬಳಸುವಂತೆಹ ಪ್ರಾಥಮಿಕ ಸಂಗತಿಗಳ ಕುರಿತು ರಾಜ್ಯ ರ್ಕಾರದ ಈ ಆಡಳಿತ ಕೇಂದ್ರ ನಡೆಸಿದ ಪರೀಕ್ಷೆಯಲ್ಲಿ 87,000 ಸರ್ಕಾರಿ ನೌಕರರು ಫೇಲ್‌ ಆಗಿದ್ದಾರೆ.

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಈಗ ಕಂಪ್ಯೂಟರ್‌ ಬಳಕೆ ಮಾಡಲಾಗುತ್ತಿದೆ. ಕಂಪ್ಯೂಟರ್‌ ಬಳಸಿ ಪತ್ರ ವ್ಯವಹಾರ ಮಾಡುವುದಷ್ಟೆ ಅಲ್ಲದೆ ನ್ಯಾಷನಲ್‌ ಇನ್ಫಾರ್ಮೆಟಿಕ್ಸ್‌ ಸೆಂಟರ್‌ (ಎನ್‌ಐಸಿ) ಮೂಲಕ ಇ ಆಫೀಸ್‌ ಅನುಷ್ಠಾನ ಮಾಡಲಾಗುತ್ತಿದೆ. ಸಂಪೂರ್ಣ ಕಡತ ವಿಲೇವಾರಿಯನ್ನೂ ಕಂಪ್ಯೂಟರ್‌ ಮೂಲಕವೇ ಅನೇಕ ಇಲಾಖೆಗಳಲ್ಲಿ ನಡೆಸಲಾಗುತ್ತಿದೆ.

ಹೊಸದಾಗಿ ಸರ್ಕಾರಿ ನೌಕರಿಗೆ ಸೇರಬಯಸುವವರಿಗೆ ಕಂಪ್ಯೂಟರ್‌ ಸಾಕ್ಷರತೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಈಗಾಗಲೆ ಸರ್ಕಾರಿ ನೌಕರರಾಗಿರುವವರಿಗೆ ಕಂಪ್ಯೂಟರ್‌ ಸಾಕ್ಷರತೆ ತರಬೇತಿಯನ್ನು ಸರ್ಕಾರದಿಂದ ನೀಡಲಾಗುತ್ತದೆ. ಈ ಕಲಿಕೆ ಕುರಿತು ಇ ಆಡಳಿತ ಕೇಂದ್ರದಿಂದ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದದೇ ಇದ್ದರೆ ಕೆಲಸದಿಂದ ತೆಗೆಯುವುದಿಲ್ಲ. ಆದರೆ ಮುಂಬಡ್ತಿ, ವಾರ್ಷಿಕ ವೇತನ ನೀಡುವಾಗ ಸಮಸ್ಯೆ ಆಗುತ್ತದೆ.

ರಾಜ್ಯ ಸರ್ಕಾರದ 5,40,000 ಅಧಿಕಾರಿಗಳು ಹಾಗೂ ನೌಕರರು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿತ್ತು. ಈ ಕಡ್ಡಾಯ ಪರೀಕ್ಷೆಯನ್ನು 2,60,000 ಅಧಿಕಾರಿಗಳು ಹಾಗೂ ನೌಕರರು ತೆಗೆದುಕೊಂಡಿದ್ದರು. ಈ ಪೈಕಿ 1,73,500 ಅಧಿಕಾರಿಗಳು ಹಾಗೂ ನೌಕರರು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ಎಲ್ಲರಿಗೂ ಡಿಜಿಟಲ್‌ ಪ್ರಮಾಣಪತ್ರ ನೀಡಲಾಗಿದೆ.

83,500 ನೌಕರರು ಹಾಗೂ ಸಿಬ್ಬಂದಿ ಅನುತ್ತೀರ್ಣರಾಗಿದ್ದು, ಅವರಿಗೆಲ್ಲ ಇ ಆಡಳಿತ ಕೇಂದ್ರ ಎಚ್ಚರಿಕೆ ನೀಡಿದೆ. ಇವರುಗಳ ಜತೆಗೆ, ಪರೀಕ್ಷೆಯನ್ನೇ ತೆಗೆದುಕೊಳ್ಳದ ಅಧಿಕಾರಿ, ನೌಕರರೂ ಸೇರಿ 3,50,000 ಜನರಿದ್ದಾರೆ. ಇವರೆಲ್ಲರೂ 2022ರ ಡಿಸೆಂಬರ್‌ 31ರವರೆಗೆ ಪರೀಕ್ಷೆಯನ್ನು ತೆಗೆದುಕೊಳ್ಳಲೇಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಎಲ್ಲ ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಈ ಅವಧಿಯೊಳಗೆ ಪರೀಕ್ಷೆಯನ್ನು ತೆಗೆದುಕೊಳ್ಳದೆ ಇದ್ದಲ್ಲಿ ಅಥವಾ ಉತ್ತೀರ್ಣರಾಗದೇ ಇದ್ದಲ್ಲಿ ಅಂತಹವರು ಮುಂಬಡ್ತಿ ಅಥವಾ ವಾರ್ಷಿಕ ವೇತನ ಬಡ್ತಿ ಹೊಂದಲು ಅವಕಾಶ ಇರುವುದಿಲ್ಲ. ಪರೀಕ್ಷೆ ಕುರಿತು ಎಲ್ಲ ನೌಕರರಿಗೆ ಮಾಹಿತಿಯನ್ನು ಇಲಾಖಾ ಮೇಲಧಿಕಾರಿಗಳು ನೀಡಬೇಕು ಎಂದು ಇ ಆಡಳಿತ ಕೇಂದ್ರ ಸೂಚನೆ ನೀಡಿದೆ.

ಕೆಲ ನೌಕರರು ಪರೀಕ್ಷೆ ತೆಗೆದುಕೊಂಡಿಲ್ಲ. ಬಹುತೇಕ ನೌಕರರಿಗೆ ಕಂಪ್ಯೂಟರ್‌ ಜ್ಞಾನ ಇದೆ. ಆದರೆ ಕಂಪ್ಯೂಟರ್‌ ಬಳಕೆಯೇ ಬೇರೆ, ಪರೀಕ್ಷೆಯಲ್ಲಿ ಥಿಯರಿಯೇ ಬೇರೆ ಎನ್ನುವುದೂ ಅನೇಕರು ಪರೀಕ್ಷೆ ಬರೆಯದಿರಲು ಅಥವಾ ಉತ್ತೀರ್ಣ ಆಗದಿರಲು ಕಾರಣ. ಎಲ್ಲರೂ ತರಬೇತಿ ಪಡೆದು ಡಿಸೆಂಬರ್‌ 31ರೊಳಗೆ ಉತ್ತೀರ್ಣ ಆಗುವುದು ಕಡ್ಡಾಯ.

| ಸಿ.ಎಸ್‌. ಷಡಕ್ಷರಿ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

Exit mobile version