ಬೆಂಗಳೂರು: ಸರ್ಕಾರದ ಜತೆ ಬಗೆಹರಿಯದ ಮಾತುಕತೆಯ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಸರ್ಕಾರಿ ನೌಕರರು ಮುಂದಾಗಿದ್ದು, ರಾಜಧಾನಿಯ ವಿಕ್ಟೋರಿಯ ಆಸ್ಪತ್ರೆಯ ಸಿಬ್ಬಂದಿ ಮುಷ್ಕರ ಹೂಡುವ ಸೂಚನೆ ತೋರಿದ್ದಾರೆ. ಇದರಿಂದ ರೋಗಿಗಳು ಆತಂಕಗೊಂಡಿದ್ದಾರೆ.
ವಿಕ್ಟೋರಿಯ ಆಸ್ಪತ್ರೆಯ ಓಪಿಡಿ ಮುಂಭಾಗ ಪ್ರತಿಭಟನೆಯ ಪೋಸ್ಟರ್ ಅಂಟಿಸಲಾಗಿದ್ದು, ಆಸ್ಪತ್ರೆಯಲ್ಲಿ ಜನರ ಸಂಚಾರ ಎಂದಿಗಿಂತ ಕಡಿಮೆ ಇದೆ. ಆಸ್ಪತ್ರೆಯ ಬಾಗಿಲು ತೆಗೆಯಲಿದೆ ಎಂದು ರೋಗಿಗಳು ಕಾದು ಕುಳಿತಿದ್ದಾರೆ. ʼಪ್ರತಿಭಟನೆ ಎಂದು ನಮಗೆ ಗೊತ್ತಿರಲಿಲ್ಲ, ದೂರದ ಊರುಗಳಿಂದ ವಾಹನ ಮಾಡಿಕೊಂಡು ಬಂದಿದ್ದೇವೆ. ಮುಷ್ಕರ ಮಾಡಿದರೆ ನಮಗೆ ತೊಂದರೆಯಾಗುತ್ತದೆʼ ಎಂದು ರೋಗಿಗಳು ಆತಂಕ ತೋಡಿಕೊಂಡಿದ್ದಾರೆ.
ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮುಷ್ಕರಕ್ಕೆ ಸರ್ಕಾರಿ ವೈದ್ಯರು ಬೆಂಬಲ ಘೋಷಿಸಿದ್ದು, ಓಪಿಡಿ ಬಂದ್ ಮಾಡಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಓಪಿಡಿ ಹೊರಭಾಗ ಪ್ರತಿಭಟನೆ ಪೋಸ್ಟರ್ ಅಂಟಿಸಲಾಗಿದೆ. ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಆಗುವ ಸಾಧ್ಯತೆ ಇದೆ.
ಮೈಸೂರಿನ ದೊಡ್ಡಾಸ್ಪತ್ರೆಯಾದ ಕೆ.ಆರ್.ಆಸ್ಪತ್ರೆಯಲ್ಲೂ ಸಿಬ್ಬಂದಿ ಒಪಿಡಿ ಬಂದ್ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೇವಲ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಆತಂಕ ಹೆಚ್ಚಿದೆ.
ಸರ್ಕಾರಿ ನೌಕರರು ಮುಷ್ಕರ ಆರಂಭಿಸಿದರೂ ಆರೋಗ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ನೌಕರರ ಸಂಘದ ಪದಾಧಿಕಾರಿಗಳು ನಿನ್ನೆ ಹೇಳಿದ್ದರು.
ಇದನ್ನೂ ಓದಿ: Govt Employees Strike: ಸರ್ಕಾರಿ ನೌಕರರ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸ: ಸಿಎಂ ಬೊಮ್ಮಾಯಿ