ಬೆಂಗಳೂರು: ಶಾಲೆಗಳಲ್ಲಿ ಮದ್ಯಾಹ್ನ ಬಿಸಿಯೂಟದ ಜತೆಗೆ ಮಕ್ಕಳಿಗೆ ಮೊಟ್ಟೆ ನೀಡುವುದು ಬೇಡ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಕುರಿತು ಸಮಿತಿ ವರದಿಗೆ ವ್ಯತಿರಿಕ್ತವಾದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದ್ದು, ರಾಜ್ಯಾದ್ಯಂತ ಶಾಲೆಗಳಲ್ಲಿ ಮೊಟ್ಟೆ ನೀಡಲು ಮುಂದಾಗಿದೆ.
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ ಹಾಗೂ ಬಾಳೆಹಣ್ಣು ನೀಡಬೇಕು ಹಾಗೂ ನೀಡಬಾರದು ಎಂಬ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಿತ್ತು. ಈ ಕಾರ್ಯಪಡೆಯು 26 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಿತಿ ರಚಿಸಿ, ಆ ಸಮಿತಿಗಳಿಂದ ವರದಿ ಪಡೆದಿತ್ತು.
ಅದನ್ನು ಆಧರಿಸಿ ತಾನು ಸಿದ್ಧಪಡಿಸಿದ ವರದಿಯನ್ನು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಈ ವರದಿಯನ್ನು ರವಾನಿಸಿದೆ. ಕನ್ನಡವನ್ನು ಕಡ್ಡಾಯ ಮಾಡಬೇಕು, ಶಾಲಾ ಮಕ್ಕಳಿಗೆ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಬೇಕು ಎನ್ನುವುದರ ಜತೆಗೆ ಮೊಟ್ಟೆ ವಿಚಾರವನ್ನೂ ಸಮಿತಿ ಶಿಫಾರಸು ಮಾಡಿತ್ತು.
ಇದನ್ನೂ ಓದಿ | 10 ದಿನ ಬ್ಯಾಗ್ ಬೇಡ, ವರ್ಷ ಪೂರ್ತಿ ಮೊಟ್ಟೆ ಬೇಡ: ಎನ್‌ಇಪಿ ಪಠ್ಯಕ್ರಮ ಕರಡು ಪ್ರಸ್ತಾವನೆ
ಈ ವಿಚಾರದಿಂದ ಸರ್ಕಾರ ಸಂದಿಗ್ಧಕ್ಕೆ ಸಿಲುಕಿತ್ತು. ಇದೀಗ ಅಂತಿಮ ನಿರ್ಧಾರ ಮಾಡಲಾಗಿದ್ದು, ಮೊಟ್ಟೆ ನೀಡುವುದನ್ನು ಮುಂದುವರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಶಾಲಾ ಮಕ್ಕಳಿಗೆ ಮಾತ್ರವೇ ಮೊಟ್ಟೆ ನೀಡಲಾಗುತ್ತಿದೆ. ಈ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆ ಮಾಡುವ ನಿರ್ಧಾರವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ 1-8ನೇ ತರಗತಿಯ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ.
ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ನೀಡಲಾಗುತ್ತದೆ. ಈ ಯೋಜನೆಗೆ ಸುಮಾರು 350 ಕೋಟಿ ರೂ. ವೆಚ್ಚವಾಗಲಿದೆ. ಆದರೆ ಸದ್ಯ 100 ದಿನ ನೀಡಲಾಗುತ್ತಿರುವ ಮೊಟ್ಟೆಯನ್ನು, ರಾಜ್ಯಾದ್ಯಂತ ವಿಸ್ತರಣೆ ಮಾಡುವಾಗ 46 ದಿನ ಮಾತ್ರ ವಿತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಎನ್‌ಇಪಿ ಅಡಿ ಕನ್ನಡ ಕಲಿಕೆ ಕಡ್ಡಾಯ: ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ