Site icon Vistara News

Coronavirus News: ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್‌ ವಾರ್ಡ್‌ ಮೀಸಲಿಡಲು ಸರ್ಕಾರ ಸೂಚನೆ

Covid Ward

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳ (Coronavirus News) ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. ಹೀಗಾಗಿ ಸೋಂಕು ಹರಡುವಿಕೆ ನಿಯಂತ್ರಿಸಲು ಚಿಕಿತ್ಸೆಗೆ ಆಗಮಿಸುವ ಸೋಂಕಿತರನ್ನು ದಾಖಲಿಸಕೊಳ್ಳಲು ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್‌ ವಾರ್ಡ್‌ (Isolated Covid Wards) ಮೀಸಲಿಡಲು ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.

ಸಚಿವ ಸಂಪುಟ ಉಪಸಮಿತಿ (ರಾಜ್ಯ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ) ಸಭೆಯ ನಿರ್ದೇಶನದಂತೆ, ಕೋವಿಡ್-19 ಸೋಂಕು ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಬೆಂಗಳೂರಿನ ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳು ಸೇರಿದಂತೆ ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್‌ ವಾರ್ಡ್‌ (Isolated Covid Wards) ಅನ್ನು ಮೀಸಲಿಡಲು ತಿಳಿಸಲಾಗಿದೆ.

ಇದನ್ನೂ ಓದಿ | New Year 2024: ಎಲ್ಲೆಂದರಲ್ಲಿ ವೆಹಿಕಲ್‌ ಪಾರ್ಕಿಂಗ್‌ ಮಾಡಿದ್ರೆ ಹುಷಾರ್‌; ನ್ಯೂ ಇಯರ್‌ ಸೆಲೆಬ್ರೆಷನ್‌ಗೆ ಟೋಯಿಂಗ್‌ ಶಾಕ್‌!

ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ H-Block, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ (RGICD) ಗಳಲ್ಲಿ ಪ್ರತ್ಯೇಕ ಕೋವಿಡ್‌ ವಾರ್ಡ್‌ (Isolated Covid Wards) ಅನ್ನು ಕಾಯ್ದಿರಿಸಲು ಮತ್ತು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾ ಆಸ್ಪತ್ರೆ (ವೈದ್ಯಕೀಯ ಕಾಲೇಜುಗಳು ಸೇರಿದಂತೆ) ಕನಿಷ್ಠ 10 ಸಾಮಾನ್ಯ ಹಾಸಿಗೆಗಳು ಮತ್ತು 5 ಐ.ಸಿ.ಯು ಹಾಸಿಗೆಗಳನ್ನು ಪ್ರತ್ಯೇಕವಾಗಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಕಾಯ್ದಿರಿಸಬೇಕು ಎಂದು ಆರೋಗ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಶನಿವಾರ 201 ಕೋವಿಡ್‌ ಕೇಸ್‌ ಪತ್ತೆ, ಒಬ್ಬರ ಸಾವು

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 201 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದುಮ ಒಬ್ಬರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 833ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಗುಣಮುಖರಾಗಿ 60 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 495 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಒಟ್ಟು 833 ಸಕ್ರಿಯ ಪ್ರಕರಣಗಳ ಪೈಕಿ 783 ಮಂದಿ ಹೋಮ್‌ ಐಸೋಲೇಷನ್‌ನಲ್ಲಿದ್ದು, 50 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು 7060 ಮಂದಿಗೆ ಕೋವಿಡ್‌ ಟೆಸ್ಟ್‌ ಮಾಡಲಾಗಿದ್ದು, ಅವರಲ್ಲಿ 201 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ. 2.84 ಇದ್ದು, ಮರಣ ಪ್ರಮಾಣ ದರ ಶೇ. 0.49 ವರದಿಯಾಗಿದೆ.

ಇನ್ನು ರಾಜ್ಯದಲ್ಲಿ ಶುಕ್ರವಾರ 173 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿ, ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿದ್ದರು. 37 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version