ಬೆಂಗಳೂರು/ಮೈಸೂರು: ಮೈಸೂರು ದಸರಾ (Mysore Dasara) ವೇಳೆ ಕಾರ್ಯಕ್ರಮ ನೀಡಲು ಆಯ್ಕೆಯಾದ ಕಲಾವಿದರಿಂದಲೇ ಕಮಿಷನ್ (Dasara Commission) ಪಡೆಯಲಾಗುತ್ತಿದೆ ಎಂಬ ಆರೋಪ ಭಾರಿ ಚರ್ಚೆಗೆ ಕಾರಣವಾಗಿದ್ದು, ಇದೀಗ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶ (Government order for Enquiry) ನೀಡಿದೆ. ಅದರ ನಡುವೆಯೇ ಕಾಂಗ್ರೆಸ್ ಇದೊಂದು ಸುಳ್ಳು ಸುದ್ದಿ (Fake News) ಎಂದಿದೆ.
ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ (Pandit Rajeev Tharanat) ಅವರ ಬಳಿಯಲ್ಲಿ ದಸರಾ ಕಾರ್ಯಕ್ರಮ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವ ಯಾರೇ ಆಗಿದ್ದರೂ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಹಾಗೂ ನಾಡಹಬ್ಬ ದಸರಾದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಸಚಿವರು ತಿಳಿಸಿದ್ದಾರೆ.
ಅಧಿಕಾರಿಗಳು ಸಂಪರ್ಕಿಸಿಲ್ಲ ಎಂದ ರಾಜೀವ್ ತಾರಾನಾಥ್
ಈ ನಡುವೆ, ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಾಯತ್ರಿ ಅವರು ರಾಜೀವ್ ತಾರಾನಾಥ್ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಮಾತುಕತೆಯ ವೇಳೆ, ಯಾವುದೇ ಅಧಿಕಾರಿಗಳಾಗಲೀ, ಸಾಂಸ್ಕೃತಿಕ ಉಪ ಸಮಿತಿಯ ಸದಸ್ಯರಾಗಲಿ ನನ್ನನ್ನು ಸಂಪರ್ಕ ಮಾಡಿಲ್ಲ. ಯಾವುದೋ ಅನಾಮಧೇಯ ವ್ಯಕ್ತಿಯಿಂದ ಇನ್ನೊಬ್ಬರ ಮೊಬೈಲ್ ಗೆ ಈ ರೀತಿಯ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ. ಅನಾಮಧೇಯ ವ್ಯಕ್ತಿಯ ನಂಬರ್ ಸಿಕ್ಕಿಲ್ಲ ಎಂದಿದ್ದಾರೆ. ತಾರಾನಾಥ್ ಅವರಿಗೆ ಯಾರು ಕರೆ ಮಾಡಿದ್ದರೋ ಆ ಅನಾಮಧೇಯ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಜಿಪಂ ಸಿಇಒ ಗಾಯತ್ರಿ ಹೇಳಿಕೆ ನೀಡಿದ್ದಾರೆ.
ನನಗೆ ನಿರಾಶೆಯಾಗಿದೆ ಎಂದ ರಾಜೀವ್ ತಾರಾನಾಥ್
ʻʻನಾನು ಸಂಗೀತ ಕ್ಷೇತ್ರದವನು. ಈ ಘಟನೆಗಳಿಂದ ನನಗೆ ನಿರಾಶೆಯಾಗಿದೆʼʼ ಎಂದು ಲಂಚ ಬೇಡಿಕೆ ಪ್ರಕರಣದ ಬಗ್ಗೆ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಅವರು, ʻʻನಾನು ಮತ್ತು ನನ್ನ ಯೋಚನೆಯೇ ಬೇರೆ. ಇದೆಲ್ಲ ನಮಗೆ ಬೇಕಾಗಿರಲಿಲ್ಲʼʼ ಎಂದರು.
ʻʻನಾನು ಅಮೆರಿಕದ ಪೌರತ್ವ ಹೊಂದಿದ್ದೇನೆ. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಪ್ರೊಫೆಸರ್ ಆಗಿದ್ದೋನು ನಾನು. ಅಲ್ಲಿ ಬಹಳ ದೊಡ್ಡ ದೊಡ್ಡ ವಿದ್ವಾಂಸರು ಪ್ರಾಧ್ಯಾಪಕರಾಗಿದ್ದರು. ಭಾರತದಿಂದ ನಾನು ಮೂರನೇ ಪ್ರಾಧ್ಯಾಪಕ. ಅಲ್ಲಿಂದ ನಾನು ಕರ್ನಾಟಕಕ್ಕೆ ಬಂದದ್ದು ಏಕೆ? ಇದು ನಿಮ್ಮಗೆಲ್ಲರಿಗೂ ಅರ್ಥವಾಗಬೇಕು. ನಾನು ಅಲ್ಲಿಂದ ಇಲ್ಲಿಂದ ಬಂದಿದ್ದಕ್ಕೆ ನಿರಾಶೆಯಾಗಿದೆʼʼ ಎಂದು ಹೇಳಿದರು.
ʻʻದಸರಾ ಕಾರ್ಯಕ್ರಮದ ವಿಚಾರದಲ್ಲಿ ಯಾವ ಅಧಿಕಾರಿಗಳೂ ನನ್ನನ್ನು ಸಂಪರ್ಕಿಸಿಲ್ಲ. ಈ ಬಗ್ಗೆ ನಮಗೆ ಸಂದೇಶ ತಿಳಿಯಿತು. ಅದನ್ನು ಅಧಿಕಾರಿಗಳಿಗೂ ತಿಳಿಸಿದ್ದೇನೆʼʼ ಎಂದು ಲಂಚ ಕೇಳಿದ ಪ್ರಕರಣ ಸಂಬಂಧ ಪಂಡಿತ್ ರಾಜೀವ್ ತಾರಾನಾಥ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Commission politics : ಪಂ. ರಾಜೀವ್ ತಾರಾನಾಥ್‌ಗೂ ಕಮಿಷನ್ ಕಾಟ; ಲಜ್ಜೆಗೆಟ್ಟ ಸರ್ಕಾರ ಎಂದ ವಿಜಯೇಂದ್ರ
ಫೇಕ್ ನ್ಯೂಸ್ ಎಂದ ಕಾಂಗ್ರೆಸ್
ಈ ನಡುವೆ, ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಲಂಚ ಬೇಡಿಕೆ ಪ್ರಕರಣ ಫೇಕ್ ನ್ಯೂಸ್ ಎಂದು ಕಾಂಗ್ರೆಸ್ ಪೋಸ್ಟರ್ ಮೂಲಕ ತಿಳಿಸಿದೆ.
ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಂಡಿತ್ ರಾಜೀವ್ ತಾರಾನಾಥ್ ಅವರ ಬಳಿ ಅಧಿಕಾರಿಗಳು ಕಮಿಷನ್ ಕೇಳಿದ್ದು ನಿಜವೇ ಎಂದು ಪ್ರಶ್ನೆ ಕೇಳಿಕೊಂಡಿರುವ ಪೋಸ್ಟರ್‌ನಲ್ಲಿ ಇದು ಫೇಕ್ ನ್ಯೂಸ್ ಎಂದು ಹೇಳಲಾಗಿದೆ.
ಇದು ಸುಳ್ಳು ಸುದ್ದಿ. ಸ್ವತಃ ತಾರಾನಾಥರು ಅಧಿಕಾರಿಗಳ ಜತೆ ಮಾತನಾಡಿದ್ದಾರೆ. ಪತ್ರಿಕೆಯ ವರದಿಯನ್ನು ತಳ್ಳಿ ಹಾಕಿದ್ದಾರೆ. ʻನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ. ಯಾರು ಕೂಡಾ ಪರ್ಸಂಟೇಜ್ ಕೇಳಿಲ್ಲʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆʼʼ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ. ಜತೆಗೆ ಎಚ್ಚರ: ಸುಳ್ಳು ಸುದ್ದಿಯ ಉದ್ದೇಶ ತಪ್ಪು ಮಾಹಿತಿ ನೀಡುವುದು ಎಂದು ಹೇಳಲಾಗಿದೆ.