Site icon Vistara News

Super Speciality Hospital: ಉ.ಕ.ದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಬಗೆಹರಿದ ಜಾಗದ ಗೊಂದಲ

super specialty hospital kumta

#image_title

ಎಸ್.ಎಸ್.ಸಂದೀಪ ಸಾಗರ, ಕಾರವಾರ
ಉತ್ತರ ಕನ್ನಡಿಗರ ಬಹು ದಿನಗಳ ಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ನಿರ್ಮಾಣಕ್ಕೆ ಎದುರಾಗಿದ್ದ ಜಾಗದ ಗೊಂದಲವನ್ನು ಸರ್ಕಾರ ಕೊನೆಗೂ ಪರಿಹರಿಸಿದೆ. ಕುಮಟಾ ತಾಲೂಕಿನ ಹೃದಯ ಭಾಗದಲ್ಲೇ ಜಾಗವನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸುವ ಮೂಲಕ ಆಸ್ಪತ್ರೆ ನಿರ್ಮಾಣದ ಕನಸು ನನಸಾಗುವ ಭರವಸೆ ಮೂಡಿಸಿದೆ.

ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ವೆ ನಂಬರ್ 440ರಲ್ಲಿ 15.35 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಹಿಂದೆ ಈ ಜಾಗವನ್ನು ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗವಾಗಿರುವ ಹಿನ್ನೆಲೆಯಲ್ಲಿ ಸದ್ಯ ಈ ಜಾಗವನ್ನು ಆಸ್ಪತ್ರೆಗಾಗಿ ನೀಡುವಂತೆ ಸೂಚನೆ ನೀಡಲಾಗಿದ್ದು, ವಸತಿ ಶಾಲೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಪರ್ಯಾಯ ಜಾಗವನ್ನು ಒದಗಿಸುವ ಭರವಸೆಯನ್ನು ನೀಡಲಾಗಿದೆ.

ವಸತಿ ಶಾಲೆಯ ಜಾಗ ಆಸ್ಪತ್ರೆಗೆ

ಉತ್ತರ ಕನ್ನಡ ಜಿಲ್ಲಾಡಳಿತವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಏಕಲವ್ಯ ವಸತಿ ಶಾಲೆಗೆ ಮೀಸಲಿರಿಸಲಾಗಿದ್ದ ಜಾಗವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ನೀಡುವಂತೆ ಇಲಾಖೆಗೆ ಪತ್ರ ಬರೆದಿತ್ತು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಹಿನ್ನೆಲೆಯಲ್ಲಿ ಜಾಗವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಅನುಮತಿ ನೀಡಿದ್ದರು. ಅದರಂತೆ ಏಕಲವ್ಯ ವಸತಿ ಶಾಲೆಗಾಗಿ ನಿಗದಿಪಡಿಸಿ ಇರಿಸಲಾಗಿದ್ದ 17 ಎಕರೆ 14 ಗುಂಟೆ ಜಮೀನಿನಲ್ಲಿ, 15 ಎಕರೆ 35 ಗುಂಟೆಯಷ್ಟು ಪ್ರದೇಶವನ್ನು ಸರ್ಕಾರಕ್ಕೆ ಹಿಂದಿರುಗಿಸಿದೆ. ಜತೆಗೆ ಏಕಲವ್ಯ ವಸತಿ ಶಾಲೆಗೆ ಪರ್ಯಾಯ ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಷರತ್ತು ವಿಧಿಸಿ, ಇದೀಗ ಇದೇ ಪ್ರದೇಶವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕಾಯ್ದಿರಿಸಲು ಸರ್ಕಾರದ ಆಪ್ತ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Satish Kaushik: 800 ರೂ. ಜೇಬಿನಲ್ಲಿಟ್ಟುಕೊಂಡು ಮುಂಬೈಗೆ ಬಂದು ಗೆದ್ದ ಸತೀಶ್‌ ಕೌಶಿಕ್‌

ತಾಂತ್ರಿಕ ತೊಂದರೆಯಿಂದ ಎದುರಾಗಿದ್ದ ಜಾಗದ ಸಮಸ್ಯೆ

ಈ ಮೊದಲು ಕುಮಟಾ ತಾಲೂಕಿನ ಮಿರ್ಜಾನ್ ರೈಲ್ವೆ ನಿಲ್ದಾಣದ ಎದುರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜಾಗವನ್ನು ಗುರುತಿಸಲಾಗಿತ್ತು. ಇದೇ ಸ್ಥಳಕ್ಕೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶೀಘ್ರದಲ್ಲೇ ಆಸ್ಪತ್ರೆಗೆ ಅಡಿಗಲ್ಲು ಹಾಕುವ ಭರವಸೆ ನೀಡಿದ್ದರು. ಆದರೆ, ಈ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಜಾಗವನ್ನು ಪಡೆದುಕೊಳ್ಳಲು ಸರ್ಕಾರಕ್ಕೆ ತಾಂತ್ರಿಕ ತೊಡಕುಗಳು ಎದುರಾಗಿತ್ತು. ಹೀಗಾಗಿ ಪರ್ಯಾಯ ಜಾಗಕ್ಕಾಗಿ ಹುಡುಕಾಟ ಆರಂಭಿಸಲಾಗಿತ್ತು. ಕುಮಟಾ ತಾಲೂಕಿನ ವ್ಯಾಪ್ತಿಯ ಹೆಗಡೆ ಗ್ರಾಮ, ಕುಮಟಾ ರೈಲ್ವೆ ನಿಲ್ದಾಣ ಹಾಗೂ ಮೂರೂರು ಗುಡ್ಡ ಸೇರಿದಂತೆ ಮೂರ್ನಾಲ್ಕು ಸ್ಥಳಗಳಲ್ಲಿ ಆಸ್ಪತ್ರೆ ನಿರ್ಮಾಣದ ಸಾಧ್ಯತೆಗಳ ಕುರಿತು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ವರದಿ ನೀಡಿತ್ತು.

ಜಿಲ್ಲೆಯ ಕೇಂದ್ರ ಸ್ಥಳ

ಅದರನ್ವಯ ಕೊನೆಗೆ ಹೆಗಡೆ ಗ್ರಾಮಕ್ಕೆ ತೆರಳುವ ರಸ್ತೆ ಮಾರ್ಗದ ಸಮೀಪದಲ್ಲಿ, ಕೃಷಿ ಇಲಾಖೆಗೆ ಹೊಂದಿಕೊಂಡಿರುವ ಜಾಗವನ್ನು ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿದೆ. ಕುಮಟಾ, ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಕೇಂದ್ರ ಸ್ಥಳದಲ್ಲಿದ್ದು ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಿಗೂ ಸಮೀಪದಲ್ಲಿದೆ. ಈ ಕಾರಣದಲ್ಲಿ ಇಲ್ಲಿ ಆಸ್ಪತ್ರೆ ನಿರ್ಮಾಣವಾದಲ್ಲಿ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಹೊಸ ಇನಿಂಗ್ಸ್​ ಆರಂಭಿಸಿದ ಆರ್​ಸಿಬಿ ಸ್ಪಿನ್ನರ್​ ವಾನಿಂದು ಹಸರಂಗ, ಐಪಿಎಲ್​ಗೆ ಬರುವುದು ತಡ?

ಮುಖ್ಯಮಂತ್ರಿಗಳಿಂದ ಅಡಿಗಲ್ಲು

ಕಳೆದ ತಿಂಗಳು ಶಿರಸಿಯಲ್ಲಿ ಏರ್ಪಡಿಸಲಾಗಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರದಲ್ಲೇ ಆಸ್ಪತ್ರೆಗೆ ಜಾಗ ನಿಗದಿಪಡಿಸಿ ಅಡಿಗಲ್ಲನ್ನೂ ತಾವೇ ಹಾಕುವುದಾಗಿ ಹೇಳಿದ್ದರು. ಅದರಂತೆ ಮುಂದಿನ ದಿನಗಳಲ್ಲಿ ಕುಮಟಾದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಬೃಹತ್ ಕಾರ್ಯಕ್ರಮವನ್ನು ಕುಮಟಾದಲ್ಲಿಯೇ ಆಯೋಜಿಸಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದ್ದು, ಇದೇ ಸಂದರ್ಭದಲ್ಲಿ ಆಸ್ಪತ್ರೆಗೂ ಅಡಿಗಲ್ಲು ಹಾಕಿಸಲು ಚಿಂತನೆ ನಡೆಸಲಾಗಿದೆ.

Exit mobile version