Site icon Vistara News

Reservation | ಪಂಚಮಸಾಲಿ-ಒಕ್ಕಲಿಗರಿಗೆ 2D ವರ್ಗ ಸೃಜನೆ: 2A ಮೀಸಲಾತಿ ಕುರಿತು ಸರ್ಕಾರದ ಮಹತ್ವದ ನಿರ್ಧಾರ

ಬೆಳಗಾವಿ: ಜನಸಂಖ್ಯೆಯ ದೃಷ್ಟಿಯಿಂದ ಚುನಾವಣೆ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ವೀರಶೈವ ಲಿಂಗಾಯತ ಸಮುದಾಯದ ಉಪಪಂಗಡ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬದಲಿಗೆ ಹೊಸದಾಗಿ 2ಡಿ ವರ್ಗವನ್ನು ಸೃಜಿಸಲು ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ. ಅದೇ ರೀತಿ ಒಕ್ಕಲಿಗ ಸಮುದಾಯಕ್ಕೆ 2ಸಿ ವರ್ಗಕ್ಕೆ ಸೇರ್ಪಡೆ ಮಾಡುವ ತೀರ್ಮಾನ ಮಾಡಲಾಗಿದೆ. ಇನ್ನು ಮುಂದೆ 3ಎ ಹಾಗೂ 3ಬಿ ವರ್ಗ ಇರುವುದಿಲ್ಲ ಎಂದು ಸಭೆಯ ನಂತರ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಮುರುಗೇಶ ನಿರಾಣಿ, ನಾಲ್ಕು ದಶಕಗಳಿಂದ ಮೀಸಲಾತಿಗೆ ಹೋರಾಟ ನಡೆಯುತ್ತಿತ್ತು. ಪಂಚಮಸಾಲಿ ಸಮಾಜವನ್ನು 2Dಗೆ ಸೇರಿಸಿರುವುದು ಸ್ವಾಗತಾರ್ಹ. ಹರಿಹರ, ಕೂಡಲಸಂಗಮ ಸ್ವಾಮೀಜಿಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಸಿಎಂ ಬೊಮ್ಮಾಯಿಯವರಿಗೆ ಧನ್ಯವಾದಗಳು ಎಂದಿದ್ದಾರೆ.

ಸಚಿವ ಆರ್. ಅಶೋಕ್ ಮಾತನಾಡಿ, ಒಕ್ಕಲಿಗ ಸಮಾಜವನ್ನು 3A ನಿಂದ 2Cಗೆ ಸೇರಿಸಲಾಗಿದೆ. ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಿಸಲಾಗುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಲಿದೆ. ಈಗಿರುವ ಯಾವುದೇ ಮೀಸಲಾತಿ ಬದಲಾವಣೆ ಆಗುವುದಿಲ್ಲ. ಸಿಎಂ ಬೊಮ್ಮಾಯಿಯವರಿಗೆ ಧನ್ಯವಾದಗಳು ಎಂದಿದ್ದಾರೆ.

ಸಮುದಾಯದಲ್ಲಿ ಗೊಂದಲ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಕಿತ್ತೂರು ಚೆನ್ನಮ್ಮನ ಬೆಳ್ಳಿ ವಿಗ್ರಹ ನೀಡಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನ ಮಾಡಲಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. ಇದಕ್ಕಾಗಿ ಬೆಳ್ಳಿ ವಿಗ್ರಹವನ್ನೂ ಸಿದ್ಧಪಡಿಸಲಾಗಿದೆ. ಇದೀಗ ಹೊಸದಾಗಿ 2ಡಿ ವರ್ಗ ಸೃಜಿಸಲು ಕೈಗೊಂಡಿರುವ ನಿರ್ಧಾರದಿಂದ ಸಮುದಾಯ ಗೊಂದಲಕ್ಕೀಡಾಗಿದೆ.

ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ | ಬೀಸೋ ದೊಣ್ಣೆಯಿಂದ 7 ದಿನ ತಪ್ಪಿಸಿಕೊಂಡ ಬೊಮ್ಮಾಯಿ ಸರ್ಕಾರ; ತಾಯಿ ಮೇಲೆ ಆಣೆ ಮಾಡಿದ್ದಾರೆ ಎಂದ ಯತ್ನಾಳ್‌

Exit mobile version