ವಿಧಾನಪರಿಷತ್: ಸಾರಿಗೆ ವಾಹನಗಳು ರಾತ್ರಿ ವೇಳೆ ಸಂಚಾರಕ್ಕಾಗಿ ಹೆಡ್‌ಲೈಟ್ ಅಳವಡಿಸಿಕೊಳ್ಳಲಾಗುತ್ತದೆ. ಈ ಲೈಟ್‌ನ ಬೆಳಕು ವಾಹನ ಸಂಚರಿಸಲು ಸಾಕಾಗುವಷ್ಟು ಇರಬೇಕೆ ವಿನಃ ಎದುರಿನಿಂದ ಬರುತ್ತಿರುವ ವಾಹನ ಸವಾರರ ಕಣ್ಣು ಕುಕ್ಕುವಂತಿರಬಾರದು. ಅದಕ್ಕಾಗಿ ಸರ್ಕಾರ ತಪಾಸಣೆ ನಡೆಸಿ ದಂಡ ವಿಧಿಸುತ್ತಿದೆ.
ಈ ಕುರಿತು ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಉತ್ತರ ನೀಡಿದ್ದಾರೆ. ವಾಹನಗಳಿಗೆ ಪ್ರಖರವಾದ ಹೆಡ್‌ಲೈಟ್ ಅಳವಡಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಶ್ರೀರಾಮುಲು, ನಿರ್ದಿಷ್ಟವಾಗಿ ಈ ಕುರಿತು ಗಮನಕ್ಕೆ ಬಂದಿಲ್ಲ. ಆದರೆ ಎದುರಿನಿಂದ ಆಗಮಿಸುವ ವಾಹನ ಸವಾರರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ.
ಹೈಬೀಮ್ ಲೈಟ್‌ಗಳನ್ನು ಉಪಯೋಗಿಸದಂತೆ ಅರಿವು ಮೂಡಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ, ಒಂದು ಬಾರಿಗೆ 500 ರೂ. ದಂಡ ವಿಧಿಸಲಾಗುತ್ತಿದೆ. 2019ರಲ್ಲಿ 7,414 ಪ್ರಕರಣಗಳು, 2020ರಲ್ಲಿ 2312 ಪ್ರಕರಣಗಳು, 2021ರಲ್ಲಿ 1492 ಪ್ರಕರಣಗಳು ಹಾಗೂ 2022ರಲ್ಲಿ ಆಗಸ್ಟ್‌ವರೆಗೆ 703 ಪ್ರಕರಣಗಳು ದಾಖಲಾಗಿವೆ ಎಂದು ಉತ್ತರಿಸಿದ್ದಾರೆ.
ತಲಾ 500 ರೂ. ದಂಡದಂತೆ, ಎಲ್‌ಇಡಿ ಮತ್ತು ಹೈ ಬೀಮ್ ಹೆಡ್‌ಲೈಟ್ ಹಾಕಿದವರಿಂದ ಸರ್ಕಾರ ಸುಮಾರು 59 ಲಕ್ಷ ರೂ. ಸಂಗ್ರಹ ಮಾಡಿದಂತಾಗಿದೆ.
ಇದನ್ನೂ ಓದಿ | ತಿಪ್ಪೂರ್ ಗೇಟ್ ಬಳಿ ಎಚ್‌ಡಿಕೆ ಬೆಂಗಾವಲು ವಾಹನ ಅಪಘಾತ, ಮೂವರಿಗೆ ಗಾಯ