ಹಾಸನ: ಶತಮಾನಗಳ ಇತಿಹಾಸವುಳ್ಳ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಸ್ವರ್ಣ ಗೌರಿ ದೇಗುಲದಲ್ಲಿನ ಸ್ವರ್ಣ ಗೌರಿ ಮಹೋತ್ಸವಕ್ಕೆ (Gowri Habba) ವಿವಾದದ ಛಾಯೆ ಸುತ್ತಿಕೊಂಡಿದ್ದು, ಗ್ರಾಮಸ್ಥರು ಹಾಗೂ ಕೋಡಿ ಮಠದ ನಡುವಿನ ಸಂಘರ್ಷ ತಾರಕಕ್ಕೇರಿದೆ. ದೈವ ಕ್ಷೇತ್ರದಲ್ಲಿ ಉಂಟಾಗಿದ್ದ ಉದ್ವಿಗ್ನ ತಿಳಿಯಾಗಿದ್ದರೂ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಸ್ವರ್ಣ ಗೌರಿ ದೇಗುಲದ ಉಸ್ತುವಾರಿ ಸಂಬಂಧ ಕೋಡಿ ಮಠ ಕೋರ್ಟ್ ಮೆಟ್ಟಿಲೇರಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯೇ ಗ್ರಾಮಸ್ಥರು ಪೂಜೆ ನೆರವೇರಿಸಿದ್ದರು. ಬಳಿಕ ದೇಗುಲಕ್ಕೆ ಕೋಡಿಮಠದ ಕಿರಿಯ ಶ್ರೀಗಳಾದ ಚೇತನಾ ದೇವರು ಸ್ವಾಮೀಜಿಗಳು ಬಂದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ವರ್ಣಗೌರಿ ಪ್ರತಿಷ್ಠಾಪನೆಗೆ ಅಡ್ಡಿ
ಶ್ರೀಮಠದ ವತಿಯಿಂದಲೂ ಪ್ರತ್ಯೇಕವಾಗಿ ಸ್ವರ್ಣಗೌರಿ ಪ್ರತಿಷ್ಠಾಪನೆ ಮಾಡಲು ಬಂದಿದ್ದ ಕೋಡಿಮಠದ ಕಿರಿಯ ಸ್ವಾಮಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಸ್ವಾಮೀಜಿ ಕಾರು ಸುತ್ತುವರಿದು ತಡೆಯೊಡ್ಡಿದರು. ಅಲ್ಲದೆ, ದೇಗುಲದತ್ತ ಯಾವುದೇ ಕಾರಣಕ್ಕೂ ಬರಬಾರದು ನೂರಾರು ಜನ ತಡೆದರು. ಇದಕ್ಕೆ ಮಠದ ಕಡೆಯವರೂ ತೀವ್ರ ಪ್ರತಿರೋಧ ಒಡ್ಡಿದ್ದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಯಿತು. ಅಲ್ಲದೆ, ವಾಪಸ್ ಹೋಗುವಂತೆ ಕಾರನ್ನು ಕುಟ್ಟಿ ಆಗ್ರಹಿಸಿದರು.
ಇದನ್ನೂ ಓದಿ | ಹಾಸನ ಬಿಜೆಪಿ ಮುಖಂಡನ ಮನೆಗೆ ಪಿಸ್ತೂಲ್ ಹಿಡಿದು ದುಷ್ಕರ್ಮಿಗಳ ಲಗ್ಗೆ, ಧೈರ್ಯದಿಂದ ಹಿಮ್ಮೆಟ್ಟಿಸಿದ ಮಹಿಳೆ
ಹಸ್ತಕ್ಷೇಪ ಮಾಡದಿರಲು ಆಗ್ರಹ
ಪರಿಸ್ಥಿತಿ ಕೈಮೀರುತ್ತಿದ್ದಂತೆ ಹೆಚ್ಚುವರಿ ಪೊಲೀಸರ ನಿಯೋಜನೆಗೆ ಕ್ರಮವಹಿಸಲಾಯಿತು. ಸ್ವಾಮೀಜಿಯವರನ್ನು ಗ್ರಾಮದಲ್ಲಿಯೇ ಇದ್ದ ಮಠವೊಂದಕ್ಕೆ ಕಳುಹಿಸಿಕೊಟ್ಟ ಪೊಲೀಸರು, ಪರಿಸ್ಥಿತಿಯನ್ನು ಶಾಂತಗೊಳಿಸಲು ಯತ್ನಿಸಿದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು.
ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, “ಸ್ವಾಮೀಜಿಗಳು ಗ್ರಾಮದಲ್ಲಿ ಒಮ್ಮತ ಮೂಡಿಸದೆ, ಎರಡು ಗುಂಪುಗಳನ್ನಾಗಿ ಮಾಡಿದ್ದಾರೆ. ಇವರು ನಮ್ಮ ಗ್ರಾಮದ ದೇವಾಲಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೌರಿ ಉತ್ಸವಕ್ಕೆ ವಿವಾದದ ಮಸುಕು
ಮಾಡಾಳು ಗ್ರಾಮದ ಸ್ವರ್ಣ ಗೌರಿ ದೇಗುಲದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರ ಹತ್ತು ದಿನ ಗೌರಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತದೆ. ಈ ಪರಂಪರೆ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಶ್ರದ್ಧೆ ಹಾಗೂ ಭಕ್ತಿಯಿಂದ ಒಂಬತ್ತು ದಿನ ಪೂಜೆ ಸಲ್ಲಿಸಿ ಹತ್ತನೇ ದಿನ ಗೌರಿ ವಿಸರ್ಜನೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳು ಸಂಪನ್ನಗೊಳ್ಳುತ್ತದೆ. ಅಷ್ಟೂ ದಿನ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆಯುತ್ತಿದ್ದರು.
ಹಿಂದಿನಿಂದಲೂ ಕೋಡಿ ಮಠದ ಶ್ರೀಗಳ ನೇತೃತ್ವದಲ್ಲಿಯೇ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನೆರವೇರುತ್ತಿದ್ದವು. ಈ ದೇವಾಲಯದಲ್ಲಿ ಗೌರಿ ಪ್ರತಿಷ್ಠಾಪನೆಯೇ ಪ್ರಮುಖವಾಗಿದೆ. ಇಲ್ಲಿ ಗೌರಿ ಹಬ್ಬದ ದಿನದಂತೆ ಪ್ರತಿಷ್ಠಾಪನೆ ಮಾಡಿ, ಒಂಭತ್ತು ದಿನಗಳ ಪೂಜೆ ಮಾಡಿ ಹತ್ತನೇ ದಿನ ಗ್ರಾಮದಲ್ಲಿ ಕಲ್ಯಾಣಿಯಲ್ಲಿ ಗೌರಮ್ಮನನ್ನು ವಿಸರ್ಜನೆ ಮಾಡಲಾಗುತ್ತದೆ. ಪ್ರತಿಷ್ಠಾಪನೆ ಮಾಡುವುದರಿಂದ ಹಿಡಿದು ವಿಸರ್ಜನೆ ಮಾಡುವವರೆಗೂ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಸ್ವಾಮೀಜಿಗಳ ಸಮ್ಮುಖದಲ್ಲಿಯೇ ನಡೆಯುತ್ತಿತ್ತು. ಆದರೆ, ದೇವಾಲಯದ ಹಣ ಹಾಗೂ ಆಸ್ತಿಯನ್ನು ತಮ್ಮ ವಶಕ್ಕೆ ಪಡೆಯಲು ಮಠ ಮುಂದಾಗಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ವೈಮನಸ್ಸಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಡಿ ಮಠವು ಕೋರ್ಟ್ ಮೆಟ್ಟಿಲೇರಿತ್ತು. ಅರಸೀಕೆರೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ | Gowri Habba 2022 | ಗೌರಿ ಹಬ್ಬದಂದು ಸ್ವರ್ಣಗೌರಿ ವ್ರತ ಹೇಗೆ ಮಾಡಬೇಕು?